500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮರಾಜ್ಯ ನಿರ್ಮಾಣ: ಡಾ. ಕೆ. ಸುಧಾಕರ್
ಚಿಕ್ಕಬಳ್ಳಾಪುರ: ಪ್ರಭು ಶ್ರೀ ರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ ಸಿಕ್ಕಿದ್ದು, ಮೊದಲನೇ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆ ಆಗಿದೆ. ಈ ಸಂಭ್ರಮಕ್ಕೆ ಪೂರಕವಾಗಿ ರಾಮರಾಜ್ಯ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ವಿಕಸಿತ ಭಾರತದ ಸಂಕಲ್ಪವೇ ಈ ಪ್ರಯತ್ನದ ಹೆಜ್ಜೆ ಆಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ತಿಳಿಸಿದರು.
ಮರ್ಯಾದಾ ಪುರುಷೋತ್ತಮ, ಆದರ್ಶ ಪ್ರಜಾಪಾಲಕ ಪ್ರಭು ಶ್ರೀರಾಮಚಂದ್ರನು ಅವತರಿಸಿದ ಪವಿತ್ರ ದಿನವೇ ಶ್ರೀರಾಮ ನವಮಿ. 500 ವರ್ಷಗಳ ವನವಾಸದ ನಂತರ ಪ್ರಭು ಶ್ರೀರಾಮಚಂದ್ರ ಈಗ ತನ್ನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರದಲ್ಲಿ ನೆಲೆಸಿದ್ದಾನೆ. ಈ ವರ್ಷದ, ಶ್ರೀ ರಾಮ ನವಮಿ ಎಲ್ಲ ಭಾರತೀಯರಿಗೂ ಅತ್ಯಂತ ವಿಶೇಷ ದಿನ ಎಂದು ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಪ್ರತಿಪಾದಿಸಿದರು.

ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ!
ಧರ್ಮ ವಿರೋಧಿಗಳ ಕುತಂತ್ರದಿಂದ ಪ್ರಭು ಶ್ರೀರಾಮ 500 ವರ್ಷ ಕಾಲ ಒಂದು ಸಣ್ಣ ಟೆಂಟ್‌ನಲ್ಲಿ ವನವಾಸ ಅನುಭವಿಸಬೇಕಾಗಿ ಬಂದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಶ್ರೀರಾಮನ ವನವಾಸಕ್ಕೆ ಮುಕ್ತಿ ಸಿಕ್ಕಿದೆ. ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗಿರುವುದು ಐನೂರು ವರ್ಷಗಳ ಹೋರಾಟದ ಫಲವಾಗಿದೆ. ಬಹುಶಃ ಇಡೀ ಜಗತ್ತಿನ ಇತಿಹಾಸದಲ್ಲಿ ಒಂದು ಧಾರ್ಮಿಕ ಕ್ಷೇತ್ರಕ್ಕೆ ಈ ಮಟ್ಟದ ನಿರಂತರ ವಿರೋಧ, ಹೋರಾಟ, ತ್ಯಾಗ, ಬಲಿದಾನ ಎಲ್ಲಿಯೂ ನಡೆದಿಲ್ಲ ಎಂದರು, ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು.
ಹಿಂದೂ ಪುಣ್ಯಕ್ಷೇತ್ರಗಳ ಅಭಿವೃದ್ಧಿ
ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಕೋಟ್ಯಂತರ ಬಡವರನ್ನು ಬಡತನದಿಂದ ಮೇಲೆಕ್ಕೆತ್ತಿದ್ದಾರೆ. ಜೊತೆಗೆ ಹಿಂದೂ ಪುಣ್ಯಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ. ಮೋದಿ ಅವರದ್ದು ಪರಂಪರೆಯ ತಳಹದಿಯಲ್ಲಿ ನವ ಭಾರತ ಕಟ್ಟುವ ಪ್ರಯತ್ನ. ಬೇರೆ ದೇಶಗಳಲ್ಲಿ ಅಭಿವೃದ್ಧಿ ಅಂದರೆ ಕೇವಲ ನಗರೀಕರಣ ಅಥವಾ ಕೈಗಾರೀಕರಣ ಆಗಿರಬಹುದು. ಭಾರತದಲ್ಲಿ ಹಾಗಲ್ಲ ಸನಾತನ ಧರ್ಮವೇ ದೇಶದ ಆತ್ಮ. ಇಲ್ಲಿ ಎಷ್ಟೇ ಅಭಿವೃದ್ಧಿ, ಆಧುನಿಕತೆ ಬಂದರೂ ಹಿಂದೂ ಧರ್ಮ, ಸನಾತನ ಸಂಸ್ಕೃತಿ, ಪರಂಪರೆ ಮುಂದುವರಿಕೆ ಇಲ್ಲದೆ ಅಭಿವೃದ್ಧಿ ಅರ್ಥ ಕಳೆದುಕೊಳ್ಳುತ್ತದೆ ಎಂದರು ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು.
ಬಿ.ವೈ.ವಿಜಯೇಂದ್ರ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ಮುನ್ನಡೆದಿದ್ದಾರೆ. ಇದು ರಾಮರಾಜ್ಯ ಪರಿಕಲ್ಪನೆ ಸಾಕಾರಗೊಳಿಸುವ ಹೆಜ್ಜೆ. ಶ್ರೀರಾಮನ ಆಡಳಿತ ಆದರ್ಶವನ್ನೇ ಪ್ರಧಾನಿ ಮೋದಿ ಅವರು ತಮ್ಮ ಆಡಳಿತದಲ್ಲೂ ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ಭಾರತ ಅಚ್ಚರಿ ಎನಿಸುವ ಮಟ್ಟಿಗೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಧರ್ಮರಕ್ಷಕ, ಸಕಲ ಸದ್ಗುಣ ಸಂಪನ್ನನಾದ ಪ್ರಭು ಶ್ರೀರಾಮಚಂದ್ರನ ಜೀವನವೇ ನಮಗೂ ರಾಮ ಮಾರ್ಗ ಎಂದು ಹೇಳಿದರು ಡಾ. ಸುಧಾಕರ್. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಡಾ.ಕೆ.ಸುಧಾಕರ್ ಅವರ ಪರ ಮತ ಯಾಚಿಸಲು ರೋಡ್ ಶೋ ನಡೆಸಿದರು.












Click it and Unblock the Notifications