ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಉದ್ಯಮಿಗಳು, ಸಾರ್ವಜನಿಕರಿಗೆ ಡಿಕೆಶಿ ಮನವಿ
ಬೆಂಗಳೂರು, ಆಗಸ್ಟ್ 18: ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹದಿಂದ ಲಕ್ಷಾಂತರ ಮಂದಿ ತೊಂದರೆಗೀಡಾಗದ್ದು ಅವರ ನೆರವಿನ ಹಸ್ತ ಚಾಚುವಂತೆ ಉದ್ಯಮಿಗಳು ಹಾಗೂ ಸಾರ್ವಜನಿಕರಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಹಲವರು ನಿರ್ಗತಿಕರಾಗಿದ್ದಾರೆ, ಆಹಾರ, ಬಟ್ಟೆ, ವೈದ್ಯಕೀಯ ಸೌಲಭ್ಯ ಇನ್ನುಳಿದ ಅಗತ್ಯಗಳಿಗೆ ಉದಾರ ನೆರವಿನ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ತಾವು ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೋಕಸಭಾ ಕ್ಷೇತ್ರದ ಸಂಸದರು ಮತ್ತು ರಾಮನಗರ ಕ್ಷೇತ್ರದ ಜನಪ್ರತಿನಿಧಿಗಳನ್ನು ಒಟ್ಟುಗೂಡಿಸಿಕೊಂಡು ರಾಮನಗರ ಜಿಲ್ಲಾಕೇಂದ್ರದಿಂದ ನೆರವಿನ ಸಾಮಗ್ರಿಗಳನ್ನು ರವಾನೆ ಮಾಡುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಕೈಗಾರಿಕೋದ್ಯಮಿಗಳು ನೆರವು ನೀಡಿ
ರಾಮನಗರ ವ್ಯಾಪ್ತಿಯ ಟೆಕ್ಸ್‌ಟೇಲ್ಸ್ ಸಂಸ್ಥೆಗಳ ತಮ್ಮಲ್ಲಿನ ಅನುಪಯುಕ್ತ ಬಟ್ಟೆಗಳನ್ನು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಬೇಕು ಎಂದು ಮನವಿ ಮಾಡಿದ ಅವರು, ಜೊತೆಗೆ ಕೈಗಾರಿಕೋದ್ಯಮಿಗಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಉದಾರವಾಗಿ ಸಹಾಯ ಮಾಡಬೇಕು ಎಂದು ಹೇಳಿದರು.

ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಿರಿ
ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ.ಜೆ.ಶ್ರೀನಿವಾಸ್ ಅವರಿಗೆ ಇದರ ಉಸ್ತುವಾರಿ ವಹಿಸಿದ್ದು, ಅವರ ಸಂಪರ್ಕ ಸಂಖ್ಯೆ 98459701510, 8073 25236 ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಸಂಖ್ಯೆ 2727377, ಸಚಿವರ ಆಪ್ತ ಸಹಾಯಕ ಮೊಬೈಲ್ 9606006699 ಇಲ್ಲಿಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ವೈದ್ಯಕೀಯ ಕಾಲೇಜುಗಳಿಗೆ ಮನವಿ
ವೈದ್ಯಕೀಯ ನೆರವಿಗಾಗಿ ಈಗಾಗಲೇ ಹಲವು ವೈದ್ಯಕೀಯ ಕಾಲೇಜುಗಳಿಗೆ ಮನವಿ ಸಲ್ಲಿಸಲಾಗಿದ್ದು, ಎಲ್ಲಾ ವೈದ್ಯಕೀಯ ಕಾಲೇಜುಗಳು ತಲಾ ಒಂದು ತಂಡವನ್ನು ಸನ್ನದ್ಧವಾಗಿಟ್ಟುಕೊಂಡಿರಬೇಕು ಕೇರಳ ಅಥವಾ ಕರ್ನಾಟಕ ಎರಡೂ ಕಡೆಗಳಲ್ಲಿ ನೆರವಿನ ಅಗತ್ಯತೆ ಇರುವ ಕಾರಣ, ಕರೆ ಬಂದ ಕೂಡಲೇ ಹೊರಡಲು ಸಿದ್ಧವಾಗಿರಬೇಕು ಎಂದು ಅವರು ಹೇಳಿದರು.

ನೆರವು ದುರುಪಯೋಗ ಆಗಬಾರದು
ನೆರೆ ಸಂತ್ರಸ್ತರಿಗೆ ಸಾರ್ವಜನಿಕರು ನೀಡುವ ಬಟ್ಟೆ, ಬರೆ ಇನ್ನಿತರೆ ನೆರವಿನ ಸಾಮಗ್ರಿಗಳು ಮತ್ತು ಹಣ ದುರುಪಯೋಗವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.












Click it and Unblock the Notifications