ಬೋಧಕರೂ ಕಲಿಯಬೇಕು, ಅವರ ಸಾಮರ್ಥ್ಯದ ಬಗ್ಗೆಯೂ ನೂತನ ಶಿಕ್ಷಣ ನೀತಿಯಲ್ಲಿ ನಿಗಾ!
ಬೆಂಗಳೂರು, ಆ. 21: ಶತಾಯ ಗತಾಯ ದೇಶದಲ್ಲಯೇ ಮೊದಲು ಇದೇ ವರ್ಷ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಪ್ರಯತ್ನ ನಡೆಸಿರುವ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಶನಿವಾರ ಧಾರವಾಡಕ್ಕೆ ತೆರಳಿ ಅಲ್ಲಿನ ಸಾಹಿತ್ಯ ಕ್ಷೇತ್ರದ ಪ್ರಮುಖರೊಂದಿಗೆ ಸಂವಾದ ನಡೆಸಿದ್ದಾರೆ.
ಸಾಹಿತಿಗಳೊಂದಿಗೆ ಸಂವಾದ ನಡೆಸಿದ ಡಾ. ಅಶ್ವಥ್ ನಾರಾಯಣ, ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳನ್ನು ವಿವರಿಸುವ ಮೂಲಕ ಸಂಶಯಗಳನ್ನು ನಿವಾರಿಸಿದರು. ಶಿಕ್ಷಣ ನೀತಿಯಲ್ಲಿರುವ ಅಂಶಗಳನ್ನು ಇದೇ ವೇಳೆ ಸಾಹಿತಿಗಳು ಒಪ್ಪಿಕೊಂಡಿದ್ದಾರೆ. ಜೊತೆಗೆ ಶಿಕ್ಷಣ ನೀತಿ ಜಾರಿಗೆ ಪೂರ್ಣ ಸಹಕಾರ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.
ಈ ವರ್ಷದಿಂದಲೇ ಜಾರಿ ಆಗುತ್ತಿರುವ ಈ ನೀತಿಯಲ್ಲಿ ಮಾತೃಭಾಷಾ ಕಲಿಕೆಗೆ ಇರುವ ಮಹತ್ವವನ್ನು ಸಾಹಿತಿಗಳಿಗೆ ವಿವರಣೆ ಕೊಡಲಾಗಿದೆ. ಜೊತೆಗೆ ಬಹು ಆಯ್ಕೆಯ ಕಲಿಕೆಯಿಂದ ಆಗುವ ಬದಲಾವಣೆಗಳ ಬಗ್ಗೆಯೂ ಸಂವಾದದಲ್ಲಿ ವಿವರವಾಗಿ ಚರ್ಚಿಸಲಾಯಿತು.

ಎರಡು ವರ್ಷ ಮಾತೃಭಾಷೆ ಕಲಿಕೆ ಕಡ್ಡಾಯ!
"ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿ ವಿದ್ಯಾರ್ಥಿ ಒಂದಲ್ಲ ಎರಡು ವರ್ಷ ತನ್ನ ಮಾತೃಭಾಷೆಯಲ್ಲಿ ಕಡ್ಡಾಯವಾಗಿ ಕಲಿಯಬೇಕು. ಈ ಮೂಲಕ ಮಾತೃಭಾಷಾ ಕಲಿಕೆಗೆ ಅತ್ಯುನ್ನತ ಮಹತ್ವ ಕೊಡಲಾಗುತ್ತದೆ. ಇಷ್ಟೇ ಅಲ್ಲದೆ, ಕನ್ನಡ ಭಾಷೆಯಲ್ಲೇ ತಾಂತ್ರಿಕ ಶಿಕ್ಷಣ ನೀಡುತ್ತಿದ್ದೇವೆ. ಇದರಲ್ಲಿ ಕಲಿತವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣ ನೀಡುವಲ್ಲಿ ರಿಯಾಯಿತಿ ಇಲ್ಲವೇ ಮೀಸಲು ಕೊಡಲಾಗುವುದು" ಎಂದು ಸಚಿವ ಡಾ. ಅಶ್ವಥ್ ನಾರಾಯಣ ತಿಳಿಸಿದರು.
ಸ್ಥಳೀಯ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಕೊಡಬೇಕಾದರೆ ಬಂಡವಾಳ ಹೆಚ್ಚು ಹೂಡಬೇಕು. ಇದಕ್ಕೆ ತಂತ್ರಜ್ಞಾನದ ನೆರವು ಬೇಕು. ಕೋಡಿಂಗ್ ಮತ್ತಿತರರ ಕೆಲಸ ಆಗಬೇಕಾಗುತ್ತದೆ. ಇದಕ್ಕೂ ಅವಕಾಶ ಕಲ್ಪಿಸುವ ವ್ಯವಸ್ಥೆ ಆಗಲಿದೆ ಎಂದರು.

ಹತ್ತು ವರ್ಷಕ್ಕೊಮ್ಮೆ ಶಿಕ್ಷಣ ನೀತಿ ಬದಲಾಗಲಿ
ಸಂವಾದದಲ್ಲಿ ಮಾತನಾಡಿ ಲೇಖಕಿ ಮಾಲತಿ ಪಟ್ಟಣಶೆಟ್ಟಿ, "ಶಿಕ್ಷಣ ನೀತಿ ಕನಿಷ್ಠ ಹತ್ತು ವರ್ಷಕ್ಕಾದರೂ ಬದಲಾಗಬೇಕು. 35 ವರ್ಷದವರೆಗೂ ನೀತಿ ಬದಲಾಗಿಲ್ಲ ಎನ್ನುವ ಊಹೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಆಗಾಗ್ಗೆ ಆಗಬೇಕು" ಎಂದರು.
ಮಾಲತಿ ಪಟ್ಟಣಶೆಟ್ಟಿ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, "ಬದಲಾವಣೆಯ ತಳಹದಿಯ ಮೇಲೆಯೇ ಹೊಸ ಶಿಕ್ಷಣ ನೀತಿಯನ್ನು ತರಲಾಗಿದೆ. ಅಗತ್ಯಬಿದ್ದಾಗ ಬದಲಾವಣೆ ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿ ಇರಿಸಲಾಗಿದೆ. ಇನ್ನು ಮುಂದೆ ಶಿಕ್ಷಣ ನೀತಿ ಬದಲಾವಣೆಗೆ ದಶಕಗಳ ಕಾಲ ಕಾಯುತ್ತಾ ಕೂರಬೇಕಿಲ್ಲ" ಎಂದರು.

ಬೋಧಕರ ಮೌಲ್ಯಮಾಪನ, ಸಾಮರ್ಥ್ಯದ ಬಗ್ಗೆ ನಿಗಾ
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಾಹಿತಿ ಪ್ರೊ. ಹರ್ಷ ಡಂಬಳ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಬೋಧಕರ ಸಾಮರ್ಥ್ಯ ಮತ್ತು ಮೌಲ್ಯಮಾಪನದ ಬಗ್ಗೆ ನಿರಂತರ ನಿಗಾ ಇಡುವ ವ್ಯವಸ್ಥೆ ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.
ಅದಕ್ಕೆ ಉತ್ತರಿಸಿದ ಸಚಿವರು, "ಬೋಧಕರ ಮೌಲ್ಯಮಾಪನ ಎನ್ನುವುದು ನಿರಂತರವಾಗಿ ಆಗುತ್ತದೆ. ಗುಣಮಟ್ಟಕ್ಕೆ ತಕ್ಕಂತೆ ಅವರು ಅಪ್‌ಡೇಟ್ ಆಗಲೇಬೇಕು. ಜತೆಗೆ, ಅವರು ಶಿಕ್ಷಣ ನೀತಿಯಲ್ಲಿ ನಿಗಧಿ ಮಾಡಿರುವ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಈ ಬಗ್ಗೆ ಯಾವುದೇ ರಾಜಿ ಇಲ್ಲ. ಇದಲ್ಲದೆ, ಶಿಕ್ಷಣ ವ್ಯವಸ್ಥೆಯ ನಿರ್ವಹಣೆ ಹಾಗೂ ಸರಕಾರಿ ವ್ಯವಸ್ಥೆಯಲೂ ಆಮೂಲಾಗ್ರ ಸುಧಾರಣೆ ತರಲಾಗುತ್ತಿದೆ" ಎಂದರು.

ಶಿಕ್ಷಣಕ್ಕೆ ಈಗ ತುಂಬಾ ಕಡಿಮೆ ಹಣ ಒದಗಿಸಲಾಗುತ್ತಿದೆ
ಪ್ರೊ ಪ್ರಕಾಶ ಗರೂಡ ಅವರು ಮಾತನಾಡಿ, ಶಿಕ್ಷಣಕ್ಕೆ ರಾಜ್ಯದ ಒಟ್ಟು ದೇಶಿಯ ಉತ್ಪನ್ನದಲ್ಲಿ ಶೇಕಡಾ 6ರಷ್ಟು ಮೀಸಲಿಡಬೇಕು ಎಂದು ಶಿಕ್ಷಣ ನೀತಿ ಹೇಳುತ್ತದೆ. ಆದರೆ, ಅಷ್ಟು ಮೊತ್ತದ ಹಣಕಾಸು ಮೀಸಲಿಡಲು ಸಾಧ್ಯವೇ? ಈಗ ತುಂಬಾ ಕಡಿಮೆ ಹಣವನ್ನು ಶಿಕ್ಷಣಕ್ಕೆ ಒದಗಿಸಲಾಗುತ್ತಿದೆ ಎಂದರು.
ಈ ಪ್ರಶ್ನೆಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವರು; ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಜೆಟ್ ಸಭೆಗಳಲ್ಲೂ ಚರ್ಚೆ ನಡೆಸಲಾಗಿ ಹೆಚ್ಚು ಅನುದಾನ ಕೇಳಲಾಗಿದೆ. ಹೊಸ ಶಿಕ್ಷಣ ನೀತಿ ಜಾರಿ ನಂತರ ಸಂಪನ್ಮೂಲದ ಅಗತ್ಯ ಹೆಚ್ಚಿರುತ್ತದೆ. ಈ ಬಗ್ಗೆ ನಾನು ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತನಾಡುತ್ತೇನೆ ಎಂದರು.












Click it and Unblock the Notifications