DCM DK Shivakumar: ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿ ಸೋಲಿಗೆ ಕಾರಣ ತಿಳಿಸಿದ ಡಿ ಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 23: ಚನ್ನಪಟ್ಟಣದ ಫಲಿತಾಂಶವನ್ನು ನಿಖಿಲ್ ಕುಮಾರಸ್ವಾಮಿ ಅವರ ಸೋಲು ಎಂದು ನಾನು ಹೇಳುವುದಿಲ್ಲ. ಅವರ ತಂದೆ ಕುಮಾರಸ್ವಾಮಿ ಅವರು ಆ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದರು. ಅವರು ಆ ಕ್ಷೇತ್ರದಲ್ಲಿ ಬಿಟ್ಟು ಹೋದ ಗುರುತಿಗೆ ಜನ ತೀರ್ಪು ನೀಡಿದ್ದಾರೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದರು.
ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸೋಲು ಎಂದು ಹೇಳುವುದಿಲ್ಲ. ಮುಖ್ಯಮಂತ್ರಿಯಾಗಿ ಅವರು ಆ ಕ್ಷೇತ್ರದಲ್ಲಿ ಮಾಡಿರುವ ಕೆಲಸದ ಮೇಲೆ ಮತ ನೀಡಿದ್ದಾರೆ. ಸಂಡೂರಿನಲ್ಲಿ ಮೊದಲಿನಿಂದ ಕಾಂಗ್ರೆಸ್ ಗೆಲ್ಲುತ್ತಾ ಬಂದಿದೆ. ಈ ಮೂರು ಕ್ಷೇತ್ರಗಳಲ್ಲಿ ಗ್ಯಾರಂಟಿ ಹಾಗೂ ಅಭಿವೃದ್ಧಿಗೆ ಜನ ಮತ ನೀಡಿದ್ದಾರೆ. ವಿರೋಧ ಪಕ್ಷಗಳ ನಾಯಕರ ಟೀಕೆ ನೀವು ಗಮನಿಸಿದ್ದೀರಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾನು ಈ ಹಿಂದೆ ಹೇಳಿದ್ದೆ. ಇಂದು ಅದು ಸಾಬೀತಾಗಿದೆ ಎಂದು ಹೇಳಿದರು.

ವಿರೋಧ ಪಕ್ಷಗಳ ನಾಯಕರು ಮುಖ್ಯಮಂತ್ರಿಗಳು, ಮಂತ್ರಿಗಳ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು. ಸತ್ಯಾಂಶವಿದ್ದರೆ ನಮ್ಮನ್ನು ತಿದ್ದುವ ಪ್ರಯತ್ನ ಮಾಡಲಿ. ಆದರೆ ಸುಳ್ಳನ್ನೇ ಮನೆ ದೇವರು ಎಂದು ಪರಿಗಣಿಸಿ ಜನರ ತಲೆಗೆ ತುಂಬಲು ಹೋದರೆ ಕೆಲಸಕ್ಕೆ ಬರುವುದಿಲ್ಲ. ಬೊಮ್ಮಾಯಿ ಅವರ ಕ್ಷೇತ್ರದಲ್ಲಿ 14 ಸಾವಿರ ಮತಗಳ ಅಂತರ ಬಂದಿದೆ. ಈ ಚುನಾವಣೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದಲ್ಲಿ ನಡೆದಿದೆ. ಈ ಭಾಗದಲ್ಲಿ ಆಯ್ಕೆಯಾದ ಕೇಂದ್ರ ಮಂತ್ರಿಗಳು ಎನ್ ಡಿಎ ಮೈತ್ರಿ ಹೆಸರಲ್ಲಿ ಚುನಾವಣೆ ಮಾಡಿದ್ದರು" ಎಂದರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಈ ಕೈ ಅಧಿಕಾರದಲ್ಲಿದ್ದ ಕಾರಣ ಜನರ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆ ಜಾರಿ ಮಾಡಲಾಯಿತು. ಸಿದ್ದರಾಮಯ್ಯ ಅವರ ಸರ್ಕಾರದ ಪರಿಶುದ್ಧ ಆಡಳಿತಕ್ಕೆ ಜನ ಬೆಂಬಲ ನೀಡುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಅಪೂರ್ವ ಸಹೋದರರ ಚುನಾವಣೆಯಲ್ಲ. ಇದು ಜನರ ಚುನಾವಣೆ, ಜನರ ಗೆಲುವು. ಕ್ಷೇತ್ರದಲ್ಲಿ ಜನ ಪ್ರಾರಂಭದಿಂದಲೂ ಜನರು ತಮ್ಮ ಬದುಕು ಕಟ್ಟಿಕೊಳ್ಳಬೇಕು. ಅಭಿವೃದ್ಧಿ ನೋಡಬೇಕು ಎಂದು ಜೆಡಿಎಸ್ ಗೆ ಅವಕಾಶ ನೀಡದೆ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಸಂಡೂರಿನಲ್ಲಿ ಗೆಲ್ಲಲು ವಿಶೇಷ ನಾಯಕತ್ವ ನೀಡಿದ್ದರು. ಅದಕ್ಕೆ ಜನ ಉತ್ತರ ನೀಡಿದ್ದಾರೆ. ಈಗ ನಮ್ಮ ಸರ್ಕಾರದ ಸಂಖ್ಯಾಬಲ 138 ಆಗಿದೆ. ಇನ್ನು ಬೇರೆ ಲೆಕ್ಕಾಚಾರದ ಬಗ್ಗೆ ಈಗ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಈ ಗೆಲುವಿಗೆ ಗ್ಯಾರಂಟಿ ಯೋಜನೆಗಳು, ಸಿದ್ದರಾಮಯ್ಯ ಅವರ ನಾಯಕತ್ವ ಹಾಗೂ ನಮ್ಮ ಕಾರ್ಯಕರ್ತರು ಮತ್ತು ಶಾಸಕರ ಪರಿಶ್ರಮ ಕಾರಣ. ಅವರ ಹಗಲು ರಾತ್ರಿ ಶ್ರಮಿಸಿದ್ದರ ಫಲ ಇದು. ಇಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರಷ್ಟೇ ಮುಖ್ಯವಲ್ಲ. ಈ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಆಡಳಿತ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಮಾಧ್ಯಮಗಳು ನಮಗೆ ಮುಖಭಂಗ ಎಂದು ಬರೆದಿದ್ದರು. ಅವರಿಗೆ ತೋಚಿದ್ದು ಅವರು ಬರೆದಿದ್ದರು. ಈಗ ಫಲಿತಾಂಶದ ಸಂಖ್ಯೆಗಳೇ ಉತ್ತರ ನೀಡಿವೆ. ಮೂರು ಕ್ಷೇತ್ರದ ಮತದಾರರಿಗೆ ಸಾಷ್ಟಾಂಗ ನಮನ ಅರ್ಪಿಸುತ್ತೇನೆ. ನೀವು ಕೊಟ್ಟಿರುವ ಈ ಸಾಲವನ್ನು ಜವಾಬ್ದಾರಿಯುತ ಆಡಳಿತದ ಮೂಲಕ ತೀರಿಸುತ್ತೇವೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ಹೀಗೆ ನಮ್ಮ ಒಗ್ಗಟ್ಟು ಮುಂದುವರಿಸಿಕೊಂಡು ರಾಜ್ಯದ ಜನರ ಸೇವೆ ಮಾಡುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications