ಮೈತ್ರಿಯಲ್ಲಿ ಬಿರುಕು; ಚನ್ನಪಟ್ಟಣದಲ್ಲಿ ಯೋಗೇಶ್ವರ್ ಬಂಡಾಯ: ಡಿ ಕೆ ಶಿವಕುಮಾರ್ ನಿರ್ಧಾರವೇನು?
ಬೆಂಗಳೂರು,ಅಕ್ಟೋಬರ್ 15: ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಮಲ-ದಳ ಮೈತ್ರಿ ನಾಯಕರು 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರು. ಇದೀಗ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಬಿರುಕು ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಚನ್ನಪಟ್ಟಣದಲ್ಲಿ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಬಂಡಾಯದ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಈ ವಿಚಾರವಾಗಿ ನಾನು ಮಾಧ್ಯಮಗಳ ಮಾತನ್ನು ಕೇಳುವುದಿಲ್ಲ. ಅವರ ಪಕ್ಷಗಳಿಂದ ಅಭ್ಯರ್ಥಿ ಅಂತಿಮ ಆಯ್ಕೆಯಾಗಲಿ. ಅವರು ಕೈಗೊಳ್ಳುವ ನಿರ್ಧಾರದ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಿ, ಆಗ ನಾನು ಅದನ್ನು ನಂಬುತ್ತೇನೆ ಎಂದು ತಿಳಿಸಿದರು.

ಚುನಾವಣಾ ಆಯೋಗ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಿಸಿದ್ದು, ಉಪಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗೂ ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು, ಮೂರು ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆ ಘೋಷಣೆಯಾಗಿದ್ದು, ಪಕ್ಷದ ತಯಾರಿ ಹೇಗಿದೆ ಎಂಬ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಮಾತನಾಡಿ, ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ಕ್ಷೇತ್ರಗಳಲ್ಲಿ ಶಾಸಕ ಸ್ಥಾನ ಖಾಲಿಯಾದಾಗಿನಿಂದಲೇ ನಮ್ಮ ತಯಾರಿ ಆರಂಭವಾಗಿದೆ.
ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಉತ್ತರಿಸಿ, ಈ ಚುನಾವಣೆಗಳಲ್ಲಿ ನಾವೇ ಅಭ್ಯರ್ಥಿಗಳು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹೇಳಿದರು.
ಸಂಡೂರಿಗೆ 1200 ಕೋಟಿ ಅನುದಾನ
ಸಂಡೂರು ಕ್ಷೇತ್ರದ ಜನ ಸದಾ ನಮಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದೀರಿ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಕಳೆದ ಒಂದೂವರೆ ವರ್ಷದಲ್ಲಿ 1200 ಕೋಟಿ ಅನುದಾನವನ್ನು ಈ ಕ್ಷೇತ್ರಕ್ಕೆ ನೀಡಿದ್ದಾರೆ. ಆಮೂಲಕ ಸಂಡೂರಿನ ಬಡ ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿದ್ದೇವೆ. ಅದರ ಭಾಗವಾಗಿ ಇಂದು ಹಲವು ಯೋಜನೆಗಳ ಶಂಕುಸ್ಥಾಪನೆ ಮಾಡಿದ್ದೇವೆ. 200 ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ಇಲ್ಲಿರುವ ವಸತಿ ಯೋಜನೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ಕನಕಪುರದಲ್ಲಿಯೂ ಆಗಿಲ್ಲ. ಬದಲಿಗೆ ಸಂಡೂರಿನಲ್ಲಿ ಆಗಿವೆ.
ಕಳೆದ ಒಂದೂವರೆ ವರ್ಷದಲ್ಲಿ ನಾನು ಕನಕಪುರಕ್ಕೆ ತೆಗೆದುಕೊಂಡು ಹೋಗಿರುವುದಕ್ಕಿಂತ ಹೆಚ್ಚಿನ ಅನುದಾನವನ್ನು ತುಕಾರಾಂ ಅವರು ಸಂಡೂರಿಗೆ ತಂದಿದ್ದಾರೆ. ಆಮೂಲಕ ಅವರು ನಿಮ್ಮ ಋಣ ತೀರಿಸುತ್ತಿದ್ದಾರೆ. 30 ಕೋಟಿ ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನುಡಿದಂತೆ ನಡೆದು, ಕೊಟ್ಟ ಮಾತು ಉಳಿಸಿಕೊಂಡಿದೆ. ಈ ತಾಲೂಕಿನಲ್ಲಿ ಕೇವಲ 1,200 ಮನೆಗಳು ಮಾತ್ರ ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ. ಉಳಿದ ಎಲ್ಲಾ ಮನೆಗಳಿಗೆ ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ.
ಇನ್ನು ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆ ಮೂಲಕ 1.21 ಕೋಟಿ ಮಹಿಳೆಯರಿಗೆ 2 ಸಾವಿರ ಹಣ ನೀಡಲಾಗುತ್ತಿದೆ. ಒಂದೆರಡು ತಿಂಗಳು ಹೆಚ್ಚುಕಮ್ಮಿಯಾದರೂ ಕಳೆದ ಒಂದುವರೆ ವರ್ಷದಿಂದ ನೀಡಲಾಗುತ್ತಿದೆ. ಇಂತಹ ಯಾವುದಾದರೂ ಒಂದು ಕಾರ್ಯಕ್ರಮವನ್ನು ಬಿಜೆಪಿಯ ಯಡಿಯೂರಪ್ಪ, ಬೊಮ್ಮಾಯಿ ಅವರು ನೀಡಿದ್ದಾರಾ? ಈ ಎಲ್ಲಾ ಕಾರ್ಯಕ್ರಮವನ್ನು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂದರು.












Click it and Unblock the Notifications