‘ಬಿಗ್ ಬಾಸ್ ಕನ್ನಡ 13’ ಆಡಿಷನ್: ನಿಮಗೂ ಆಸಕ್ತಿ ಇದ್ರೆ ಈ ಸಲ ಟ್ರೈ ಮಾಡಬಹುದು
ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಪ್ರಿಯರಿಗೆ ವಾಹಿನಿಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. 2026ರ ಬಹುನಿರೀಕ್ಷಿತ 'ಬಿಗ್ ಬಾಸ್ ಕನ್ನಡ ಸೀಸನ್-13' (Bigg Boss Kannada Season 13) ಪ್ರಸಾರಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಕಾರ್ಯಕ್ರಮವು ಎಂದಿಗಿಂತಲೂ ಕೊಂಚ ಮುಂಚಿತವಾಗಿಯೇ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಹೊಸ ಸೀಸನ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರಿಗೆ 'ಕಲರ್ಸ್ ಕನ್ನಡ' ವಾಹಿನಿಯು ಸುವರ್ಣಾವಕಾಶವೊಂದನ್ನು ಕಲ್ಪಿಸಿದೆ.
ಕಿರುತೆರೆಯ ನಂ.1 ರಿಯಾಲಿಟಿ ಶೋ ಎನಿಸಿಕೊಂಡಿರುವ 'ಬಿಗ್ ಬಾಸ್ ಬಗ್ಗೆ ಹೊಸ ಸೀಸನ್ ಆರಂಭಿಸುವ ಮುನ್ನವೇ ಅಪ್‌ಡೇಟ್ ಹೊರಬಿದ್ದಿದ್ದು, ಇಡೀ ರಾಜ್ಯದ ಜನಸಾಮಾನ್ಯರಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಬಾರಿ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ, ಸಾಮಾನ್ಯ ಜನರಿಗೂ ಸಹ ದೊಡ್ಡಮನೆಯೊಳಗೆ ಸ್ಪರ್ಧಿಯಾಗಿ ಹೆಜ್ಜೆ ಇಡಲು ವೇದಿಕೆ ಸಿದ್ಧವಾಗಿದೆ. ವಾಹಿನಿಯು ತನ್ನ ಅಧಿಕೃತ ಪ್ರೋಮೋ ಮೂಲಕ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದು, ಪ್ರತಿಭೆಯುಳ್ಳ ಸಾಮಾನ್ಯ ಜನರನ್ನು ಅಖಾಡಕ್ಕೆ ಇಳಿಸಲು ಮುಂದಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿ 'ಆಡಿಷನ್' ಹೈಲೈಟ್
ಕನ್ನಡ ಬಿಗ್ ಬಾಸ್ ಇತಿಹಾಸವನ್ನು ತಿರುವಿ ಹಾಕಿದರೆ, ಈ ಹಿಂದಿನ ಕೆಲವು ಸೀಸನ್‌ಗಳಲ್ಲೂ ಕಾಮನ್ ಮ್ಯಾನ್‌ಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು ಎಂಬುದು ನಿಜ. ಆದರೆ, ಆಗ ವಾಹಿನಿಯೇ ನೇರವಾಗಿ ಕೆಲವರನ್ನು ಗುರುತಿಸಿ ಕರೆತರುತ್ತಿತ್ತೇ ವಿನಃ ಸಾರ್ವಜನಿಕವಾಗಿ ಯಾವುದೇ ಆಡಿಷನ್ ನಡೆಸಿರಲಿಲ್ಲ. ಆದರೆ ಈ ಬಾರಿಯ 13ನೇ ಸೀಸನ್‌ನ ಅತಿ ದೊಡ್ಡ ಹೈಲೈಟ್ ಎಂದರೆ, ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನಸಾಮಾನ್ಯರಿಗಾಗಿ ಅಧಿಕೃತವಾಗಿ 'ಆಡಿಷನ್' ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಈ ಮೂಲಕ ಅರ್ಹತೆ ಮತ್ತು ಪ್ರತಿಭೆ ಇರುವವರಿಗೆ ಪಾರದರ್ಶಕವಾಗಿ ಬಿಗ್ ಬಾಸ್ ಮನೆ ಪ್ರವೇಶಿಸುವ ಹೆಬ್ಬಾಗಿಲು ತೆರೆದಂತಾಗಿದೆ.
ಅಖಾಡಕ್ಕೆ ಇಳಿಯಲು ಸಿದ್ಧರಾಗಿ: ಪ್ರೋಮೋ ಭರ್ಜರಿ ಲಾಂಚ್
ಕಲರ್ಸ್ ಕನ್ನಡ ವಾಹಿನಿಯು "ಕೈ ತಟ್ಟಿ ಹುರಿದುಂಬಿಸಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?" ಎಂಬ ಖಡಕ್ ಡೈಲಾಗ್‌ನೊಂದಿಗೆ ಪ್ರೋಮೋ ಬಿಡುಗಡೆ ಮಾಡಿದೆ. "ಅವಕಾಶ ಸಿಗದ ಆಸೆಗಳಿಗೆ ಅರ್ಥವಿರುವುದಿಲ್ಲ. ಈ ಬಾರಿ ನಿಮ್ಮಂತಹ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟುವ ಕೆಲಸವನ್ನು ಬಿಗ್ ಬಾಸ್ ಮಾಡುತ್ತಿದ್ದಾರೆ. ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ" ಎಂದು ವಾಹಿನಿಯು ಜನರಲ್ಲಿ ಕುತೂಹಲ ಹಾಗೂ ಭಾಗವಹಿಸುವ ಹುಮ್ಮಸ್ಸನ್ನು ಹೆಚ್ಚಿಸಿದೆ.
ಆಡಿಷನ್‌ನಲ್ಲಿ ಭಾಗವಹಿಸುವುದು ಹೇಗೆ?
ಬಿಗ್ ಬಾಸ್‌ಗೆ ಹೋಗುವ ಕನಸು ಹೊತ್ತಿರುವ ಸಾರ್ವಜನಿಕರು ತಮ್ಮ ಆಡಿಷನ್ ವಿಡಿಯೋವನ್ನು ಸುಲಭವಾಗಿ ಸಬ್ಮಿಟ್ ಮಾಡಬಹುದು. ನಿಮ್ಮಲ್ಲಿರುವ ವಿಶಿಷ್ಟ ಪ್ರತಿಭೆ ಹಾಗೂ ವ್ಯಕ್ತಿತ್ವವನ್ನು ಬಿಂಬಿಸುವ 3 ನಿಮಿಷಗಳ ಸುಂದರ ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳಬೇಕು. ಈ ವಿಡಿಯೋವನ್ನು ವಾಹಿನಿಯ ಅಧಿಕೃತ ವೆಬ್‌ಸೈಟ್ ಆದ Colorskannada.jiostar.comಗೆ ಭೇಟಿ ನೀಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇಲ್ಲಿ ಶಾರ್ಟ್‌ಲಿಸ್ಟ್ ಆಗುವ ಅತ್ಯುತ್ತಮ ಸ್ಪರ್ಧಿಗಳಿಗೆ ನೇರವಾಗಿ ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಲಿದೆ.
ಈಗಾಗಲೇ ಕನ್ನಡದಲ್ಲಿ 12 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಈ ಶೋ, ಇದೀಗ 13ನೇ ಸೀಸನ್‌ಗೆ ಕಾಲಿಡುತ್ತಿದೆ. ಎಂದಿನಂತೆ ಈ ಬಾರಿಯೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮದ ಸಾರಥ್ಯ ವಹಿಸಲಿದ್ದು, ಹೊಸ ಹುರುಪು ಹಾಗೂ ಹೊಸ ರೂಲ್ಸ್‌ಗಳೊಂದಿಗೆ ಶೋ ಆರಂಭವಾಗಲಿದೆ. ಆಡಿಷನ್ ಪ್ರಕ್ರಿಯೆ ಜಾರಿಗೆ ಬಂದಿರುವುದರಿಂದ ಈ ಸಲದ ಬಿಗ್ ಬಾಸ್ ಕಣ ಯಾರೆಲ್ಲಾ ಹೊಸ ಮುಖಗಳನ್ನು ಪರಿಚಯಿಸಲಿದೆ ಎಂದು ತಿಳಿಯಲು ಪ್ರೇಕ್ಷಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.













Click it and Unblock the Notifications