ಕಾವೇರಿ ನೀರು ಉಳಿಸಲು ಡಿಕೆ ಶಿವಕುಮಾರ್ ಹೊಸ ನಡೆ, ಏನದು ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರುವ ಬಿಡುವುದನ್ನು ಖಂಡಿಸಿ ಕರ್ನಾಟಕ ಬಂದ್ ನಡೆಯುತ್ತಿರುವ ಈ ಹೊತ್ತಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾವೇರಿ ನೀರನ್ನು ಉಳಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ರಾಜ್ಯದಲ್ಲಿ ಕಾವೇರಿ ನದಿಗೆ ಮೇಕೆದಾಟು ಜಲಾಶಯ ಯೋಜನೆಗೆ ವೇಗ ನೀಡುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರು ತಮ್ಮ ಇಲಾಖೆಯಲ್ಲಿ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗವನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಈ ವಿಭಾಗವು ಯೋಜನೆಯ ಗ್ರೌಂಡ್ ಲೆವಲ್ ಕೆಲಸವನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ಡಿಎಚ್ ವರದಿ ಮಾಡಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ, ಮೇಕೆದಾಟು ಯೋಜನೆಗೆ 5,252 ಹೆಕ್ಟೇರ್ ಪ್ರದೇಶ ಬೇಕಾಗುತ್ತದೆ. ಇದರಲ್ಲಿ 4,996 ಹೆಕ್ಟೇರ್ ಮುಳುಗಡೆಯಾಗಲಿದ್ದು, ಉಳಿದ ಭಾಗ ಜಲಾಶಯ ನಿರ್ಮಾಣಕ್ಕೆ ಅಗತ್ಯವಿದೆ ಎಂದು ತಿಳಿದು ಬಂದಿದೆ. ಈ ಮುಳುಗಡೆ ಪ್ರದೇಶದಲ್ಲಿ ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿದ 3,181 ಹೆಕ್ಟೇರ್ ಭೂಮಿ, 1,869 ಹೆಕ್ಟೇರ್ ಮೀಸಲು ಅರಣ್ಯ ಹಾಗೂ 201 ಹೆಕ್ಟೇರ್ ಕಂದಾಯ ಭೂಮಿ ಕೂಡ ಸೇರಿದೆ.
ಎಂಜಿನಿಯರಿಂಗ್ ವಿಭಾಗವು ಈ ನಿಶ್ಚಿತಗಳನ್ನು ಮ್ಯಾಪಿಂಗ್ ಮಾಡುವ ಮೂಲಕ ನೆಲಮಟ್ಟದ ಕೆಲಸವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಕಾವೇರಿ ನದಿಯಿಂದ ಮತ್ತೆ 18 ದಿನಗಳ ಕಾಲ ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶವನ್ನು ಗಮನದಲ್ಲಿಟ್ಟುಕೊಂಡು ಮೇಕೆದಾಟು ಯೋಜನೆಗೆ ಅನುಮೋದನೆ ಪಡೆಯುವ ಬಗ್ಗೆ ಶಿವಕುಮಾರ್ ಮುಂದಾಗುತ್ತಿದ್ದಾರೆ.
ನೆರೆಯ ರಾಜ್ಯವು ವಾರ್ಷಿಕವಾಗಿ ತನ್ನ ಪಾಲಿನ ನೀರನ್ನು ಸುಪ್ರೀಂನಲ್ಲೂ ವಾದ ಮಾಡಿ ಪಡೆಯುತ್ತಿರುವಾಗ ಯೋಜನೆಗೆ ಏಕೆ ಆಕ್ಷೇಪಿಸುತ್ತೀರಿ ಎಂದು ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಕೇಳಿದೆ ಎಂದು ಅವರು ತಿಳಿಸಿದ್ದಾರೆ. ಮೇಕೆದಾಟು ಯೋಜನೆಯು ಜಲವಿದ್ಯುತ್ ಉತ್ಪಾದನೆಯ ಜೊತೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಜಲಾಶಯವು ಶಿವನಸಮುದ್ರದಿಂದ ರಾಜ್ಯದ ಗಡಿಯವರೆಗೆ ನದಿಯ ನೈಸರ್ಗಿಕ ಇಳಿಜಾರನ್ನು ಬಳಸಿಕೊಳ್ಳುತ್ತದೆ. ಅಂದಾಜಿನ ಪ್ರಕಾರ, ಯೋಜನೆಗೆ 9,000 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಕೇಂದ್ರದಿಂದ ಅನುಮೋದನೆಗಳು ಬಾಕಿಯಿದ್ದರೂ ಸಹ ಯೋಜನೆಗೆ 1,000 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ಡಿಕೆ ಶಿವಕುಮಾರ್ ಅವರ ಯೋಜನೆಗೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮೈಸೂರಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರು ಹಂಚಿಕೆ ವಿವಾದಕ್ಕೆ ಮೇಕೆದಾಟು ಯೋಜನೆಯೇ ಪರಿಹಾರ ಎಂದು ತಿಳಿಸಿದ್ದರು.
ಹಿಂದೆ ರಾಜ್ಯದಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ 24,000 ಕ್ಯೂಸೆಕ್ ನೀರನ್ನು ಕರ್ನಾಟಕ ಬಿಡಬೇಕು. ಈ ಕುರಿತು ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ ವೇಳೆ ಡಿಕೆ ಶಿವಕುಮಾರ್ ಸಿಎಂ ಸ್ಟಾಲಿನ್ ಅವರಿಗೆ ನಾವು ನೀರು ಬಿಡುತ್ತೇವೆ ನೀವು ನಮ್ಮ ಮೇಕೆದಾಟು ಯೋಜನೆಗೆ ಸಹಕಾರ ನೀಡಿ ಎಂದು ಹೇಳಿದ್ದರು.












Click it and Unblock the Notifications