ಮಸಾಲೆ ದೋಸೆ ತಿನ್ನೋಕೆ ದಿನವೂ ಬರ್ತಾನೆ ಈ ವಿಐಪಿ ಗ್ರಾಹಕ; ಹೋಟೆಲ್ ಮಾಲೀಕ-ಗೂಳಿಯ ಸ್ನೇಹಕ್ಕೆ ನೆಟ್ಟಿಗರು ಫಿದಾ
ತೆಲಂಗಾಣದ ಸಣ್ಣ ಪಟ್ಟಣವೊಂದರಲ್ಲಿ ನಡೆದಿರುವ ಮೂಕ ಪ್ರಾಣಿ ಮತ್ತು ಮನುಷ್ಯನ ನಡುವಿನ ಅಪರೂಪದ ಸ್ನೇಹದ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಿರಿಯ ನಟಿ ಹಾಗೂ ಪ್ರಾಣಿ ಪ್ರೇಮಿ ಸಿಮಿ ಗರೆವಾಲ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿರುವ ಈ ಹೃದಯಸ್ಪರ್ಶಿ ದೃಶ್ಯ, ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತೆ ಮಾಡಿದೆ.
ನಿಜವಾದ ಪ್ರೀತಿ ಮತ್ತು ಸ್ನೇಹಕ್ಕೆ ಯಾವುದೇ ಭಾಷೆಯ ಹಂಗಿರುವುದಿಲ್ಲ ಎಂಬುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವೇ ಸಾಕ್ಷಿ. ತೆಲಂಗಾಣದ ರಸ್ತೆ ಬದಿಯ ದೋಸೆ ಅಂಗಡಿಯೊಂದಕ್ಕೆ ದಿನವೂ ಭೇಟಿ ನೀಡುವ ಬಸವಣ್ಣ (ಗೂಳಿ) ಹಾಗೂ ಆ ಅಂಗಡಿಯ ಮಾಲೀಕನ ನಡುವಿನ ಅವಿನಾಭಾವ ಸಂಬಂಧದ ದೃಶ್ಯಗಳು ಈಗ ಇಡೀ ದೇಶದ ಗಮನ ಸೆಳೆಯುತ್ತಿವೆ.

ಮಸಾಲೆ ದೋಸೆಗಾಗಿ ಕಾಯುವ ವಿಶೇಷ 'ಗ್ರಾಹಕ'
ವೈರಲ್ ಕ್ಲಿಪ್‌ನಲ್ಲಿ ಸಾರ್ವಜನಿಕರಿಂದ ಗಿಜಿಗುಡುತ್ತಿರುವ ರಸ್ತೆ ಬದಿಯ ಹೋಟೆಲ್‌ವೊಂದರ ಮುಂದೆ ಗೂಳಿಯೊಂದು ಅತ್ಯಂತ ಶಾಂತವಾಗಿ ನಿಂತಿರುವುದನ್ನು ಕಾಣಬಹುದು. ಬೆಳಗಿನ ಅವಧಿಯಲ್ಲಿ ಗ್ರಾಹಕರ ಭಾರಿ ರಶ್ ಇದ್ದರೂ, ಅಂಗಡಿ ಮಾಲೀಕ ಈ ವಿಶೇಷ ಗ್ರಾಹಕನಿಗಾಗಿ ತಾವಾಗಿಯೇ ಜಾಗ ಮಾಡಿಕೊಡುತ್ತಾರೆ. ಆ ಗೂಳಿಗಾಗಿಯೇ ಪ್ರತ್ಯೇಕವಾಗಿ ಎರಡು ಆಲೂಗಡ್ಡೆ ಮಸಾಲೆ ದೋಸೆಗಳನ್ನು ಸಿದ್ಧಪಡಿಸಲಾಗುತ್ತದೆ. ಅಲ್ಲಿಯವರೆಗೆ ಯಾವುದೇ ಗಲಾಟೆ ಮಾಡದೆ, ರಸ್ತೆಯ ಸಂಚಾರಕ್ಕೆ ಅಡ್ಡಿಪಡಿಸದೆ ಆ ಮೂಕ ಪ್ರಾಣಿ ಶಿಸ್ತಿನಿಂದ ಕಾಯುವ ದೃಶ್ಯವೇ ಅದ್ಭುತ.
ಕೈಯಾರೆ ತಿನ್ನಿಸುವ ಸೌಹಾರ್ದತೆ
ದೋಸೆ ಸಿದ್ಧವಾದ ತಕ್ಷಣ ಮಾಲೀಕರು ಅದನ್ನು ಹಾಗೆಯೇ ಕೊಡುವುದಿಲ್ಲ. ಬಿಸಿ ಇರುವ ದೋಸೆಯನ್ನು ಮೊದಲು ಆರಲು ಬಿಡುತ್ತಾರೆ. ನಂತರ ತಮ್ಮ ಸ್ವಂತ ಕೈಗಳಿಂದಲೇ ಆ ಬಸವಣ್ಣನಿಗೆ ಪ್ರೀತಿಯಿಂದ ತುತ್ತು ತಿನ್ನಿಸುತ್ತಾರೆ. ಸ್ಥಳೀಯರ ಪ್ರಕಾರ ಈ ಅಪರೂಪದ ಆಚರಣೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ನಿತ್ಯವೂ ಸರಿಯಾದ ಸಮಯಕ್ಕೆ ಈ ಗೂಳಿ ಹೋಟೆಲ್ ಮುಂದೆ ಬಂದು ನಿಲ್ಲುತ್ತದೆ. ಹೋಟೆಲ್ ಮಾಲೀಕನಿಗೆ ಈತನೇ ಅತ್ಯಂತ ನಿಷ್ಠಾವಂತ ಮತ್ತು ಹಳೆಯ ಗ್ರಾಹಕ ಎನ್ನಬಹುದು.
In a Telangana town, a bull comes to a dosa stall each morning for a snack.
— Simi_Garewal (@Simi_Garewal) May 31, 2026
The stall owner, the bull's friend, makes him two dosas with no-spice potato masala. The bull waits patiently until they are done.
After he fan cools the dosas he feeds them to his friend.
This routine… pic.twitter.com/Btn6az7r8D
ಬಾಲ್ಯದ ನೆನಪುಗಳನ್ನು ಮರುಕಳಿಸಿದ ಸಿಮಿ ಗರೆವಾಲ್ ಪೋಸ್ಟ್
ಖ್ಯಾತ ನಟಿ ಸಿಮಿ ಗರೆವಾಲ್ ಅವರು ಈ ವಿಡಿಯೋವನ್ನು ಹಂಚಿಕೊಂಡ ತಕ್ಷಣವೇ ಸಾವಿರಾರು ಜನರು ಕಮೆಂಟ್ ಬಾಕ್ಸ್‌ನಲ್ಲಿ ಅಂಗಡಿ ಮಾಲೀಕನ ಮಾನವೀಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಬರೀ ನೆಗೆಟಿವ್ ಸುದ್ದಿಗಳೇ ತುಂಬಿರುವಾಗ, ಇಂತಹ ಒಳ್ಳೆಯ ದೃಶ್ಯಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ" ಎಂದು ಹಲವರು ಬರೆದುಕೊಂಡಿದ್ದಾರೆ. ಇನ್ನು ಕೆಲವರು, "ನಮ್ಮ ಬಾಲ್ಯದಲ್ಲೂ ಹೀಗೆಯೇ ಹಸು, ನಾಯಿಗಳು ನಿತ್ಯ ಮನೆ ಮುಂದೆ ಬಂದು ಆಹಾರ ಪಡೆದು ಹೋಗುತ್ತಿದ್ದ ದಿನಗಳು ನೆನಪಾದವು" ಎಂದು ಭಾವುಕರಾಗಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರಾಣಿಗಳನ್ನು ಕುಟುಂಬದ ಮತ್ತು ಸಮಾಜದ ಒಂದು ಭಾಗವಾಗಿಯೇ ನೋಡಲಾಗುತ್ತದೆ. ಮೂಕ ಪ್ರಾಣಿಯ ನಂಬಿಕೆ ಮತ್ತು ಮನುಷ್ಯನ ಕರುಣೆಗೆ ಸಾಕ್ಷಿಯಾಗಿರುವ ತೆಲಂಗಾಣದ ಈ ವಿಡಿಯೋ, ಯಾವುದೇ ಮುಖವಾಡವಿಲ್ಲದ ಶುದ್ಧ ಸ್ನೇಹಕ್ಕೆ ಹಿಡಿದ ಕೈಗನ್ನಡಿಯಾಗಿದೆ.












Click it and Unblock the Notifications