ವಿಧಾನಸಭೆ ನೂತನ ಉಪಾಧ್ಯಕ್ಷ ಸ್ಥಾನಕ್ಕೆ ರುದ್ರಪ್ಪ ಲಮಾಣಿ ಆಯ್ಕೆ!
ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಇಂದು ವಿಧಾನಸಭೆಗೆ ನೂತನ ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ರುದ್ರಪ್ಪ ಲಮಾಣಿ ವಿಧಾನಸಭೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಈ ಆಯ್ಕೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಈಗಾಗಲೇ ವಿಧಾನಸಭೆಗೆ ಅಧ್ಯಕ್ಷರನ್ನ ಆಯ್ಕೆ ಮಾಡಲಾಗಿದ್ದು, ಯುಟಿ ಖಾದರ್ ಅವರನ್ನ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ಇದೀಗ ಡೆಪ್ಯೂಟಿ ಸ್ಪೀಕರ್ ಆಗಿ ರುದ್ರಪ್ಪ ಲಮಾಣಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್, ಇಂದು ನಾವೆಲ್ಲ ಒಮ್ಮತದಿಂದ ರುದ್ರಪ್ಪ ಮಾಲಪ್ಪ ಲಮಾಣಿ ಅವರನ್ನ ರಾಜ್ಯ ವಿಧಾನಸಭೆಗೆ 25ನೇ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಲಮಾಣಿ ಅವರು 1999ರಲ್ಲಿ ನನ್ನ ಜೊತೆಯಲ್ಲೇ ವಿಧಾನಸಭೆ ಪ್ರವೇಶಿಸಿದ್ದಾರೆ. ಅವ್ರು ಸದಾ ಹಸನ್ಮುಖಿ. ರಾಜಕಾರಣಿಗೆ ಇದು ಬಹಳ ಅಗತ್ಯ. ಅವರು ಸಚಿವರಾಗಿ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನ ವಹಿಸಿಕೊಂಡು ಕೆಲಸ ಮಾಡಿದ್ದಾರೆ ಎಂದರು.

ನೀವು ಎಲ್ಲರಿಗೂ ನ್ಯಾಯ ಒದಗಿಸಬೇಕು!
ಅಲ್ಲದೆ ತಮ್ಮ ಜಿಲ್ಲೆಯಲ್ಲಿ ಅಜಾತ ಶತ್ರುವಾಗಿ ಕರೆಯುತ್ತಾರೆ. ಅವರ ಬಗ್ಗೆ ಜನ ಅಪಾರ ಪ್ರೀತಿ ಹೊಂದಿದ್ದಾರೆ. ನಾವು ಅವರಿಗೆ ಬಹಳ ಬಲವಂತವಾಗಿ ಈ ಜವಾಬ್ದಾರಿ ನೀಡಿದ್ದೇವೆ. ಪಕ್ಷದ ಆದೇಶಕ್ಕೆ ತಲೆಬಾಗಿ ಈ ಜವಾಬ್ದಾರಿ ವಹಿಸಿದ್ದು, ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಮಂತ್ರಿಗಳಾಗಿದ್ದರು ಸ್ಪೀಕರ್ ಆಗಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಉದಾಹರಣೆ ನಾವು ನೋಡಿದ್ದೇವೆ. ರಾಜಕಾರಣ ಸಾಧ್ಯತೆಗಳ ಕಲೆ. ಇಲ್ಲಿ ಯಾರೂ ಶತ್ರುಗಳಲ್ಲ ಯಾರೂ ಮಿತ್ರರಲ್ಲ. ಶತ್ರುಗಳು ಮಿತ್ರರಾಗುತ್ತಾರೆ. ಮುಖ್ಯಮಂತ್ರಿಗಳು ಮಂತ್ರಿಗಳು ನಿಮ್ಮ ಬಳಿ ಬರಬೇಕು. ನೀವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ಹೀಗಾಗಿಯೇ ನಿಮಗೆ ವಿರೋಧ ಪಕ್ಷದ ನಾಯಕರ ಪಕ್ಕದಲ್ಲಿ ಸ್ಥಾನ ನೀಡಲಾಗಿರುತ್ತದೆ. ಇದೊಂದು ನ್ಯಾಯ ನೀಡುವ ಸ್ಥಾನ. ಈ ಸ್ಥಾನದಲ್ಲಿ ಕೂತು ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದರು.
ಮುಂದೆ ಬಹಳಷ್ಟು ಅವಕಾಶ ಸಿಗಲಿದೆ!
ಹಾಗೇ ನೂತನ ಶಾಸಕರಿಗೆ ಅವಕಾಶ ನೀಡಿ ನಾಯಕತ್ವ ರೂಪಿಸಿ. ಆ ಮೂಲಕ ಎಲ್ಲರ ನೀವು ಹೃದಯ ಗೆಲ್ಲಬೇಕು. ನೀವು ನಿಮ್ಮನ್ನ ಗೆಲ್ಲಬೇಕಾದರೆ ನೀವು ಬುದ್ಧಿಯನ್ನ ಪ್ರಯೋಗಿಸಿ. ನೀವು ಬೇರೆಯವರನ್ನು ಗೆಲ್ಲಬೇಕಾದರೆ ಹೃದಯವಂತಿಕೆ ಪ್ರಯೋಗಿಸಿ ಎಂದು ಗಾಂಧೀಜಿ ಹೇಳಿದ್ದಾರೆ. ನಿಮ್ಮ ಜೊತೆ ಆಡಳಿತ ಪಕ್ಷ & ವಿರೋಧ ಪಕ್ಷ ಇರಲಿದೆ. ಸಚಿವರಾಗಿದ್ದವರು ಈಗ ಉಪಾಧ್ಯಕ್ಷ ಆಗಿರುವುದಕ್ಕೆ ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಮುಂದೆ ಬಹಳಷ್ಟು ಅವಕಾಶ ಸಿಗಲಿದೆ, ನಿಮಗೆ ಶುಭವಾಗಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.












Click it and Unblock the Notifications