ಕನಕಪುರ: 'JDS ಕಾರ್ಯಕರ್ತರಿಗೂ ನಾನಿದ್ದೇನೆ' ಎಂದ ಡಿಕೆ ಶಿವಕುಮಾರ್! ಕುಮಾರಸ್ವಾಮಿ-ಡಾ.ಮಂಜುನಾಥ್ಗೆ ನಡುಕ ಹುಟ್ಟಿಸಿದ ಕರೆ
ಕನಕಪುರ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ್ದಾರೆ. "ಜನತಾದಳದ (JDS) ಕಾರ್ಯಕರ್ತರಿಗೂ ಈ ಡಿ.ಕೆ. ಶಿವಕುಮಾರ್ ಇದ್ದಾನೆ. ನನ್ನ ಮನೆ ಬಾಗಿಲು ನಿಮಗೂ ತೆರೆದಿದೆ. ನೀವು ನನ್ನನ್ನು ಬಳಸಿಕೊಂಡು, ಸಹಾಯ ಪಡೆಯಬಹುದು" ಎಂದು ಮುಕ್ತವಾಗಿ ಕರೆ ನೀಡಿದ್ದಾರೆ. ಸಿಎಂ ಆದ ಬೆನ್ನಲ್ಲೆ ಜೆಡಿಎಸ್ಗೆ ಕಾರ್ಯಕರ್ತರಿಗೆ ಕೊಕ್ಕೆ ಹಾಕಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಹಾಗೂ ಸಂಸದ ಡಾ.ಸಿ.ಎನ್. ಮಂಜುನಾಥ ಅವರಿಗೆ ನಡುಕ ಹುಟ್ಟಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಭಾನುವಾರ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. "ನಿಮಗೆ ಒಳಿತು ಮಾಡಲು ನಾನು ಸಿದ್ಧನಾಗಿದ್ದೇನೆ. ದೇವರು ವರ ಮತ್ತು ಶಾಪ ಎರಡನ್ನು ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ನೀವು ಸಿಕ್ಕಂತಹ ಅವಕಾಶವನ್ನು ಬಳಸಿಕೊಳ್ಳಬೇಕು. ಬಿಜೆಪಿಯನ್ನು ದೂರ ಇಡಬೇಕು ಎಂದು ಸಲಹೆ ನೀಡಿದರು.

ಡಾ.ಮಂಜುನಾಥ್, ಕುಮಾರಸ್ವಾಮಿಗೆ ತಳಮಳ!
ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಬ್ಬರು ಒಕ್ಕಲಿಗರ ನಾಯಕರು. ರಾಜಕೀಯದಲ್ಲಿ ಪ್ರಬಲರು. ಇಬ್ಬರು ಸಹಿತ ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ವಿಸ್ತರಿಸಲು, ಪರಸ್ಪರ ರಾಜಕೀಯವಾಗಿ ಹಣಿಯಲು ಕಾಯುತ್ತಿದ್ದಾರೆ.
ಈ ವೇಳೆ ಡಿಕೆಶಿ ಸಿಎಂ ಹುದ್ದೆ ಅಲಂಕರಿಸಿದ್ದು, ಕುಮಾರಸ್ವಾಮಿ ಅವರ ನಿದ್ದೆಗೆಡಿಸಿದೆ. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ. ಡಿಕೆಶಿಗೆ ಧಕ್ಕಿದ ಸಿಎಂ ಪಟ್ಟ ಕುಮಾರಸ್ವಾಮಿ ಅವರ ತಳಮಳಕ್ಕೆ ಕಾರಣವಾಗಿದೆ. ಮುಂಬರಲಿರುವ ಚುನಾವಣೆಗಳಲ್ಲಿ ಒಕ್ಕಲಿಗರು ಸೇರಿದಂತೆ ಜೆಡಿಎಸ್ ಗೆ ಬರುವ ಮತಗಳು ಕಾಂಗ್ರೆಸ್ ಪಾಲಾಗದಂತೆ ಕುಮಾರಸ್ವಾಮಿ ಅವರು ಲೆಕ್ಕಾಚಾರ ಹಾಕುವ ಹೊತ್ತಿನಲ್ಲೇ ಜೆಡಿಎಸ್ ಕಾರ್ಯಕರ್ತರಿಗೆ ಖುದ್ದು ಸಿಎಂ ಡಿಕೆಶಿ ಅವರೇ ಬಲೆ ಬೀಸಿದ್ದಾರೆ. ಇದರಿಂದ ಕುಮಾರಸ್ವಾಮಿಗೆ ಆಘಾತವಾದಂತಾಗಿದೆ.
ಕಳೆದ ಎಂಪಿ ಚುನಾವಣೆಯಲ್ಲಿ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರನ್ನು ಎಚ್.ಡಿ.ದೇವಗೌಡರ ಅಳಿಯ, ಬಿಜೆಪಿ ನಾಯಕ ಡಾ.ಸಿ.ಎನ್.ಮಂಜುನಾಥ ಅವರು ಸೋಲಿಸಿದ್ದರು. ಅಂದು ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ತೊಡೆ ತಟ್ಟಿದ್ದವು. ಇಂದು ಜೆಡಿಎಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಮುಕ್ತವಾಗಿ ಆಹ್ವಾನಿಸವ ಮೂಲಕ ಈ ಇಬ್ಬರು ನಾಯಕರಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ. ಮುಂಬರಲಿರುವ ಚುನಾವಣೆ ದೃಷ್ಟಿಯಿಂದ ಡಿಕೆಶಿ ಅವರ ಇಂದಿನ ನಡೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ ಅಂತಲೂ ವಿಶ್ಲೇಷಿಸಲಾಗುತ್ತಿದೆ.
ಕುಮಾರಸ್ವಾಮಿಗೆ ಬೆಂಬಲ ನೀಡಿದ್ದೇವು, ಚರ್ಚೆ ಬೇಡ!
ಈ ಹಿಂದೆ ನಾವು ಅನಿತಾ ಕುಮಾರಸ್ವಾಮಿ ಹಾಗೂ ಎಚ್ಡಿ ಕುಮಾರಸ್ವಾಮಿ ಅವರಿಗೆ ನಾವು ಬೆಂಬಲ ನೀಡಿದ್ದೆವು. ಈ ಹಿಂದೆ ಆಗಿದ್ದನ್ನು ನಾನು ಈಗ ಚರ್ಚೆ ಮಾಡುವುದಿಲ್ಲ ಎಂದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಳಿಕ ಕುಮಾರಸ್ವಾಮಿ ಮಾಡಿದ್ದ ಗಂಭೀರ ಆರೋಪಗಳ ತಮಗೆ ಇನ್ನೂ ನೆನಪಿವೆ ಎಂಬಂತೆ ಹೇಳಿದರು.
ಏನೋ ತಪ್ಪಾಗಿದೆ ದ್ವೇಷ ಬೇಡ, ಎಲ್ಲರು ಒಟ್ಟಾಗಿ ಹೋಗೋಣ
ಈ ಕ್ಷೇತ್ರದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು. ಲೋಕಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಕೊಡಲಿಲ್ಲ ಎಂದು ದೂಷಣೆ ಮಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಏನೋ ಒಮ್ಮೆ ಹೆಚ್ಚು ಕಮ್ಮಿ ಆಗಿ ತಪ್ಪಾಗಿದೆ. ಅದನ್ನು ಕ್ಷಮಿಸಿ, ಮುಂದೆ ನನ್ನನ್ನು ಯಾವ ರೀತಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದೀರೋ ಅದೇ ರೀತಿ ನಮ್ಮವರನ್ನು ಮುಂದೆಯೂ ಬೆಂಬಲಿಸಿ. ಎಲ್ಲಾರೂ ಒಂದಾಗಿ ಹೋಗೋಣ. ನಮ್ಮ ಮುಖಂಡರು ಯಾರ ವಿರುದ್ಧವೂ ದ್ವೇಷ ಸಾಧಿಸಬಾರದು. ಅವರ ಮನಪರಿವರ್ತನೆ ಆಗಲಿ ಎಂದು ಪ್ರಾರ್ಥಿಸಿ ಎಂದರು.
2028ರಲ್ಲಿ ಕಾಂಗ್ರೆಸ್ ಗೆಲ್ಲಬೇಕು
ನನ್ನ ಕಷ್ಟ ಕಾಲದಲ್ಲಿ ನೀವು ನನಗಾಗಿ ಪ್ರಾರ್ಥನೆ ಮಾಡಿದ್ದೀರಿ, ಹರಕೆ ಕಟ್ಟಿಕೊಂಡಿದ್ದೀರಿ, ಹೋರಾಟ ಮಾಡಿದ್ದೀರಿ, ಕೇಸ್ ಹಾಕಿಸಿಕೊಂಡಿದ್ದೀರಿ. ನಿಮ್ಮ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಎರಡು ದಿನ ತಡವಾದರೂ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. ನಾನು ಪಕ್ಷದ ಮಾರ್ಗದರ್ಶನದಂತೆ ನಡೆಯಬೇಕು. ನಾನು ಹಾಗೂ ಸಿದ್ದರಾಮಯ್ಯ ಅವರು ಸೇರಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ,ಸರ್ಕಾರ ರಚಿಸಲು ನೀವು ಅನುವು ಮಾಡಿಕೊಡಬೇಕು ಎಂದು ಅವರು ಕೋರಿದರು.
ನನಗೆ ಜಾತಿ, ಧರ್ಮ ಬೇಧ ಭಾವದ ಮೇಲೆ ನಂಬಿಕೆ ಇಲ್ಲ. ಕವಿ ಕುವೆಂಪು ಅವರು ಹೇಳಿರುವಂತೆ ಈ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮಾಡಬೇಕು. ಎಲ್ಲ ಸಮುದಾಯದವರನ್ನು ನಾನು ನನ್ನ ಅಣ್ಣ ತಮ್ಮಂದಿರೆಂದು ಕಂಡಿದ್ದೇನೆ ಎಂದು ಹೇಳಿದರು.
ಕನಕಪುರ ಕ್ಷೇತ್ರದ ಮತಗಳು ಇಲ್ಲಿಯೇ ಸಲ್ಲಬೇಕು
ಎಸ್ ಐಆರ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ನಮ್ಮ ಮತ ಇದೆ ಎಂದು ಭಾವಿಸಿ ಸುಮ್ಮನಾದರೆ ಮತ ಹೋಗುತ್ತದೆ. ಮತ್ತೊಮ್ಮೆ ಎಲ್ಲರೂ ಅರ್ಜಿ ಸಲ್ಲಿಸಬೇಕು. ನೀವು ಅರ್ಜಿ ಸಲ್ಲಿಸದಿದ್ದರೆ ಮತವೂ ಇಲ್ಲ ಜೊತೆಗೆ ಯಾವುದೇ ಸರ್ಕಾರಿ ಯೋಜನೆಗಳ ಲಾಭವೂ ಸಿಗುವುದಿಲ್ಲ. ಗೃಹಲಕ್ಷ್ಮೀ, ಗೃಹಜ್ಯೋತಿ ಯಾವುದೂ ಸಿಗುವುದಿಲ್ಲ. ನಿಮ್ಮ ಮತವನ್ನು ಕನಕಪುರ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬಿಜೆಪಿ, ಜೆಡಿಎಸ್ ಟೀಕೆಗಳು ಸತ್ತಿವೆ, ಕಾಂಗ್ರೆಸ್ ಕೆಲಸ ಉಳಿದಿವೆ
ಯಾರೂ ವ್ಯವಸಾಯ ಬಿಡಬೇಡಿ, ರೇಷ್ಮೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮಾಡಿಕೊಂಡಿರಿ. ನೀವು ಬೆಂಗಳೂರಿಗೆ ಹೋಗಿ ಬೀದಿಯಲ್ಲಿ ವ್ಯಾಪಾರ ಮಾಡಿಕೊಂಡು, ಅಂಗಡಿಗಳಲ್ಲಿ ಕೆಲಸ ಮಾಡಬೇಡಿ. ಇಲ್ಲೇ ಇದ್ದು ಸ್ವಾಭಿಮಾನದ ಬದುಕು ಸಾಗಿಸಿ. ಅದಕ್ಕಾಗಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಕಲ್ಪಿಸಲಾಗಿದೆ. ನಿಮ್ಮ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬೇಡಿ. ಈ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಎಂದು ಮಾಡಿದ ನಂತರ ಇಲ್ಲಿನ ಭೂಮಿ ಬೆಲೆ ಏನಾಗಿದೆ ಎಂದು ನಿಮಗೆ ಗೊತ್ತಿದೆ. ಈ ಜಿಲ್ಲೆಯ ಹೆಸರು ಬದಲಾವಣೆ ಮಾಡುವಾಗ ಬಿಜೆಪಿ ಹಾಗೂ ದಳದವರು ಟೀಕೆ ಮಾಡಿದರು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅದೇ ರೀತಿ ಅವರ ಟೀಕೆಗಳು ಸತ್ತಿವೆ. ನೀವೆಲ್ಲರೂ ಬೆಂಗಳೂರು ಜಿಲ್ಲೆಯ ಮಕ್ಕಳು ಎಂದರು.
ನನ್ನನ್ನು ಜನ ಬಂಡೆ ಎಂದು ಕರೆಯುತ್ತಾರೆ. ಆದರೆ ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ನನ್ನನ್ನು ಪೂಜಿಸಬೇಡಿ. ಈ ಕಲ್ಲನ್ನು ವಿಧಾನಸೌಧಕ್ಕೆ ಪ್ರವೇಶಿಸುವ ಮೆಟ್ಟಿಲಾಗಿ ಮಾಡಿಕೊಳ್ಳಿ ಎಂದು ಸ್ವಕ್ಷೇತ್ರದ ಜನರಿಗೆ ಕೃತಜ್ಞತೆ ಅರ್ಪಿಸಿದರು.














Click it and Unblock the Notifications