ಅಧಿಕಾರ ಹಂಚಿಕೆ ಜಟಾಪಟಿ: ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಹತ್ವ ಸಭೆ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ನವೆಂಬರ್ 27: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಫೈಟ್ ನಡೆಯುತ್ತಿದೆ. ಸಿಎಂ ಪಟ್ಟಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ತಂತ್ರ ಒಂದು ಕಡೆಯಾದರೆ ಡಿಸಿಎಂ ಡಿಕೆ ಶಿವಕುಮಾರ್ ಬಣವೂ ಪ್ರತಿತಂತ್ರ ರೂಪಿಸುತ್ತಿದೆ. ಇತ್ತ ಡಿ ಕೆ ಶಿವಕುಮಾರ್ ಅವರು ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತಾ ನಾನು ಕೇಳಿಯೇ ಇಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದು, ಸಿಎಂ ಬದಲಾವಣೆ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಲು ನಾನು ಬಯಸುವುದಿಲ್ಲ. ಏಕೆಂದರೆ ಇದು ಪಕ್ಷದಲ್ಲಿ ನಾಲ್ಕರಿಂದ ಐದು ಜನರ ನಡುವೆ ನಡೆದ ರಹಸ್ಯ ಒಪ್ಪಂದವಾಗಿದೆ ಎಂದಿದ್ದಾರೆ.
ಅಧಿಕಾರ ಹಂಚಿಕೆ ಕುರಿತು ರಾಹುಲ್ ಗಾಂಧಿ ಅವರ ಭೇಟಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮಯ ಕೇಳಿದ್ದು, ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ 29 ರಂದು ದೆಹಲಿಯಲ್ಲಿ ಸಭೆಯ ಕುರಿತು ಡಿ ಕೆ ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. 28 ಸಂವಿಧಾನ ದಿನ, ಅಂಗನವಾಡಿ ಯೋಜನೆಗೆ 50 ವರ್ಷ ತುಂಬಿದ ಸಮಾರಂಭಗಳಿವೆ. 29ನೇ ತಾರೀಕು ಇನ್ನೂ ದೂರವಿದೆ, ನೋಡೋಣ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

2028 ರಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ನಾಯಕತ್ವದಲ್ಲಿ ಅಧಿಕಾರಕ್ಕೆ ಬರುವುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿರುವವನು. ಕಳೆದ ಆರು ವರ್ಷಗಳಿಂದ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮಲ್ಲಿ ವ್ಯಕ್ತಿ ಪೂಜೆಯಿಲ್ಲ, ಪಕ್ಷ ಪೂಜೆ ಮಾತ್ರ ಎಂದರು.ಎರಡುವರೆ ವರ್ಷ ನೀವು ಸಿಎಂ ಆಗಲಿದ್ದೀರಿ ಎನ್ನುವ ಕಾರ್ಯಕರ್ತರ ಪ್ರಾರ್ಥನೆಗಳ ಬಗ್ಗೆ ಮಾತನಾಡಿ, ಅವರೆಲ್ಲಾ ಡಿ.ಕೆ. ಶಿವಕುಮಾರ್ ಬೆಂಬಲಿಗರಲ್ಲ, ಕಾಂಗ್ರೆಸ್ ಪಕ್ಷದ ಬೆಂಬಲಿಗರು ಎಂದರು.
ಸದಾನಂದಗೌಡ ಅವರು ಸೇರಿದಂತೆ ಇತರೇ ಪಕ್ಷಗಳ ನಾಯಕರು ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಕೇಳಿದಾಗ, "ಬಿಜೆಪಿ ಹಾಗೂ ಜನತಾದಳದ ನಾಯಕರು ನಮ್ಮ ಪಕ್ಷದ ವಿಚಾರವನ್ನು ಬಹಿರಂಗವಾಗಿ ಮಾತನಾಡುವ ಅವಶ್ಯಕತೆಯಿಲ್ಲ. ಅವರು ತಮ್ಮ ಪಕ್ಷದಲ್ಲಿರುವ ಸಮಸ್ಯೆಗಳ ನ್ನು ನೋಡಿಕೊಳ್ಳಲಿ. ಪಕ್ಷ ನನ್ನ ಹಿತ ಕಾಯಲಿದೆ. ನನ್ನ ಕಷ್ಟ ಕಾಲದಲ್ಲಿ ಪಕ್ಷ ನನ್ನ ಬೆನ್ನಿಗೆ ನಿಂತಿದೆ. ವಿರೋಧ ಪಕ್ಷದವರು ನನ್ನ ಬಗ್ಗೆ ಕಾಳಜಿವಹಿಸುವುದು ಬೇಡ. ನಾನು ಅಪ್ಪಟ ಕಾಂಗ್ರೆಸ್ಸಿಗ ಎಂದರು.
ನೀವು ಒಕ್ಕಲಿಗರ ನಾಯಕರಲ್ಲ ಎಂದು ಆರ್.ಅಶೋಕ್ ಅವರು ಹೇಳಿರುವ ಬಗ್ಗೆ ಮಾತನಾಡಿ, ನಾನು ಒಕ್ಕಲಿಗರ ನಾಯಕ ಎಂದು ಯಾವಾಗ ಹೇಳಿದ್ದೇನೆ? ನಾನು ಕಾಂಗ್ರೆಸ್ ಪಕ್ಷದ ನಾಯಕ. ಒಕ್ಕಲಿಗನಾಗಿ ಹುಟ್ಟಿದ್ದೇನೆ ಅಷ್ಟೇ. ಇದರಲ್ಲಿ ಅನುಮಾನವಿಲ್ಲ. ನಾವು ಬಿಟ್ಟರು ಧರ್ಮ ಮತ್ತು ಜಾತಿ ನಮ್ಮನ್ನು ಬಿಡುವುದಿಲ್ಲ ಎಂದರು. ಅಶೋಕ್ ಅವರೇ ಒಕ್ಕಲಿಗರ ನಾಯಕ ಪದ ತೆಗೆದುಕೊಂಡು, ಬ್ಯಾಡ್ಜ್ ಹಾಕಿಕೊಂಡಿದ್ದಾರೆ. ನಾನೇ ಅವರಿಗೆ ಒಕ್ಕಲಿಗ ನಾಯಕ ಬ್ಯಾಡ್ಜ್ ಕಳಿಸಿಕೊಡುತ್ತೇನೆ. ಅದನ್ನು ಅಶೋಕಣ್ಣ ಹಾಕಿಕೊಳ್ಳಲಿ. ಚಕ್ರವರ್ತಿ, ಸಾಮ್ರಾಟ್ ಅಶೋಕ್ ಎನ್ನುವ ಒಳ್ಳೆ ಪದವಿ ಅಶೋಕಣ್ಣನಿಗೆ ಇದೆ ಎಂದು ವ್ಯಂಗ್ಯವಾಡಿದರು.
ನೀವು ಮತ್ತು ಸಿದ್ದರಾಮಯ್ಯ ಅವರು ಜೋಡೆತ್ತುಗಳಂತೆ ಪಕ್ಷವನ್ನು ಅಧಿಕಾರಕ್ಕೆ ತಂದವರು. ನಿಮ್ಮ ಶ್ರಮಕ್ಕೆ ಫಲ ಸಿಗಲಿದೆಯೇ ಎಂದು ಕೇಳಿದಾಗ, ಈಗ ಇಬ್ಬರೂ ಜೊತೆಯಲ್ಲೇ ಸರ್ಕಾರ ನಡೆಸುತ್ತಿದ್ದೇವಲ್ಲ. ಎಲ್ಲರೂ ಒಟ್ಟಿಗೆ ಸರ್ಕಾರ ತೆಗೆದುಕೊಂಡು ಹೋಗುತ್ತಿದ್ದೇವೆ. ಜನರಿಗೆ ಏನು ಬೇಕೋ ಅದೆಲ್ಲವನ್ನೂ ಕೊಡುತ್ತಿದ್ದೇವಲ್ಲ ಎಂದರು. ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜ ಇದೆಲ್ಲವೂ ಕಾಂಗ್ರೆಸ್ ಪಕ್ಷದ ಕೊಡುಗೆ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನವು ಈ ದೇಶದ ಸರ್ವರ ಹಿತವನ್ನು ಕಾಪಾಡುತ್ತಿದೆ. ಪ್ರತಿಯೊಬ್ಬರ ಹಕ್ಕನ್ನು ರಕ್ಷಿಸುತ್ತಿದೆ. ಪ್ರಪಂಚದ ನಾನಾ ದೇಶಗಳು ನಮ್ಮ ಸಂವಿಧಾನವನ್ನು ಮೆಚ್ಚುತ್ತಿವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎನ್ನುವ ಹೊಸ ಘೋಷಣೆ ನೀಡಲಾಗಿದೆ. ಇದನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಲಿದ್ದೇವೆ. ಭಗವದ್ಗೀತೆ, ಬೈಬಲ್, ಕುರಾನ್ ಸೇರಿದಂತೆ ಎಲ್ಲಾ ಪವಿತ್ರ ಗ್ರಂಥಗಳಷ್ಟೇ ಶ್ರೇಷ್ಠ ಗ್ರಂಥ ನಮ್ಮ ಸಂವಿಧಾನ ಎಂದರು.
ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಬೇಡ ಹಾಗೂ ಏಕ ನಾಗರಿಕ ಸಂಹಿತೆ ಪಾಲಿಸಬೇಕು ಎನ್ನುವ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಧೀಶರಾದ ಬಿ.ಆರ್. ಗವಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಅವರು ತಮ್ಮ ಅನುಭವನದ ಆಧಾರದ ಮೇಲೆ ಮಾತನಾಡಿದ್ದಾರೆ. ಆದರೆ ಸಮಾಜದಲ್ಲಿ ಇನ್ನೂ ಅನೇಕ ಸಮುದಾಯಗಳಿಗೆ, ಗ್ರಾಮೀಣ ಭಾಗದಲ್ಲಿ ಇರುವವರಿಗೆ ಅನೇಕ ಸೌಲಭ್ಯಗಳು ತಲುಪಿಲ್ಲ. ಇವರನ್ನೆಲ್ಲಾ ಮೇಲೆತ್ತುವುದು ನಮ್ಮೆಲ್ಲರ ಕೆಲಸವಾಗಬೇಕು. ನಮ್ಮ ಸರ್ಕಾರ ಕರ್ನಾಟಕದಲ್ಲಿ ತಿದ್ದುಪಡಿ ತಂದು ಶೋಷಿತ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಹಣ ನೀಡುತ್ತಿದೆ. ಇಂತಹ ಒಂದೇ ಒಂದು ಕೆಲಸವನ್ನು ಎನ್ ಡಿಎ ಸರ್ಕಾರ ತರುವ ಧೈರ್ಯ ಮಾಡುತ್ತಿಲ್ಲ ಎಂದರು.












Click it and Unblock the Notifications