ನಾನು ಈಗ ವೆಜ್ಟೇರಿಯನ್, ಅಶೋಕಣ್ಣಂಗೆ ಇಲ್ಲಿಂದಲೇ ಫ್ರೆಶ್ ಮೀನು ಕಳಿಸ್ತೀನಿ: ಡಿಕೆ ಶಿವಕುಮಾರ್ ತಿರುಗೇಟು
ಮಂಗಳೂರು: ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಚರ್ಚಿಸಲು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಮಾಡಿದ್ದ ಟೀಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಸ್ಯಮಯವಾಗಿ ತಿರುಗೇಟು ನೀಡಿದ್ದಾರೆ.
ಸಚಿವ ಸಂಪುಟ ಸಭೆಯಿಂದ ಕರಾವಳಿ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಸಚಿವರು ಮಂಗಳೂರಿಗೆ ತೆರಳಿ ಮೀನು ಊಟ ಸವಿಯುವುದಷ್ಟೇ ಮಾಡಿದ್ದಾರೆ ಎಂದು ಆರ್. ಅಶೋಕ್ ಟೀಕಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನಾನು ಈಗ ನಾನ್‌ವೆಜ್ ತಿನ್ನುವುದಿಲ್ಲ. ಅಶೋಕ್ ಅವರಿಗೆ ಇಲ್ಲಿಂದಲೇ ತಾಜಾ ಮೀನು ಕಳುಹಿಸಿಕೊಡುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಶನಿವಾರ ಬೆಳಗ್ಗೆ ಮಂಗಳೂರಿನ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಮೀನುಗಾರರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ವಿರೋಧ ಪಕ್ಷ ನಾಯಕ ಅಶೋಕ್ ಅವರಿಗೆ ಮೀನು ತಿನ್ನುವ ಆಸೆಯಾಗಿದೆ. ಅವರಿಗೆ ಮೀನು ಬೇಕಂತೆ. ಮಂಗಳೂರಿನಿಂದಲೇ ಮೀನನ್ನು ಕಳುಹಿಸಿ, ಅವರ ಆಸೆ ತೀರಿಸೋಣ ಎಂದು ತಿರುಗೇಟು ನೀಡಿದರು.
ನಾವು ಕರಾವಳಿ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ನಮ್ಮ ಅಭಿವೃದ್ಧಿಯ ಪ್ರವಾಸದ ಬಗ್ಗೆ ಕುಹಕಿ ಮಾತುಗಳನ್ನು ಆಡುತ್ತಿವೆ. ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಗಳು ಮೀನು ತಿನ್ನೋಕೆ ಮಂಗಳೂರಿಗೆ ಹೋಗಿದ್ದಾರೆ ಎಂದಿದ್ದಾರೆ. ನಾನು ಮೀನು ತಿನ್ನುವುದನ್ನು ಬಿಟ್ಟು ಬಹಳ ವರ್ಷಗಳಾಯಿತು. ಇವರಿಗೆ ಅಭಿವೃದ್ಧಿ ಬೇಕಿಲ್ಲ ಎಂದರು.
ತುಳು ಭಾಷೆ ಈ ಭಾಗದ ಜನರ ಹೆಮ್ಮೆ
ತುಳು ಭಾಷೆ ಈ ಭಾಗದ ಜನರ ಹೆಮ್ಮೆ. ಇದು ಈ ಭಾಗದ ಜನರ ನಿರೀಕ್ಷೆಯಗಿತ್ತು. ಎಲ್ಲಾ ಪಕ್ಷದ ನಾಯಕರು ಇದನ್ನು ಬಯಸಿದ್ದರು. ಹೀಗಾಗಿ ನಮ್ಮ ಸರ್ಕಾರ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಸದ್ಯ 200 ಬೋಟ್ ಗಳಿಗೆ ಡಾಕ್ ವ್ಯವಸ್ಥೆ ಇದ್ದು, ಫಲ್ಗುಣಿ, ನೇತ್ರಾವತಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ತ್ರಿವೇಣಿ ಸಂಗಮ ಜಾಗದಲ್ಲಿ ಬೋಟ್ ಗಳಿಗೆ ಹೊಸ ಡಾಕ್ ಗಳನ್ನು ಮಾಡಿದರೆ ಹೆಚ್ಚಿನ ಬೋಟ್ ಗಳ ನಿಲ್ದಾಣಕ್ಕೆ ಅವಕಾಶವಾಗುತ್ತದೆ. ಇದಕ್ಕಾಗಿ ಡ್ರೆಡ್ಜಿಂಗ್ (ಹೂಳೆತ್ತುವುದು) ಮಾಡಬೇಕಾಗಿದೆ. 25 ವರ್ಷಗಳಿಂದ ಡ್ರೆಡ್ಜಿಂಗ್ ಆಗಿಲ್ಲ, ಎರಡು ನದಿ ಹಾಗೂ ಅಳಿವೆ ಬಾಗಿಲಲ್ಲಿ ಡ್ರೆಡ್ಜಿಂಗ್ ಮಾಡಬೇಕಾಗಿದೆ ಎಂದು ಮೀನುಗರರ ಸಂಘದ ಮಾಜಿ ಅಧ್ಯಕ್ಷ ಚೇತನ್ ಬೆಂಗ್ರೆ ಹಾಗೂ ಮೋಹನ್ ಬೆಂಗ್ರೆ ಅವರು ಸಿಎಂಗೆ ವಿವರಿಸಿದರು.
ಬಂದರಿನ ತಟ ಪ್ರದೇಶದಲ್ಲಿ ಮರಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ತೆಗೆಯಬೇಕು. ಈ ಭಾಗದಲ್ಲಿ ಎಲ್ಲಿ ಆಳವಾದ ಜಾಗ ಇದೆ ಎಂದು ಚಾನಲ್ ಮಾರ್ಕಿಂಗ್ ಬಾಯ್ಸ್ ಗಳನ್ನು ಹಾಕಿದರೆ ಬೋಟ್ ಗಳು ಸುಗಮವಾಗಿ ಸಾಗಲು ನೆರವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವ್ಯಾಪಾರ ಸ್ಥಗಿತ; ಸಿಎಂ ಸಿಡಿಮಿಡಿ
ಇನ್ನು ಸಿಎಂ ಭೇಟಿ ಹಿನ್ನೆಲೆಯಲ್ಲಿ ಬಂದರಿನಲ್ಲಿ ವ್ಯಾಪಾರ ಮಾಡಲು ಮೀನುಗಾರರಿಗೆ ಅವಕಾಶ ನೀಡದಿರುವುದನ್ನು ಗಮನಿಸಿದ ಸಿಎಂ ಸಿಡಿಮಿಡಿಗೊಂಡರು. ಯಾವುದೇ ಕಾರಣಕ್ಕೂ ವ್ಯಾಪಾರ ನಿಲ್ಲಬಾರದು. ಇದರಿಂದ ಮೀನುಗಾರರು ಹಾಗೂ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗಲಿದೆ. ಯಾಕೆ ವ್ಯಾಪಾರ ಪ್ರಾರಂಭಿಸಿ ಎಂದು ಸೂಚಿಸಿದರು.
ವ್ಯಾಪಾರ ನಿಲ್ಲಿಸಿದವರ ವಿರುದ್ಧ ಕ್ರಮ
ನಾನು ಭೇಟಿ ನೀಡಿರುವ ಸಂದರ್ಭದಲ್ಲಿ ಮಂಗಳೂರಿನ ಬಂದರು ಚಟವಟಿಕೆಗಳು ಸ್ಥಬ್ದವಾಗಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಅರಿಯಲು ವರದಿ ನೀಡುವಂತೆ ಡಿಸಿ ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಇದಕ್ಕೆ ಅಧಿಕಾರಿಗಳು ಕಾರಣರಾಗಿದ್ದಾರೆ ಅವರನ್ನು ಅಮಾನತು ಮಾಡುತ್ತೇನೆ. ಅಕ್ರಮಗಳನ್ನು ಮುಚ್ಚಿಡುವ ದೃಷ್ಟಿಯಿಂದ ಈ ಕೆಲಸ ಮಾಡಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನನಗೆ ಯಾವ ಭದ್ರತೆ ಅಗತ್ಯವಿಲ್ಲ. ನಾನು ಮೀನುಗಾರರು, ವರ್ತಕರು ಹಾಗೂ ದೋಣಿಯನ್ನೇ ನಂಬಿರುವ ಮೀನುಗಾರ ಸಮುದಾಯದ ವಾಸ್ತವ ಸ್ಥಿತಿಗತಿಯನ್ನು ಅರಿಯಲು ಬಂದಿದ್ದೇನೆ ಎಂದರು.
ಅಕ್ರಮ, ಕಾನೂನು ಉಲ್ಲಂಘಿಸಿದರೆ ಕ್ರಮ
ದೇಶದ ವಿವಿಧ ಮೂಲೆಗಳಿಂದ ಇಲ್ಲಿಗೆ ಬಂದು ವ್ಯಾಪಾರ ವಹಿವಾಟ ನಡೆಸುತ್ತಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಮೂಲ ಸೌಕರ್ಯಗಳು ದೊರೆಯಬೇಕು, ವಾಹನ ಸಂಚಾರ ಸುಗಮವಾಗಿರಬೇಕು. ಇಲ್ಲಿ ರಸ್ತೆಯನ್ನು ನಿರ್ಬಂದಿಸಿರುವುದು, ಅಕ್ರಮವಾಗಿ ಕಾಂಪೌಂಡ್ ಹಾಕಿರುವುದೆಲ್ಲವೂ ನನ್ನ ಗಮನಕ್ಕೆ ಬಂದಿದೆ.
ಕಾನೂನು ಉಲ್ಲಂಘಿಸಿರುವವರು ಎಷ್ಟೇ ದೊಡ್ಡವರಾಗಿದ್ದರೂ, ಪ್ರಭಾವಶಾಲಿಗಳಾದರು ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು. ಖಾಸಗಿ ಆಸ್ತಿಯಾಗಿದ್ದರೆ ದಾಖಲೆಗಳನ್ನು ನೋಡಿ ಸರ್ಕಾರದ ವಶಕ್ಕೆ ಪಡೆಯುತ್ತೇವೆ. ಅಭಿವೃದ್ಧಿಯನ್ನು ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಣ್ಣ ಮೀನುಗಾರರು ಬೋಟ್ ಗಳನ್ನು ನಿಲ್ಲಿಸುವ ವಿಚಾರವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾ ಮಾಡುತ್ತೇವೆ ಎಂದು ಹೇಳಿದರು.
ಮೀನುಗಾರರದ್ದು ದೊಡ್ಡ ಸಮುದಾಯ. ಎಲ್ಲಾ ವರ್ಗದ ಜನ ಸೌಹಾರ್ದತೆಯಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಶಕ್ತಿ ಕೇಂದ್ರ. ಈ ಸಮುದಾಯಕ್ಕೆ ಪ್ರೋತ್ಸಾಹ ಕೊಡಬೇಕು. ಹೀಗಾಗಿ, ಇಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುವುದು. ನಾವು ಈಗ ಇರುವ 40-50 ಸೀಟುಗಳನ್ನು 200ಕ್ಕೆ ಏರಿಕೆ ಮಾಡಲಾಗುವುದು, ವಿದ್ಯಾಭ್ಯಾಸ, ಸಮುದ್ರ ಮೆಟ್ರೋ, ನೀಲಿ ಆರ್ಥಿಕತೆಗೆ ಒತ್ತು ನೀಡುವ ಕುರಿತು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದರು.
DK Shivakumar: 16 ಸಾವಿರ ಕೋಟಿ ನಿಮ್ಮ ಮೂಲಸೌಕರ್ಯಕ್ಕೆ
ಈಗಾಗಲೇ 32 ಸಾವಿರ ಕೋಟಿ ಮೊತ್ತವನ್ನು ಅಭಿವೃದ್ಧಿಗಾಗಿ ಘೋಷಣೆ ಮಾಡಿದ್ದೇವೆ. ಇದರಲ್ಲಿ 16 ಸಾವಿರ ಕೋಟಿ ಇಲ್ಲಿನ ಗ್ರಾಮೀಣ ಭಾಗದ ರಸ್ತೆ, ನೀರಿನಂಥ ಮೂಲ ಸೌಕರ್ಯಕ್ಕೆ ನೀಡಲಾಗಿದೆ. ಮಂಗಳೂರು, ಕಾರವಾರಗಳಲ್ಲಿ ಎಲ್ಲೆಲ್ಲಿ ವಹಿವಾಟು ನಡೆಯುತ್ತದೆ ಎಂಬುದರ ಬಗ್ಗೆ ಸಮಗ್ರ ವರದಿ ಪಡೆದು, ಸಮುದ್ರ ಪಕ್ಕದ ಮೀನುಗಾರ ಕುಟುಂಬಕ್ಕೆ ಅಗತ್ಯ ತಾಂತ್ರಿಕ ನೆರವನ್ನು ನೀಡಲು ಯೋಜನೆ ರೂಪಿಸುತ್ತೇವೆ.
ಕೆಲವೊಂದು ಸಮಸ್ಯೆಗಳನ್ನು ಮೀನುಗಾರರು ನೇರವಾಗಿ ಹಂಚಿಕೊಳ್ಳಲು ಸಾಧ್ಯವಾಗದೇ ಇರಬಹುದು. ಚಿಂತೆ ಇಲ್ಲ, ಗುಪ್ತ ವರದಿ ತರಿಸಿಕೊಳ್ಳುತ್ತೇನೆ. ಮಾಫಿಯಾಗಳು ಇದೆಯಾ. ತೊಂದರೆ ಆಗುತ್ತಿದೆಯಾ ಎನ್ನುವುದನ್ನು ಗಮನಿಸುತ್ತೇನೆ. ಒಟ್ಟಾರೆ, ನ್ಯಾಯ ಬದ್ಧವಾಗಿ ವ್ಯಾಪಾರ ವಹಿವಾಟು ನಡೆಯಬೇಕು. ಮೀನುಗಾರರ ಸಮುದಾಯ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಗುರಿ ಎಂದರು.
DK Shivakumar: ಕರಾವಳಿ ರಾಜ್ಯ ಮಾತ್ರವಲ್ಲ, ದೇಶದ ಸಂಪತ್ತು
ಕರಾವಾಳಿ ರಾಜ್ಯದ ಸಂಪತ್ತು ಮಾತ್ರವಲ್ಲ ರಾಷ್ಟ್ರದ ಸಂಪತ್ತು ಕೂಡ ಆಗಿದೆ. ಇದನ್ನು ನಾವು ಕಾಪಾಡಬೇಕು. ಮಂಗಳೂರಿಗಾಗಿ ಅಭಿವೃದ್ಧಿಯ ಪಥ ಚಿಂತನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಕರವಾಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದೆ. ಇದಕ್ಕಾ 3-4 ಹೊಸ ನೀತಿಗಳನ್ನು ಜಾರಿ ಮಾಡಲು ಚಿಂತನೆ ನಡೆಸಿದ್ದೇವೆ. ಕರಾವಳಿಯಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹ ಕೊಡಬೇಕು.
ಹೊಸದಾಗಿ ಹೂಡಿಕೆ ಮಾಡುವವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಅವರು ಬಂದಾಗ ಇಳಿದುಕೊಳ್ಳುವುದಕ್ಕೆ ಒಳ್ಳೆಯ ಹೋಟೆಲ್ ಗಳ ನಿರ್ಮಾಣ ಮಾಡಬೇಕು. ಇರುವ ಜಾಗವನ್ನು ಗುರಿತಿಸಿ ಕಾನೂನಿನ ಚೌಕಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ವಿವರಿಸಿದರು.


Click it and Unblock the Notifications
