ಮಗಳನ್ನೇ ಕೊಂದಳಾ ಹೆತ್ತ ತಾಯಿ? ಬೆಂಗಳೂರಿನಲ್ಲಿ 5 ವರ್ಷದ ಕಂದಮ್ಮನ ನಿಗೂಢ ಸಾವಿಗೆ ಸಿಕ್ಕಿತು ಟ್ವಿಸ್ಟ್

ಬೆಂಗಳೂರಿನ ಕಾಡುಗೋಡಿಯಲ್ಲಿ ನಡೆದಿದ್ದ 5 ವರ್ಷದ ಬಾಲಕಿಯ ನಿಗೂಢ ಸಾವಿನ ಪ್ರಕರಣಕ್ಕೆ ಮೂರು ತಿಂಗಳ ಬಳಿಕ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಮಗುವಿನ ತಾಯಿ ಮತ್ತು ಆಕೆಯ ಲಿವ್-ಇನ್ ಪಾರ್ಟ್‌ನರ್ ವಿರುದ್ಧ ಕೊಲೆ ಕೇಸ್‌ ದಾಖಲಾಗಿದೆ. ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಆರೋಪಿಯನ್ನು ಈಗಾಗಲೇ ಬಂಧಿಸಿದ್ದಾರೆ.

ಏನಿದು ಪ್ರಕರಣ?

ಸಿಲಿಕಾನ್ ಸಿಟಿಯ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯ ವಿಲ್ಲಾವೊಂದರಲ್ಲಿ ಕಳೆದ ಮಾರ್ಚ್ 25ರಂದು ವೆನ್ನೆಲಾ ಎಂಬ 5 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ್ದಳು. ಆರಂಭದಲ್ಲಿ ಇದು ಸಾಮಾನ್ಯ ಸಾವು ಎಂದು ಬಿಂಬಿಸಲು ಯತ್ನಿಸಲಾಗಿತ್ತಾದರೂ, ಮಗುವಿನ ತಂದೆ ಪ್ರವೀಣ್ ಬಸಪ್ಪ ನೀಡಿದ ದೂರಿನ ಮೇರೆಗೆ ಪೊಲೀಸರು ಈಗ ತಾಯಿ ಪ್ರಿಯಾಂಕಾ ಹಾಗೂ ಆಕೆಯ ಪ್ರೇಮಿ ಮೋಹನ್ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಕೇಸ್‌ ದಾಖಲಿಸಿಕೊಂಡಿದ್ದಾರೆ.

Death Case

ದೂರಿನ ಪ್ರಕಾರ, ಪ್ರವೀಣ್ ಮತ್ತು ಪ್ರಿಯಾಂಕಾ ಅವರಿಗೆ 2007ರಲ್ಲಿ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ 2025ರ ಕೊನೆಯಲ್ಲಿ ಪ್ರಿಯಾಂಕಾ ತನಗಿದ್ದ ಕಾಲೇಜು ದಿನಗಳ ಸ್ನೇಹಿತ ಮೋಹನ್ ಜೊತೆಗಿನ ಹಳೇ ಸಂಬಂಧವನ್ನು ಮತ್ತೆ ಮುಂದುವರಿಸಿದ್ದಳು ಎನ್ನಲಾಗಿದೆ. ಬಳಿಕ ಪತಿಗೆ ಡಿವೋರ್ಸ್‌ ಕೇಳಿ, ಬೆಂಗಳೂರಿನಲ್ಲಿ ಮೋಹನ್ ಜೊತೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸಲು ಆರಂಭಿಸಿದ್ದಳು.

ಐವಿಎಫ್‌ ಮೂಲಕ ಮಗುವಿಗೆ ಪ್ಲ್ಯಾನ್‌

ದಂಪತಿಯ ಹಿರಿಯ ಮಗಳು ತಂದೆಯ ಜೊತೆಗಿದ್ದರೆ, ಕಿರಿಯ ಮಗಳು ವೆನ್ನೆಲಾ ತಾಯಿಯ ಬಳಿಯೇ ಇದ್ದಳು. ಪ್ರಿಯಾಂಕಾ ಮತ್ತು ಮೋಹನ್ ಐವಿಎಫ್ (IVF) ತಂತ್ರಜ್ಞಾನದ ಮೂಲಕ ಹೊಸ ಮಗುವನ್ನು ಪಡೆದು ಜಂಟಿಯಾಗಿ ಹೊಸ ಜೀವನ ಆರಂಭಿಸಲು ಯೋಜಿಸಿದ್ದರು ಎನ್ನಲಾಗಿದೆ. ಈ ದಾರಿಗೆ 5 ವರ್ಷದ ಮಗಳು ವೆನ್ನೆಲಾ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ತಂದೆ ಪ್ರವೀಣ್ ಗಂಭೀರವಾಗಿ ಆರೋಪಿಸಿದ್ದಾರೆ.

ಬಿರಿಯಾನಿ, ಐಸ್‌ಕ್ರೀಮ್; ತಾಯಿಯ ಹತ್ತಾರು ಸುಳ್ಳುಗಳು

ಮಾರ್ಚ್ 25ರಂದು ಮಗಳು ತೀರಿಕೊಂಡಿರುವ ಸುದ್ದಿ ಪ್ರವೀಣ್‌ಗೆ ಪ್ರಿಯಾಂಕಾಳ ಸಹೋದರನ ಮೂಲಕ ತಿಳಿಯುತ್ತದೆ. ಮಗುವಿನ ಸಾವಿನ ಬಗ್ಗೆ ಪತಿ ಮತ್ತು ಸಂಬಂಧಿಕರು ಪ್ರಶ್ನಿಸಿದಾಗ ತಾಯಿ ಪ್ರಿಯಾಂಕಾ ಹತ್ತಾರು ಸುಳ್ಳು ಕಥೆಗಳನ್ನು ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಾಳೆ. ಒಂದು ಬಾರಿ "ಮಗು ರಾತ್ರಿ ಬಿರಿಯಾನಿ ತಿಂದಿತ್ತು, ಅದಕ್ಕೆ ಹೀಗಾಯ್ತು" ಎಂದಿದ್ದಾಳೆ. ಮತ್ತೊಮ್ಮೆ "ನಾವು ಬರ್ತ್‌ಡೇ ಪಾರ್ಟಿಗೆ ಹೋಗಿದ್ದಾಗ ಮಗುವಿಗೆ ಐಸ್‌ಕ್ರೀಮ್ ಕೊಡಿಸಿ, ಎಸಿ ಆನ್ ಮಾಡಿದ್ದ ಕಾರಿನೊಳಗೆ ಮಲಗಿಸಿ ಹೋಗಿದ್ದೆವು" ಎಂದು ಭಿನ್ನವಾದ ಹೇಳಿಕೆಗಳನ್ನು ನೀಡಿದ್ದಾಳೆ. ಇದರಿಂದ ತಂದೆಗೆ ಅನುಮಾನ ಹೆಚ್ಚಾಗಿತ್ತು.

ವೈದ್ಯರ ರಿಪೋರ್ಟ್‌ನಿಂದ ಬಯಲಾಯ್ತು ರಹಸ್ಯ

ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದಾಗ ಪ್ರವೀಣ್ ಅದನ್ನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮಕ್ಕಳ ತಜ್ಞರಾಗಿರುವ ತಮ್ಮ ಸಂಬಂಧಿಕರೊಬ್ಬರಿಗೆ ಕಳುಹಿಸಿ ಪರಿಶೀಲಿಸಿದ್ದಾರೆ. ವರದಿಯನ್ನು ನೋಡಿದ ವಿದೇಶಿ ವೈದ್ಯರು, ಮಗುವಿನ ಮೇಲೆ ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ತಂದೆ ಪೊಲೀಸರ ಮೊರೆ ಹೋಗಿ ಪತ್ನಿ ಮತ್ತು ಆಕೆಯ ಪ್ರೇಮಿಯ ವಿರುದ್ಧ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿರುವ ಕಾಡುಗೋಡಿ ಪೊಲೀಸರು ಆರೋಪಿ ಮೋಹನ್‌ನನ್ನು ಈಗಾಗಲೇ ಬಂಧಿಸಿದ್ದಾರೆ. ಆದರೆ ಹೆತ್ತ ಮಗಳನ್ನೇ ಕೊಂದ ಆರೋಪ ಹೊತ್ತಿರುವ ತಾಯಿ ಪ್ರಿಯಾಂಕಾ ಸದ್ಯ ತಲೆಮರೆಸಿಕೊಂಡಿದ್ದು ಆಕೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಸದ್ಯ ಮಗುವಿನ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಹಾಗೂ ತಜ್ಞರ ಅಂತಿಮ ಅಭಿಪ್ರಾಯಕ್ಕಾಗಿ ಪೊಲೀಸರು ಕಾಯುತ್ತಿದ್ದು, ತನಿಖೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+