ಸಿಎಂ ವಿರುದ್ಧ ಸಿದ್ದರಾಮಯ್ಯ ಹೇಳಿಕೆ: ಸುಧಾಕರ್, ಅಶ್ವಥ್ ನಾರಾಯಣ ಗರಂ
ಬೆಂಗಳೂರು, ಜನವರಿ 04: ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಸೈದ್ಧಾಂತಿಕ, ವಿಷಯಾಧಾರಿತ ವಿಚಾರಗಳ ಮೇಲಿರಬೇಕೆ ಹೊರತು ಅದು ವೈಯಕ್ತಿಕ ನಿಂದನೆಗಳಾಗಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತೀಕ್ಷ್ಣವಾಗಿ ಪ್ರತಿಕ್ರಿಯೆಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ ನಾಯಿ ಪದ ಬಳಕೆ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ನವರ ಹೇಳಿಕೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಸೇರಿದಂತೆ ಅನೇಕರು ಖಂಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಾನವರು ಬಳಸಿರುವ ಭಾಷೆ ಅವರಿಗೆ ಖಂಡಿತ ಶೋಭೆ ತರುವಂಥದ್ದಲ್ಲ. ಟೀಕೆ ಟಿಪ್ಪಣಿಗಳು ಸೈದ್ಧಾಂತಿಕವಾರಿಬೇಕೇ ಹೊರತು ವೈಯಕ್ತಿಕವಾಗಿ ಅಲ್ಲ. ನಾಡಿನ ಮುಖ್ಯಮಂತ್ರಿ ಸ್ಥಾನವನ್ನು ನಿಂದನೆ ಮಾಡಿದರೆ ಅದು ಇಡೀ ರಾಜ್ಯದ ಆರೂವರೆ ಕೋಟಿ ಜನತೆಗೆ ಅಪಮಾನ ಎಸಗಿದಂತೆ. ಪವಿತ್ರ ಸಂವಿಧಾನಕ್ಕೆ ಅಗೌರವ ತೋರಿದಂತೆ. ಇನ್ನೂ ಮುಂದಾದರೂ ರಾಜಕೀಯ ಟೀಕೆ ಟಿಪ್ಪಣಿಗಳು ಸೌಜನ್ಯದ ಎಲ್ಲೆ ಮೀರದಿರಲಿ ಎಂದು ತಿಳಿಸಿದರು.

ಕೀಳುಮಟ್ಟದ ಹೇಳಿಕೆ ರೋಗಗ್ರಸ್ತ ಮನಸ್ಸಿನ ಸಂಕೇತ
ಇದೇ ರೀತಿ ಐಟಿ ಬಿಟಿ ಸಚಿವ ಡಾ.ಅಶ್ವಥ್ ನಾರಾಯಣ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮಾಡಿ ಟೀಕೆ ಅತ್ಯಂತ ಕೀಳು ಮಟ್ಟದ್ದಾಗಿದೆ. ಇದು ಅವರ ರೋಗಗ್ರಸ್ತ ಮನಸ್ಸಿನ ಸಂಕೇತವಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಪ್ರಜಾಪಭುತ್ವದಲ್ಲಿ ಆರೋಗ್ಯಕರ ಟೀಕೆ ಟಿಪ್ಪಣಿಗಳು ಸ್ವಾಗತಾರ್ಹವಾಗಿವೆ. ಆದರೆ, ಒಬ್ಬ ಮಾಜಿ ಮುಖ್ಯಮಂತ್ರಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ಮಾತನಾಡುವುದು ಅಸಂಸದೀಯ ಮತ್ತು ಅನಾರೋಗ್ಯಕರ ಬೆಳವಣಿಗೆ ಆಗಿದೆ ಎಂದರು.
ಕಾಂಗ್ರೆಸ್‌ನಲ್ಲಿ ಗುಲಾಮರಂತಿದ್ದಾರೆ
ವಾಸ್ತವದಲ್ಲಿ ತಮ್ಮ ಪಕ್ಷದ ಹೈಕಮಾಂಡಿಗೆ ದಾಸ್ಯ ಪ್ರವೃತ್ತಿಯಿಂದ ನಡೆದುಕೊಳ್ಳುವ ದುರ್ಗುಣ ಇರುವುದು ಕಾಂಗ್ರೆಸ್ಸಿನಲ್ಲಿ. ಅದರ ಹೈಕಮಾಂಡ್ ಸಂಸ್ಕೃತಿ ವಿರುದ್ಧ ದನಿ ಎತ್ತಿದ ಕೀರ್ತಿ ಬಿಜೆಪಿಗೆ ಇದೆ. ಇದನ್ನು ಅರಿಯದೆ ಸಿದ್ದರಾಮಯ್ಯ ನವರು ತಮ್ಮ ನಾಯಕರನ್ನು ಮೆಚ್ಚಿಸಲು ಅಸಂಬದ್ಧವಾಗಿ ಮಾತನಾಡಿದ್ದಾರೆ. ಇದು ಸಮಸ್ತ ಕನ್ನಡಿಗರಿಗೆ ಮತ್ತು ಜನಾದೇಶಕ್ಕೆ ಮಾಡಿರುವ ಅವಮಾನವಾಗಿದೆ.

ಕಾಂಗ್ರೆಸ್ಸಿನಲ್ಲಿ ಗುಲಾಮರಂತೆ ಇರುವ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕೇ ವಿನಾ ನಾಲಿಗೆಯನ್ನು ಹರಿಬಿಡುವ ದುಸ್ಸಾಹಸಕ್ಕೆ ಮುಂದಾಗಬಾರದು. ಅವರು ಇದೇ ಪ್ರವೃತ್ತಿ ಮುಂದುವರಿಸಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಮುಂದೆ ನೀವು ನಾಯಿ ಮರಿ ತರ ಇರುತ್ತಾರೆ. ಮೋದಿ ಕಂಡರೆ ಗಡಗಡ ಅಂತಾರೆ ಎಂದು ಮುಖ್ಯಮಂತ್ರಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.












Click it and Unblock the Notifications