ರಾಜಕೀಯ ದ್ವೇಷದಿಂದ ಬಿಗ್‌ಬಾಸ್ ಬಂದ್ ಮಾಡಿಸಿದ ಆರೋಪ: ಡಿ.ಕೆ.ಶಿವಕುಮಾರ್ ಫಸ್ಟ್ ರಿಯಾಕ್ಷನ್
ನಟ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕಾರ್ಯಕ್ರಮ ಬಂದ್ ಆಗಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ಇದಕ್ಕೆ ಡಿಕೆ.ಶಿವಕುಮಾರ್ ಅವರ ನಟ್ಟು ಬೋಲ್ಟು ಟೈಟ್ ಹೇಳಿಕೆ ತಳುಕು ಹಾಕಿಕೊಂಡಿದೆ. ಈ ವಿಚಾರವಾಗಿ ಈ ಹಿಂದೆ ಸುದೀಪ್-ಡಿಕೆಶಿ ನಡುವೆ ಟಾಕ್‌ವಾರ್ ಕೂಡ ಆಗಿತ್ತು. ದ್ವೇಷ ಸಾಧಿಸುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್ ಅವರೇ ಕಾರ್ಯಕ್ರಮ ಬಂದ್ ಮಾಡಿಸಿದ್ದಾರೆ ಎಂದು ಜೆಡಿಎಸ್ ಕೂಡ ಆರೋಪ ಮಾಡಿದೆ. ಈ ಎಲ್ಲ ಆರೋಪಗಳ ಬಗ್ಗೆ ಡಿ.ಕೆ.ಶಿವಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್‌ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಡಿಕೆ ಶಿವಕುಮಾರ್ ಎಂದು ಜೆಡಿಎಸ್ ಎಕ್ಸ್‌ನಲ್ಲಿ ಆರೋಪ ಮಾಡಿದೆ. ಇದಕ್ಕೆ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ನವರು ಏನಾದರೂ ರಾಜಕೀಯ ಮಾಡಿಕೊಳ್ಳಲಿ. ನಾನು ಅದರ ಬಗ್ಗೆ ತಲೆ ಕಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯವರು ತಮ್ಮ ಕೆಲಸ ಮಾಡಿದ್ದಾರೆ. ಬಿಗ್‌ಬಾಸ್ ಆಗಲಿ, ಇನ್ನೇನೇ ಆಗಲಿ, ಮನರಂಜನೆ ಅನ್ನೋದು ಇರಬೇಕು. ಖಾಸಗಿಯವರು ಕಾರ್ಯಕ್ರಮಕ್ಕಾಗಿ ಸಿಕ್ಕಾಪಟ್ಟೆ ಹೊಡಿಕೆ ಮಾಡಿರುತ್ತಾರೆ. ಅಲ್ಲಿ ಏನೋ ತಪ್ಪಾಗಿರುತ್ತೆ, ಆ ತಪ್ಪನ್ನು ಸರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು ಎನ್ನುವುದು ನನ್ನ ಸಲಹೆ ಎಂದಿದ್ದಾರೆ ಡಿಸಿಎಂ.
ರಾಜಕೀಯ ಮಾಡುವ ಸಮಯ ಅಲ್ಲ
ಬಿಡಿದಿ ಘಟನೆ ಬಗ್ಗೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಸೀಜ್ ಮಾಡಿದ್ದಾರೆ. ಈ ಬಗ್ಗೆ ನಾನು ಕೂಡ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಅವರು ಏನೆಲ್ಲ ಮಾಡಲು ಸಾಧ್ಯವೋ ಅದನ್ನ ಮಾಡುತ್ತೀವಿ ಎಂದಿದ್ದಾರೆ. ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ. ಇದು ಅನೇಕರ ಉದ್ಯೋಗಕ್ಕೆ ಸಂಬಂಧಿಸಿದ ವಿಚಾರ. ಜನರಿಗೆ ಇಲ್ಲಿ ಮನರಂಜನೆ ಕೂಡ ಮುಖ್ಯ. ನಾನೇ ಹೋಗಿ ಜಾಲಿವುಡ್ ಉದ್ಘಾಟನೆ ಮಾಡಿದ್ದೆ. ಅಲ್ಲಿ ಖಾಸಗಿಯವರು ಬಂಡವಾಳ ಹಾಕಿರುತ್ತಾರೆ. ಆಗಿರುವ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆಯೂ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಏನೇ ಆಗಿದ್ದರೂ ಅವರಿಗೆ ಒಂದು ಅವಕಾಶ ಸಿಗಬೇಕು. ಈಗ ಎದುರಾಗಿರುವ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ನಾನು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಹೇಳಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೂ ಫೋನ್ ಮಾಡಿ ಮಾತನಾಡಿದ್ದೇನೆ. ಈಗ ಜೆಡಿಎಸ್‌ನವರಿಗೆ ನನ್ನ ಬಗ್ಗೆ ಮಾತನಾಡಲಿಲ್ಲ ಅಂದ್ರೆ ನೆಮ್ಮದಿ ಇರಲ್ಲ. ಅವರಿಗೆ ನಿದ್ದೆಯೂ ಬರೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications