ಕೆ.ಎನ್.ರಾಜಣ್ಣ ಬೆನ್ನಲ್ಲೇ ಕಾಂಗ್ರೆಸ್‌ನ ಮತ್ತೊಬ್ಬ ಶಾಸಕನಿಗೆ ಬಿಗ್ ಶಾಕ್
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ಸಂಪುಟದಿಂದ ಕೈಬಿಡಲಾಗಿದೆ. ಸ್ವಪಕ್ಷದ ವಿರುದ್ಧ ರಾಜಣ್ಣ ಹೇಳಿಕೆ ನೀಡಿದ ಕಾರಣಕ್ಕೆ ಈ ಕ್ರಮ ಕೈಗೊಂಡಿದೆ. ರಾಜಣ್ಣ ಸಿಎಂ ಸಿದ್ದರಾಮಯ್ಯಗೆ ಆಪ್ತ ಹಾಗೂ ಪ್ರಭಾವಿ ಸಚಿವರಾದರೂ ಹೈಕಮಾಂಡ್ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದು ಉಳಿದವರಿಗೆ ಎಚ್ಚರಿಕೆಯ ಪಾಠ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಮತ್ತೊಬ್ಬ ಶಾಸಕನಿಗೆ ಬಿಗ್ ಶಾಕ್ ನೀಡಿದೆ.
ಹೌದು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಏನೂ ಮಾತನಾಡಬಾರದು ಎಂದು ಹೈಕಮಾಂಡ್ ಖಡಕ್ ಆಗಿ ಹಲವು ಬಾರಿ ಹೇಳಿದೆ. ಆದರೂ ಕೆಲವರು ರಾಜ್ಯದಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮನಬಂದಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದರು. ಕೆಎನ್ ರಾಜಣ್ಣ ಕೂಡ ಹಲವು ಬಾರಿ ಈ ವಿಚಾರವಾಗಿ ಪ್ರಸ್ತಾಪಿಸಿದ್ದರು. ಈ ಈ ಎಲ್ಲವನ್ನೂ ಪರಿಗಣಿಸಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ. ಇದೀಗ ಈ ಸರದಿಯಲ್ಲಿ ಕಾಂಗ್ರೆಸ್‌ನ ಶಾಸಕ ಬಸವರಾಜು ವಿ.ಶಿವಗಂಗಾ ಹೆಸರು ಮುನ್ನೆಲೆಗೆ ಬಂದಿದೆ.

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜು ವಿ.ಶಿವಗಂಗಾ ಮೇಲೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಗರಂ ಆಗಿದ್ದಾರೆ. ದಾವಣಗೆರೆಯಲ್ಲಿ ಇಂದು ಮಾತನಾಡಿರುವ ಶಿವಗಂಗಾ ಅವರು ಸಿಎಂ ಅಧಿಕಾರ ಕುರಿತು ಹೇಳಿಕೆ ನೀಡಿದ್ದರು. ಹಲವು ಎಚ್ಚರಿಕೆಗಳ ನಡುವೆಯೂ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ಹೇಳಿಕೆ ಮುಂದುವರೆಸಿರುವ ಶಾಸಕ ಬಸವರಾಜು ಶಿವಗಂಗಾ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
'ಸಿಎಂ ಬದಲಾವಣೆ ಬಗ್ಗೆ ಮಾತಾಡಬಾರದು'
ಸಿಎಂ ಅಧಿಕಾರ ಮತ್ತಿತರ ವಿಚಾರಗಳ ಬಗ್ಗೆ ಯಾರೂ ಮಾತಾಡಬಾರದು. ಶಾಸಕರು ಪಕ್ಷದ ಶಿಸ್ತು ಪಾಲಿಸಬೇಕು. ಚೌಕಟ್ಟು ಮೀರಬಾರದು. ಅನಗತ್ಯ ಹೇಳಿಕೆಗಳನ್ನು ಕೊಟ್ಟು ಗೊಂದಲ ಮೂಡಿಸಬಾರದು ಎಂದು ಈ ಹಿಂದೆಯೇ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಆದರೂ ಶಿವಗಂಗಾ ಅವರು ಮತ್ತೇ ಹೇಳಿಕೆ ನೀಡಿರುವುದು ಪಕ್ಷದ ಶಿಸ್ತಿನ ಉಲ್ಲಂಘನೆ ಆಗುತ್ತದೆ. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.
ಶಾಸಕ ಶಿವಗಂಗಾ ಅವರು ಹಲವು ವಿಚಾರಗಳ ಬಗ್ಗೆ ಇಂದು ಮಾತನಾಡಿದ್ದಾರೆ. ಈ ಹಿನ್ನೆಲೆ ಅವರಿಗೆ ನೋಟಿಸ್ ನೀಡುವುದಾಗಿ ಡಿಸಿಎಂ ಹೇಳಿದ್ದಾರೆ. ರಾಜಣ್ಣ ಅವರನ್ನು ಮಾಜಿ ಸಚಿವ ಶ್ರೀರಾಮುಲು ಬಿಜೆಪಿಗೆ ಆಹ್ವಾನಿಸಿದ್ದರು. ಈ ಬಗ್ಗೆಯೂ ಮಾತನಾಡಿದ್ದ ಅವರು, ರಾಜಣ್ಣ ಕಾಂಗ್ರೆಸ್ನಲ್ಲಿ ಶಿಸ್ತಿನ ಸಿಪಾಯಿ. ಅವರು ಯಾವತ್ತೂ ಪಕ್ಷ ಬಿಟ್ಟು ಹೋಗಲ್ಲ. ಮುಂದೆ ನಮ್ಮ ಜೊತೆಗೆ ಬರುತ್ತಾರೆ ಎಂದಿದ್ದರು. ರಾಜಣ್ಣನವರ ವಿರುದ್ಧ ಹೇಗೆ ಕ್ರಮ ಕೈಗೊಂಡಿದ್ದಾರೋ ಅದೇ ರೀತಿ ಶಾಸಕ ಶಿವಲಿಂಗೇಗೌಡರ ವಿರುದ್ಧವೂ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳಲಿ. ಪಕ್ಷಕ್ಕೆ ಡ್ಯಾಮೇಜ್ ಮಾಡುವ ನಾಯಕರ ಮೇಲೆ ಕ್ರಮ ಜರುಗಿಸಿ ಎಂದು ಆಕ್ರೋಶ ಹೊರಹಾಕಿದ್ದರು. ಈಗ ಅವರಿಗೇ ನೋಟಿಸ್ ಕೊಡಲಾಗುತ್ತಿದೆ.












Click it and Unblock the Notifications