Dr.M.C Sudhakar Profile: ಚಿಕ್ಕಬಳ್ಳಾಪುರದಲ್ಲಿ ಮತ್ತೆ ಡಾಕ್ಟರ್‌ಗೆ ಮಂತ್ರಿ ಪಟ್ಟ: ಸುಧಾಕರ್ ರಾಜಕೀಯ ಪರಿಚಯ
ಚಿಕ್ಕಬಳ್ಳಾಪುರ, ಮೇ.27:ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಶಾಸಕ ಡಾ.ಎಂ.ಸಿ ಸುಧಾಕರ್ ಅವರಿಗೆ ಸಚಿವ ಸ್ಥಾನ ದೊರಕಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಎಂ.ಸಿ ಸುಧಾಕರ್ ಪ್ರವೃತ್ತಿಯಲ್ಲಿ ರಾಜಕಾರಣಿ, ಚಿಂತಾಮಣಿ ಕ್ಷೇತ್ರದ ಶಾಸಕ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾವಿ ನಾಯಕ. ಮೂರು ಬಾರಿ ಶಾಸಕ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂಸಿ ಆಂಜನೇಯ ರೆಡ್ಡಿ ಅವರ ಮೊಮ್ಮಗನಾಗಿರುವ ಇವರು, 5 ಬಾರಿ ಶಾಸಕರಾಗಿದ್ದ ಎಂ.ಸಿ ಚೌಡರೆಡ್ಡಿ ಅವರ ಪುತ್ರನಾಗಿದ್ದು, ತಮ್ಮ ಕುಟುಂಬದ ರಾಜಕಾರಣದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಪಕ್ಷಕ್ಕಿಂತ ಕ್ಷೇತ್ರದಲ್ಲಿ ತಮ್ಮದೇ ಆದ ವ್ಯಯಕ್ತಿಕ ವರ್ಚಸ್ಸು ಹೊಂದಿದ್ದು, ಎರಡು ಬಾರಿ ಶಾಸಕರಾಗಿದ್ದು, ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದರೂ. 2023ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ
ಡಾ. ಎಂ.ಸಿ ಸುಧಾಕರ್ ಶಿಕ್ಷಣ ಮತ್ತು ವೃತ್ತಿ ಜೀವನ
ಎಂ.ಸಿ. ಸುಧಾಕರ್ ಅವರು 1994ರಲ್ಲಿ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯಲ್ಲಿ ದಂತ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, ಎಂಡಿಎಸ್ ಕೂಡ ಮಾಡಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ದಂತ ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಮಾರುತಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಪೆಸರ್ ಆಗಿ ಸೇವೆ ಸಲ್ಲಿಸಿದ್ದರು.
ಸುಧಾಕರ್ ಅವರು ಕರ್ನಾಟಕ ಚಾಪ್ಟರ್ ಆಫ್ ಭಾರತೀಯ ದಂತ ವೈದ್ಯಕೀಯ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯಕ್ಕೆ ಬಂದ ಬಳಿಕ ಕ್ಷೇತ್ರದಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದು, ಜನರ ಜೊತೆ ಸಂಪರ್ಕದಲ್ಲಿದ್ದಾರೆ.
ಡಾ.ಎಂ.ಸಿ ಸುಧಾಕರ್ ರಾಜಕೀಯ ಹಿನ್ನೆಲೆ
1999ರಲ್ಲಿ ಚಿಂತಾಮಣಿಯಲ್ಲಿ ತಂದೆ ಚೌಡರೆಡ್ಡಿ ಅವರು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಬಳಿಕ ಡಾ.ಎಂ.ಸಿ ಸುಧಾಕರ್ ಅವರು ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ. 2004ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಸುಧಾಕರ್ ಅವರು ಗೆಲುವು ಸಾಧಿಸಿ, ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು. ಬಳಿಕ 2008ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದರು.
ಆದರೆ, 2013ರಲ್ಲಿ ಡಾ ಎಂಸಿ ಸುಧಾಕರ್‌ಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಯಿತು. ಈ ಹಿನ್ನೆಲೆ ಕಾಂಗ್ರೆಸ್ ತೊರೆದ ಸುಧಾಕರ್ 2013ರಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದರು. ಪಕ್ಷೇತರರಾಗಿ ಸ್ಪರ್ಧಿಸಿದರು ಕೂಡ ಕೇವಲ ಒಂದೂವರೆ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಸುಧಾಕರ್‌ಗೆ ಟಿಕೆಟ್ ನೀಡದೇ ಬೇರೆಯವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತ್ತು. 2016ರ ಫೆಬ್ರವರಿಯಲ್ಲಿ ಎಂಸಿ ಸುಧಾಕರ್ ವಾಪಸ್ ಕಾಂಗ್ರೆಸ್‌ಗೆ ಸೇರಿದರು. ಆದರೆ, 2018ರಲ್ಲಿ ಮತ್ತೆ ಟಿಕೆಟ್ ಸಿಗದ ಕಾರಣ ಪಕ್ಷ ತೊರೆದು, ಭಾರತೀಯ ಪ್ರಜಾ ಪಕ್ಷದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಮತ್ತೆ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸುಧಾಕರ್ ಭರ್ಜರಿ ಗೆಲುವು ಸಾಧಸಿದ್ದರು. ಚಿಂತಾಮಣಿ ಕ್ಷೇತ್ರದಲ್ಲಿ ಡಾ.ಎಂ.ಸಿ.ಸುಧಾಕರ್ 97,324 ಮತಗಳನ್ನು ಪಡೆದಿದ್ದರೆ,ಜೆಡಿಎಸ್ ಅಭ್ಯರ್ಥಿ ಜೆ.ಕೆ.ಕೃಷ್ಣಾರೆಡ್ಡಿ 68,272 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಜಿ.ಎನ್.ವೇಣುಗೋಪಾಲ್ 21,711 ಮತಗಳನ್ನು ಪಡೆದಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದ ಚಿಂತಾಮಣಿ ಸಾಮಾನ್ಯ ವಿಧಾನಸಭಾ ಕ್ಷೇತ್ರವು ಕೋಲಾರ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಚಿಕ್ಕಬಳ್ಳಾಪುರ-ಕೋಲಾರದ ಮಧ್ಯಭಾಗದಲ್ಲಿರುವ ಚಿಂತಾಮಣಿಯು ಅವಿಭಜಿತ ಕೋಲಾರ ಜಿಲ್ಲೆಯಾಗಿದ್ದಾಗಿನಿಂದಲೂ ಪ್ರಮುಖ ವ್ಯಾಪಾರ ವಹಿವಾಟಿನ ಕ್ಷೇತ್ರವಾಗಿದೆ. ಚಿನ್ನದ ವ್ಯವಹಾರ ಸೇರಿದಂತೆ ಆರ್ಥಿಕತೆಯಲ್ಲಿ ಉಳಿದ ತಾಲ್ಲೂಕುಗಳಿಗಿಂತ ಮುಂದಿರುವ ಚಿಂತಾಮಣಿಯು ಕಂಬಾಲಪಲ್ಲಿ ದಲಿತ ಹತ್ಯಾಕಾಂಡದ ಕುಖ್ಯಾತಿಗೂ ಒಳಗಾಗಿದೆ.












Click it and Unblock the Notifications