ಫಲಕೊಟ್ಟ ಬಿಜೆಪಿ ಹೊಸ ಮುಖದ ತಂತ್ರ; ಆಗ ಡಾಕ್ಟರ್, ಈಗ ಶಾಸಕ!
ಗದಗ, ಮೇ 15; ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ರಾಜ್ಯದ ಆಡಳಿತ ಪಕ್ಷವಾಗಿದ್ದ ಬಿಜೆಪಿ ಹೀನಾಯ ಸೋಲು ಕಂಡಿದೆ. ಆದರೆ ಪಕ್ಷದ ಹೊಸ ಮುಖಗಳಿಗೆ ಟಿಕೆಟ್ ನೀಡಿದ ತಂತ್ರ ಕೆಲವು ಕಡೆ ಫಲ ನೀಡಿದೆ. ಸರ್ಕಾರಿ ವೈದ್ಯರಾಗಿದ್ದವರು ಈಗ ಶಾಸಕರಾಗಿ ವಿಧಾನಸೌಧಕ್ಕೆ ಹೊರಟಿದ್ದಾರೆ.
ಹೌದು ಇದು ಗದಗ ಜಿಲ್ಲೆಯ ಶಿರಹಟ್ಟಿ (ಎಸ್‌ಸಿ) ಕ್ಷೇತ್ರದ ಅಚ್ಚರಿಯ ಚುನಾವಣಾ ಫಲಿತಾಂಶ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿದ್ದ ಡಾ. ಚಂದ್ರು ಲಮಾಣಿ ರಾಜೀನಾಮೆ ಅಂಗೀಕಾರವಾಗದೆ ಅವರು ನಾಮಪತ್ರ ಸಲ್ಲಿಕೆಗೆ ತೊಡಕಾಗಿತ್ತು. ಅಂತಿಮ ಹಂತದಲ್ಲಿ ರಾಜೀನಾಮೆ ಅಂಗೀಕಾರಗೊಂಡಿತು, ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿಯೂ ಗೆದ್ದು ಬಂದರು.

ಡಾ. ಚಂದ್ರು ಲಮಾಣಿ ಈಗ ಶಾಸಕರು; ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಡಾ. ಚಂದ್ರು ಲಮಾಣಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದರು. ಆಗಸ್ಟ್ 21, 2021ರಂದು ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಬಿಜೆಪಿ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಡಾ. ಚಂದ್ರು ಲಮಾಣಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.
ಆದರೆ ಲೋಕಾಯುಕ್ತದಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು. ಆದ್ದರಿಂದ ರಾಜೀನಾಮೆ ಅಂಗೀಕಾರಗೊಂಡಿರಲಿಲ್ಲ. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡುವ ಚಿಂತನೆ ನಡೆಸಿತ್ತು. ನಾಮಪತ್ರ ಸಲ್ಲಿಕೆಗೆ ಮೊದಲು ರಾಜೀನಾಮೆ ಅಂಗೀಕಾರವಾಯಿತು. ಚುನಾವಣಾ ಕಣಕ್ಕಿಳಿದ ಅವರು ಗೆಲುವು ಕಂಡಿದ್ದಾರೆ.

ಡಾ. ಚಂದ್ರು ಲಮಾಣಿ 73600 ಇವಿಎಂ ಮತಗಳು, 889 ಅಂಚೆ ಮತಗಳ ಮೂಲಕ 74489 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ಸಿದ್ದಲಿಂಗಪ್ಪ ದೊಡ್ಮನಿ 45969 ಮತಗಳನ್ನು ಪಡೆದು ಪೈಪೋಟಿ ನೀಡಿದರು. ಕಾಂಗ್ರೆಸ್ ಅಭ್ಯರ್ಥಿ ಸುಜಾತ ನಿಂಗಪ್ಪ ದೊಡ್ಮನಿ 34791 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದಾರೆ.
34 ವರ್ಷದ ಡಾ. ಚಂದ್ರು ಲಮಾಣಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಅತಿ ಕಿರಿಯಲ್ಲಿ ಒಬ್ಬರು. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ರಾಮಣ್ಣ ಲಮಾಣಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅವರನ್ನು ಬಿಟ್ಟು ಚಂದ್ರು ಲಮಾಣಿಗೆ ಟಿಕೆಟ್ ನೀಡಿತ್ತು.
ನಿಯಮಗಳು ಏನು ಹೇಳುತ್ತದೆ?; ಕೇಂದ್ರ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಸರ್ಕಾರಿ ಉದ್ಯೋಗಿ ಚುನಾವಣೆಗೆ ಸ್ಪರ್ಧಿಸಬೇಕಾದರೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಬೇಕು. ಆದರೆ ಚಂದ್ರು ಲಮಾಣಿ ರಾಜೀನಾಮೆ ನೀಡಿದ್ದರು ಅದು ಅಂಗೀಕಾರಗೊಳ್ಳದ ಕಾರಣ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ರಾಜೀನಾಮೆ ಅಂಗೀಕಾರಗೊಂಡ ಬಳಿಕ ಅವರು ನಾಮಪತ್ರ ಸಲ್ಲಿಸಿದ್ದರು.
ಚಂದ್ರು ಲಮಾಣಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದರೂ ಅದು ಅಂಗೀಕಾರವಾಗಿಲ್ಲ. ಆದ್ದರಿಂದ ಅವರು ಸರ್ಕಾರಿ ಉದ್ಯೋಗಿ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯಕ್ತರಿಗೆ ಪತ್ರವನ್ನು ಬರೆದಿದ್ದರು. ಲೋಕಾಯುಕ್ತದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಿಂದ ನುಣಿಚಿಕೊಳ್ಳಲು ರಾಜೀನಾಮೆ ನೀಡಿದ್ದಾರೆ. ಆದರೆ ಅದು ಅಂಗೀಕಾರವಾಗಿಲ್ಲ ಎಂದು ಪತ್ರದಲ್ಲಿ ವಿರಣೆ ನೀಡಿದ್ದರು.
ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಚಂದ್ರು ಲಮಾಣಿ ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಮಯ 2021ರ ಉಪ ನಿಯಮ 3ರ ಸಾಮಾನ್ಯ ತತ್ವಗಳು (1) (2) (3) ಮತ್ತು ಉಪ ನಿಯಮ 5 ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಪತ್ರದಲ್ಲಿ ಹೇಳಿದ್ದರು. ಆದರೆ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿತ್ತು.












Click it and Unblock the Notifications