ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

'ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ': ಕೆಪಿಸಿಸಿ ಕಚೇರಿಯಲ್ಲಿ ಗುಡುಗಿದ ಡಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಂದುಕೊಂಡಂತೆಯೇ ಮಾಜಿ ಸಚಿವ, ಪಕ್ಷದ ನಾಯಕ, ಸುಮಾರು 50 ದಿನಗಳ ಕಾಲ ತಿಹಾರ್‌ ಜೈಲುವಾಸ ಕಳೆದು ಬಂದ ಡಿ. ಕೆ. ಶಿವಕುಮಾರ್‌ಗೆ ಭಾರಿ ಸ್ವಾಗತ ಸಿಕ್ಕಿದೆ. ಶನಿವಾರ ಮಧ್ಯಾಹ್ನ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿ. ಕೆ. ಶಿವಕುಮಾರ್‌ಗೆ ಅಭಿಮಾನಿಗಳು, ರಾಜಕೀಯ ಮುಖಂಡರು, ಕನ್ನಡ ಸಂಘಟನೆಗಳ ಪ್ರಮುಖರು ದೊಡ್ಡ ಸಂಖ್ಯೆಯಲ್ಲಿ ನೆರೆದು ಬರಮಾಡಿಕೊಂಡಿದ್ದಾರೆ.

ವಿಮಾನ ನಿಲ್ದಾಣದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಜನರೆಡೆಗೆ ಕೈಬೀಸುತ್ತ ಬಂದ ಡಿ. ಕೆ. ಶಿವಕುಮಾರ್, ತಾವೇ 'ಮ್ಯಾನ್ ಆಫ್‌ ದಿ ಡೇ' ಎಂಬುದನ್ನು ಶನಿವಾರ ರಾಜ್ಯದ ಜನತೆಗೆ ಸಂದೇಶ ರವಾನಿಸಿದ್ದಾರೆ.

ದೇವನಹಳ್ಳಿಯಿಂದ ಆರಂಭಗೊಂಡ ಭಾರಿ ಮೆರವಣಿಗೆ ಸುಮಾರು 7 ಕಿ.ಮೀ ದೂರದಲ್ಲರುವ ಸಾದಹಳ್ಳಿ ಗೇಟ್‌ ತಲುಪಲು ತೆಗೆದುಕೊಂಡ ಸಮಯ 3 ಗಂಟೆಗಳು. ಈ ಸಮಯದಲ್ಲಿ ತೂರಿದ ಹೂವಿನ ಹಾರುಗಳು, ಡಿ. ಕೆ. ಶಿವಕುಮಾರ್‌ಗೆ ನೀಡಿದ ಬೊಕ್ಕೆಗಳಿಗೆ ಲೆಕ್ಕವೇ ಇರಲಿಲ್ಲ.

ಸಾದಹಳ್ಳಿ ಗೇಟ್‌ನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, "ಇದು ಅಂತ್ಯ ಅಲ್ಲ, ಅಂತ್ಯ ಅಲ್ಲ... ಆರಂಭ,'' ಎನ್ನುವ ಮೂಲಕ ಜೈಲುವಾಸದ ನಂತರವೂ ತಮ್ಮ ಖದರ್ ಕಡಿಮೆಯಾಗಿಲ್ಲ ಎಂಬುದನ್ನು ಬಿಡಿಸಿಟ್ಟರು.

ಒಟ್ಟಾರೆ, ಬೆಂಗಳೂರಿನ ಬಂದಿಳಿದ ಡಿ. ಕೆ. ಶಿವಕುಮಾರ್, ನಡೆದ ಮೆರವಣಿಗೆ ಹಾಗೂ ನಂತರದ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

DK Shivakumar Land in Bengaluru Live Updates in kannada

Newest FirstOldest First
7:40 PM, 26 Oct

ಟ್ರಾಫಿಕ್ ಸಮಸ್ಯೆಗೆ ಕ್ಷಮೆ ಕೋರಿದ ಡಿಕೆ

"ರ್ಯಾಲಿಯಿಂದಾಗಿ ಏರ್‌ಪೋರ್ಟ್‌ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಜನ ಹರಿದು ಬರುವುದು ಸಹಜ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಇದರಿಂದಾಗಿ ಹಲವರಿಗೆ ಸಮಸ್ಯೆಯಾಗಿದೆ. ಅವರೆಲ್ಲರ ಬಳಿ ಕ್ಷಮೆ ಕೋರುತ್ತೇನೆ," ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
7:36 PM, 26 Oct

'ಹಿಂದೆ ಹೋಗುವ ಪ್ರಶ್ನೆ ಇಲ್ಲ'

ಒಂದಷ್ಟು ನೇರವಾಗಿ, ಇನ್ನೊಂದಿಷ್ಟು ಪರೋಕ್ಷವಾಗಿ ಡಿ. ಕೆ. ಶಿವಕುಮಾರ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. "ಬಿಜೆಪಿ ಸ್ನೇಹಿತರು ನನ್ನ ಮಗಳ ವಿಚಾರದಲ್ಲಿಯೂ ಮಾತನಾಡಿದ್ದಾರೆ. ಇಲಿ ಹೋಯಿತು ಅಂದಿದ್ದಾರೆ. ನಾನಿನ್ನೂ ಮಾಧ್ಯಮಗಳಲ್ಲಿ ಏನೇನು ಬಂದಿದೆ, ಯಾರು ಯಾರು ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅದಕ್ಕೆಲ್ಲವೂ ಉತ್ತರ ನೀಡುತ್ತೇನೆ," ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ರಾಜಕೀಯ ಹೋರಾಟದ ಹೊಸ ಆಯಾಮವೊಂದು ಆರಂಭಗೊಳ್ಳುವ ಮುನ್ಸೂಚನೆ ನೀಡಿದರು. ಕುಟುಂಬದವರಿಗೆ ವಿಚಾರಣೆ ನೆಪದಲ್ಲಿ ಹಿಂದೆ ನೀಡಲಾಗಿದೆ ಎಂದು ಭಾವುಕರಾಗಿ ಆರೋಪಿಸಿದರು. ಅಂತಿಮವಾಗಿ ಹಿಂದೆ ಹೋಗುವ ಪ್ರಶ್ನೆಯೂ ಇಲ್ಲ ಎಂದು ಡಿಕೆ ಘೋಷಿಸಿದರು.
7:30 PM, 26 Oct

ಉಳಿದವರ ಅಫಿಡವಿಟ್: ಏನಿದು?

"ನಾನು ತಪ್ಪು ಮಾಡಿದ್ದರೆ, ಈ ದೇಶದ ಕಾನೂನು ಉಲ್ಲಂಘನೆ ಮಾಡಿದ್ದರೆ ಆ ದೇವರು ಹಾಗೂ ಕಾನೂನು ನನಗೆ ಶಿಕ್ಷೆ ನೀಡಲಿ. ಗೌರವಾನ್ವಿತ ಇಡಿ ಇಲಾಖೆ ನಿನ್ನೆ ಸುಪ್ರಿಂ ಕೋರ್ಟ್‌ಗೆ ಹೋಗಿದೆ. ಅದರ ಬಗ್ಗೆ ಕಾಮೆಂಟ್ ಮಾಡೋಕೆ ಹೋಗಲ್ಲ. ಕಾನೂನಿನಲ್ಲಿ ಎಲ್ಲದಕ್ಕೂ ಅವಕಾಶ ಇದೆ. ಇದರ ಜತೆಗೆ ಸಿಬಿಐ ತನಿಖೆಗೆ ಅನುಮತಿ ಕೇಳಿದ್ರಂತೆ. ಕೆಲವೇ ನಿಮಿಷಗಳನ್ನು ಅನುಮತಿಯನ್ನೂ ನೀಡಿದ್ದಾರಂತೆ. ತಪ್ಪು ಮಾಡಿದ್ದರೆ ನೇಣು ಹಾಕಲಿ. ತಾಯಿಗೆ ಮಗ ಬೇನಾಮಿದಾರ ಅಂತ ಹೇಳಿದ್ದಾರೆ. ಅದರ ಬಗ್ಗೆ ಚರ್ಚೆ ನಡೆಯಬೇಕು. ಈಗ ನ್ಯಾಯಾಲಯದಲ್ಲಿದೆ. ಕಾನೂನಿನ ಪೀಠದಿಂದ ಅನ್ಯಾಯದ ತೀರ್ಪು ಬರಬಾರದು. ನನ್ನ ಅಫಿಡವಿಟ್, ಬೇರೆಯವರ ಅಫಿಡವಿಟ್ ಎಲ್ಲದರ ಬಗ್ಗೆಯೂ ಚರ್ಚೆಯಾಗಲಿ. ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಇಡೀ ದೇಶಕ್ಕೆ ಮನಿ ಲಾಂಡ್ರಿಂಗ್ ಕೇಸ್ ದೊಡ್ಡ ಸಂದೇಶ ನೀಡಲಿದೆ."
7:24 PM, 26 Oct

ಸೋನಿಯಾ ಗಾಂಧಿ ಜೈಲಿಗೆ ಬಂದ ಕತೆ

ಸೋನಿಯಾ ಗಾಂಧಿ ಜೈಲಿಗೆ ಬಂದ ಕತೆ
"ಸೋನಿಯಾ ಗಾಂಧಿ ಜೀವನದಲ್ಲಿ ಜೈಲು ನೋಡಿರಲಿಲ್ಲ. ಅವರು ಹಿಂದೆಯೇ ಬರಲು ಮುಂದಾಗಿದ್ದರು. ಆದರೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಕುಟುಂಬದವರಿಗೂ ಬರಲು ಅವಕಾಶ ನೀಡಲಿಲ್ಲ. ತಿಹಾರ್ ವಿಚಾರ, ಇಡಿ ವಿಚಾರ ಮುಂದೆ ಹೇಳ್ತೀನಿ. ಗೌಡರು (ದೇವೇಗೌಡ) ಕೂಡ 2-3 ದಿನ ಬಂದು ಅಲ್ಲಿಯೇ ಇದ್ದರೂ ಜೈಲಿನಲ್ಲಿ ಭೇಟಿಯಾಗಲೂ ಅವಕಾಶ ಆಗಲಿಲ್ಲ. ಸಿದ್ದರಾಮಯ್ಯ ಕೂಡ ಆಸ್ಪತ್ರೆಗೆ ಬಂದು ಭೇಟಿ ನೀಡಿದರು. ಪರಮೇಶ್ವರ್‌ ಅವರಿಗೆ ಡಾಕ್ಟರ್ ವೇಷ ಹಾಕಿಸಿಕೊಂಡು ಕರೆತಂದರು. ಸೋನಿಯಾ ಮೇಡಂ ಕೂಡ ಹಾಗೆ ಕೊನೆಗೆ ಬಂದು ಭೇಟಿ ಮಾಡಿದರು. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಅವರ ಜತೆ ಕುಳಿತು ಅನೇಕ ವಿಚಾರ ಚರ್ಚೆ ಮಾಡಿದ್ದೇವೆ. ಇದರಿಂದ ನನಗಲ್ಲ, ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಿದೆ": ಡಿ. ಕೆ. ಶಿವಕುಮಾರ್.
7:19 PM, 26 Oct

"ನಾನು ಹಿಂದೆ ಹೋಗುವುದಿಲ್ಲ. ನಾನು ಮಾತನಾಡಿದ್ದಕ್ಕೆ ಬದ್ಧನಾಗಿದ್ದೇನೆ. ರಾಜಕಾರಣದಲ್ಲಿ ನಡೆಯುವ ಚದುರಂಗ ಆಟಕ್ಕೆ ಬೇಕಾದ ಬದಲಾವಣೆಗಳು ಗೊತ್ತಿವೆ. ಜತೆಗೆ ದೊಡ್ಡ ಸೈನ್ಯ ಇದೆ. ಅದರ ಅಭಿಮಾನ ಏನು ಎಂಬುದನ್ನು ನೀವು ನೋಡಿದ್ದೀರಿ. ಅವರ ಋಣ ತೀರಿಸುವ ಶಕ್ತಿ ನೀಡು ಎಂಬ ದೇವರಲ್ಲಿ ಕೇಳಿಕೊಳ್ಳುತ್ತೇನೆ,": ಡಿ. ಕೆ. ಶಿವಕುಮಾರ್
7:15 PM, 26 Oct

"ನಮ್ಮ ಅಫಿಡವಿಟ್ ಬಗ್ಗೆ, ನ್ಯಾಯಾಲಯದಲ್ಲಿ ನಡೆದ ಪ್ರಕ್ರಿಯೆ ಬಗ್ಗೆ ಮಾಧ್ಯಮಗಳು ವ್ಯಾಖ್ಯಾನ ಮಾಡಿದ್ದಾರೆ. ಜನ ಚರ್ಚೆ ಮಾಡಿದ್ದಾರೆ. ಕೆಲವರು ಗುಮಾನಿ ವ್ಯಕ್ತಪಡಿಸಿದ್ದಾರೆ. ಇದಕ್ಕೆಲ್ಲಾ ವಾಸ್ತವದ ನೆಲೆಯಲ್ಲಿ, ದಾಖಲೆಗಳ ಸಮೇತ ಮಾಹಿತಿ ನೀಡ್ತಿನಿ. ಬಹಳ ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿ ನಾಯಕನಾಗಿದ್ದೆ. ಗುಂಡೂರಾಯರ ಕಾಲದಲ್ಲಿ ಕೆಲಸ ಮಾಡಿದ್ದೇನೆ. ನಾನು ಯಾರಿಗೂ ದೋಖ ಮಾಡಿಲ್ಲ." "ಪಕ್ಷದಲ್ಲಿಯೇ ಅನೇಕವು ನಡೆದಿವೆ. ಅಧಿಕಾರದಿಂದ ದೂರವೂ ಇಟ್ಟಿರಬಹುದು. ಕೆಲವೊಮ್ಮೆ ಕೆಲವರು ಹರಕೆಯ ಕುರಿಯಾಗಬೇಕಾಗುತ್ತದೆ. ಕೆಲವರು ಅದೃಷ್ಟದಿಂದ ಅವಕಾಶಗಳು ಸಿಗುತ್ತವೆ. ಅಂತವನ್ನು ತಾಳ್ಮೆಯಿಂದ ಒಪ್ಪಿಕೊಂಡಿದ್ದೇನೆ. ಅನೇಕ ಕಷ್ಟಕಾಲದಲ್ಲಿ ನನ್ನ ಮೇಲಿಟ್ಟ ಪಕ್ಷದ ನಾಯಕರ ನಂಬಿಕೆಯನ್ನು, ಹೇಳಿದ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ.": ಡಿ. ಕೆ. ಶಿವಕುಮಾರ್
7:10 PM, 26 Oct

"ಇದು ವಿಶೇಷವಾಗಿರುವ ಸಂದರ್ಭ. ನಾನು ಮೊದಲು ಮಾಧ್ಯಮದ ಸ್ನೇಹಿತರಿಗೆ ಧನ್ಯವಾದ ಅರ್ಪಿಸುತ್ತೇನೆ. ಕಲ್ಲು ಪ್ರಕೃತಿ, ಅದನ್ನು ಕಡಿದರೆ ಆಕೃತಿ ಆಗುತ್ತೆ, ಅದನ್ನು ಪೂಜಿಸಿದರೆ ಸಂಸ್ಕೃತಿ ಆಗುತ್ತೆ. ಇದೇ ಜೀವನದ ಪಾಠ. ಅದರ ಬಗ್ಗೆ ಮುಂದೆ ಹೇಳ್ತೇನೆ. ಪ್ರಜಾಪ್ರಭುತ್ವದಲ್ಲಿ ನೀವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ನನಗೆ ಯಾಕೆ ಈ ಪರಿಸ್ಥಿತಿ ಬಂತು. ಈ ಕುರಿತು ದೊಡ್ಡ ಆಲೋಚನೆ ಮಾಡಿದ್ದೇನೆ. 30ನೇ ತಾರೀಖಿನಿಂದ 23ನೇ ತಾರೀಖು ರಾತ್ರಿವರೆಗೂ ನಾನು ಯಾವ ಪರಿಸ್ಥಿತಿಯಲ್ಲಿ ಇದ್ದೆ ಎಂಬುದು ನೆನಪಿದೆ. ನನ್ನ ಜತೆಗೆ ಪಕ್ಷದವರು, ಎಲ್ಲಾ ಪಕ್ಷದವರು, ಬಿಜೆಪಿಯವರನ್ನೂ ಒಳಗೊಂಡಂತೆ ಎಲ್ಲರೂ ಅಭಿಮಾನ ತೋರಿಸಿದರು. ಇದನ್ನು ಅಳೆಯಲು ಸಾಧ್ಯವಿಲ್ಲ. ತಾವೇ (ಮಾಧ್ಯಮದವರು) ವ್ಯಾಖ್ಯಾನ ಮಾಡಿದರೆ ಬಹಳ ಒಳ್ಳೆಯದು. ನಾನು ಕೊಟ್ಟಿರುವ ಎಲೆಕ್ಷನ್ ಅಫಿಡವಿಟ್‌ ಸಲ್ಲಿಸಿದ್ದೇನೆ. ತಮ್ಮ, ಪತ್ನಿ ಅಫಿಡವಿಟ್ ಅಲ್ಲಿಸಿದ್ದೇನೆ. ಮಗಳ ಹೆಸರಿನಲ್ಲಿಯೂ ಅಫಿಡವಿಟ್ ಕೊಟ್ಟಿದ್ದೇನೆ. ನಾನೇನಾದರೂ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ,": ಡಿ. ಕೆ. ಶಿವಕುಮಾರ್
Advertisement
7:05 PM, 26 Oct

ಮಾತು ಆರಂಭಿಸಿದ ಡಿಕೆ

"ಬೆಂಗಳೂರಿನಿಂದ 29ನೇ ತಾರೀಖು ರಾತ್ರಿ 9.40 ನಿಮಿಷಕ್ಕೆ ದೆಹಲಿಯ ಇಡಿ ಅಧಿಕಾರಿಗಳು ಸಮನ್ಸ್ ನೀಡಿದರು. ಬೆಳಗ್ಗೆ 11 ಗಂಟೆಗೆ ಬರಬೇಕು ಅಂತ. ನಾನು 11ಕ್ಕೆ ಬರಲು ಸಾಧ್ಯವಿಲ್ಲ, ಸ್ವಲ್ಪ ಲೇಟ್ ಆಗುತ್ತೆ ಅಂತ ಬಂದ ಅಧಿಕಾರಿಗಳಿಗೆ ತಿಳಿಸಿದೆ. ನಾನು 30ನೇ ತಾರೀಖು ಇಡಿ ಕಚೇರಿಗೆ ಹೋದೆ. ನಾನು ಲಾ ಮೇಕರ್, ಏಳು ಬಾರಿ ಶಾಸಕನಾಗಿದ್ದೇನೆ. ನಾವೇ ಮಾಡಿರುವ ಕಾನೂನಿಗೆ ಬೆಲೆ ನೀಡುವ ಸಲುವಾಗಿ ಇಡಿ ಕಚೇರಿಗೆ ಭೇಟಿ ನೀಡಿದೆ. ಅಲ್ಲಿಂದ ನಾನು ನೇರವಾಗಿ ನನ್ನ ದೇವಾಲಯಕ್ಕೆ ಬಂದಿದ್ದೇನೆ, ಪಕ್ಷದ ಕಚೇರಿ ನನ್ನ ದೇವಾಲಯ,": ಡಿ. ಕೆ. ಶಿವಕುಮಾರ್.
7:00 PM, 26 Oct

ಡಿ. ಕೆ. ಶಿವಕುಮಾರ್‌ ಅಭಿಮಾನಿಗಳ ಟ್ವೀಟ್ ಸ್ಯಾಂಪಲ್
6:57 PM, 26 Oct

"ಡಿ. ಕೆ. ಶಿವಕುಮಾರ್ ಅವರಿಗೆ ಸಿಕ್ಕಿರುವ ಭರ್ಜರಿ ರೆಸೆಪ್ಶನ್‌ ಬಿಜೆಪಿ ಅವರಿಗೆ ಒಂದು ಸಂದೇಶ ನೀಡಿದೆ. ನೀವು ತೇಜೋವಧೆಗೆ ಇಳಿಯುವುದನ್ನು ಬಿಡಿ ಎಂದು ಜನ ಹೇಳುತ್ತಿದ್ದಾರೆ. ಇಡಿ, ಸಿಬಿಐ, ಐಟಿಯನ್ನು ಸ್ವಾರ್ಥಕ್ಕಾಗಿ ಬಳಸುವುದನ್ನು ಬಿಡಿ ಎಂಬ ಸಂದೇಶವನ್ನು ಜನ ರವಾನಿಸಿದ್ದಾರೆ. ಪಕ್ಷ ಇಂತಹ ದಾಳಿಗಳನ್ನು ಒಗ್ಗಟ್ಟಾಗಿ ಎದುರಿಸುತ್ತೀವಿ ಎಂದು ತೋರಿಸಿದ್ದೀವಿ. ಜನ ಮುಖ್ಯಮಂತ್ರಿಯಾಗಿದ್ದರೂ ಇಷ್ಟು ದೊಡ್ಡ ಅಭಿಮಾನ ಸಿಗುತ್ತಿರಲಿಲ್ಲ ಎಂಬುದು ನನ್ನ ಭಾವನೆ,": ದಿನೇಶ್ ಗುಂಡೂರಾವ್.
6:54 PM, 26 Oct

"ಬೇಲ್‌ ಮೇಲೆ ಬಂದವರಿಗೆ ಯಾಕಿಷ್ಟು ಸ್ವಾಗತ ಕೋರುತ್ತಿದ್ದಾರೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಅವರೇನು (ಡಿಕೆ) ಸ್ವಾಗತ ಮಾಡಿ ಎಂದು ಕೋರಿರಲಿಲ್ಲ. ನಾನೇ ಅವರಿಗೆ ಮನವಿ ಮಾಡಿಕೊಂಡಿದ್ದೆ. ನೇರವಾಗಿ ಕೆಪಿಸಿಸಿ ಕಚೇರಿಗೆ ಬನ್ನಿ ಎಂದು ಆಹ್ವಾನಿಸಿದ್ದೆ. ಯಾಕೆಂದರೆ ಇದು ಅವರ ವೈಯಕ್ತಿಕ ವಿಚಾರ ಅಲ್ಲ. ಬದಲಿಗೆ ಪಕ್ಷದ ವಿಚಾರ ಎಂಬ ಕಾರಣಕ್ಕೆ ಬನ್ನಿ ಎಂದು ಕರೆದಿದ್ದೆ. ಜನ ಸ್ವಯಂ ಪ್ರೇರಣೆಯಿಂದ ಬಂದು ಸೇರಿದ್ದಾರೆ. ಇದು ಬಿಜೆಪಿ ಸೃಷ್ಟಿಸಿದ ಆತಂಕಕ್ಕೆ ಉತ್ತರವಾಗಿದೆ,": ದಿನೇಶ್ ಗುಂಡೂರಾವ್
6:49 PM, 26 Oct

"ಗುಜರಾತ್ ಚುನಾವಣೆ ಸಮಯದಲ್ಲಿ ರೆಸಾರ್ಟ್‌ನಲ್ಲಿ ನಾವೆಲ್ಲಾ ಸೇರಿ ಗುಜರಾತ್ ಶಾಸಕರಿಗೆ ಆಶ್ರಯ ನೀಡಿದೆವು. ಅದರ ನಂತರವೇ ಇವೆಲ್ಲಾ ಆರಂಭವಾಯಿತು. ಐಟಿ, ಇಡಿ ಬಿಜೆಪಿ ಕೈಗೊಂಬೆಗಳಾಗಿವೆ. ಕೇಂದ್ರ ಸರಕಾರ ಹೇಳಿದಂತೆ ಅವು ಕೇಳುತ್ತಿವೆ,": ದಿನೇಶ್ ಗುಂಡೂರಾವ್
Advertisement
6:47 PM, 26 Oct

ದಿನೇಶ್ ಗುಂಡೂರಾವ್ ಬೆಂಬಲ

"ಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಗೆ ಡಿ. ಕೆ. ಶಿವಕುಮಾರ್ ಆಗಮಿಸಿದ್ದಾರೆ. ವಿಶೇಷವಾದ ಸಂದರ್ಭದಲ್ಲಿ ಈ ಗೋಷ್ಠಿ ನಡೆಯುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಬಿಜೆಪಿ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡಲು ಶುರುಮಾಡಿತು. ಸರಕಾರ ಬೀಳಿಸುವ ಪ್ರಯತ್ನ ಮಾಡಿತು. ತೇಜೋವಧೆಗೆ ಇಳಿಯಿತು. ಬಿಜೆಪಿಯ ಕೇಂದ್ರ ಸರಕಾರ ನೇರವಾಗಿ ಈ ಕೆಲಸವನ್ನು ಮಾಡಿದ್ದು ನಿಮಗೆಲ್ಲಾ ಗೊತ್ತಿದೆ. ಐಟಿ ರೇಡ್‌ಗಳ ಮಾಡಿಸಲಾಯಿತು. ಐಟಿ ಉಪಯೋಗಿಸಿ ಕಿರುಕುಳ ನೀಡಿತು. ದೇಶದಲ್ಲಿ ಮೊದಲ ಬಾರಿಗೆ ಬಾರಿ ಐಟಿ ವಿರುದ್ಧ ಪ್ರತಿಭಟನೆ ನಡೆಸಿದ ಇತಿಹಾಸ ನಡೆಯಿತು.": ದಿನೇಶ್ ಗುಂಡೂರಾವ್
6:34 PM, 26 Oct

ಗೋಷ್ಠಿಯಲ್ಲಿ ಮುಖಂಡರು

ಡಿಕೆ ಪತ್ರಿಕಾಗೋಷ್ಠಿ ಆರಂಭವಾಗಲಿದೆ. ಮಾಜಿ ಸಚಿವ ಚಲುವರಾಯ ಸ್ವಾಮಿ, ಸಂಸದ ಡಿ. ಕೆ. ಸುರೇಶ್, ಮಾಜಿ ಸಂಸದ ವಿ. ಎಸ್. ಉಗ್ರಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮತ್ತಿತರರು ಇದ್ದಾರೆ.
6:25 PM, 26 Oct

ಕೆಪಿಸಿಸಿ ಕಚೇರಿಗೆ ಡಿಕೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಡಿ. ಕೆ. ಶಿವಕುಮಾರ್ ಇದೀಗ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. ಇದಕ್ಕೂ ಮೊದಲು ಸಾವಿರಾರು ಜನರ ಮೆರವಣಿಗೆಯನ್ನು ಸಾದಹಳ್ಳಿ ಗೇಟ್‌ ಬಳಿ ಉದ್ದೇಶಿಸಿ ಮಾತನಾಡಿದ ಡಿ. ಕೆ. ಶಿವಕುಮಾರ್, ಕೆಪಿಪಿಸಿ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ 'ಎಲ್ಲವನ್ನೂ ಬಿಚ್ಚಿಡುತ್ತೀನಿ' ಎಂದಿದ್ದರು. ಈ ಹಿನ್ನೆಲೆಯಲ್ಲಿ ಅವರೀಗ ಏನು ಮಾತನಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
5:58 PM, 26 Oct

ಆಪಲ್‌ ಹಾರಕ್ಕೆ ನೂಕುನುಗ್ಗಲು!

ಡಿ.ಕೆ. ಶಿವಕುಮಾರ್ ಸ್ವಾಗತಕ್ಕಾಗಿ ನಡೆದ ತಯಾರಿಗಳ ಪೈಕಿ ಬೆಳಗ್ಗೆಯಿಂದಲೂ ಗಮನ ಸೆಳೆದಿದ್ದು ಸೇಬು ಹಣ್ಣುಗಳ ಹಾರ. ಸುಮಾರು 500 ಕೆ. ಜಿಗಳದ್ದು ಎನ್ನಲಾಗಿದ್ದ ಸೇಬುಗಳ ಹಾರವನ್ನು ಕೆಪಿಸಿಸಿ ಕಚೇರಿ ಮುಂದೆ ಡಿ. ಕೆ. ಶಿವಕುಮಾರ್‌ಗೆ ಕ್ರೇನ್‌ ಮೂಲಕ ಹಾಕಲಾಯಿತು. ಈ ಸಮಯದಲ್ಲಿ ಅಭಿಮಾನಿಗಳು ಸೇಬುಗಳನ್ನು ಕಿತ್ತುಕೊಳ್ಳಲು ಮುಗಿಬಿದ್ದಿದ್ದು ಸ್ವಾರಸ್ಯಕರವಾಗಿತ್ತು.
5:58 PM, 26 Oct

ಬಿಜೆಪಿಯ ಸ್ನೇಹಿತರೂ ಸಹಾಯ ಮಾಡಿದ್ದಾರೆ: ಡಿಕೆ ಶಿವಕುಮಾರ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 50 ದಿನ ಸೆರೆವಾಸದಿಂದ ಜೈಲಿನಿಂದ ಹೊರಬಂದು ಮೂರು ದಿನಗಳ ಬಳಿಕ ಮಾಜಿ ಸಚಿವ ಡಿಕೆ ಶಿವಕುಮಾರ್ ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರು.
5:46 PM, 26 Oct

ಡಿಕೆ ಟ್ರೆಂಡಿಂಗ್

ಡಿಕೆ ಟ್ರೆಂಡಿಂಗ್
ಕರ್ನಾಟಕಕ್ಕೆ ಬಂದಿಳಿದ ಡಿಕೆಶಿಗೆ ಭಾರಿ ಸ್ವಾಗತ ದೊರೆತಿದೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಅಭಿಮಾನಿಗಳು ಮೆರವಣಿಗೆ ಮೂಲಕ ಕೆಪಿಪಿಸಿ ಕಚೇರಿಗೆ ಆಗಮಿಸುತ್ತಿದ್ದಾರೆ. ಇದೇ ವೇಳೆ ಟ್ವಿಟರ್‌ನಲ್ಲೂ ಡಿಕೆಶಿ ಟ್ರೆಂಡಿಂಗ್‌ನಲ್ಲಿದ್ದಾರೆ. #DKShivakumar ಹ್ಯಾಶ್‌ಟ್ಯಾಗ್‌ ಹಲವು ಸ್ವಾರಸ್ಯಕರ ಟ್ವೀಟ್‌ಗಳನ್ನು ಒಳಗೊಂಡಿದೆ.
5:19 PM, 26 Oct

ಕೆಪಿಸಿಸಿ ಕಚೇರಿಯತ್ತ ಡಿಕೆಶಿ

ಸಾದಹಳ್ಳಿ ಗೇಟ್‌ ಬಳಿ ಜನರನ್ನು ಉದ್ದೇಶಿಸಿ ಮಾತನಾಡಿ ಡಿ. ಕೆ. ಶಿವಕುಮಾರ್ ನಂತರ ನೇರವಾಗಿ ಕೆಪಿಸಿಸಿ ಕಚೇರಿಯತ್ತ ಹೊರಟಿದ್ದಾರೆ. ಸಂಚಾರ ದಟ್ಟಣೆ ಹಾಗೂ ಸುಮಾರು 7 ಕಿ.ಮೀ ಮೆರವಣಿಗೆ ಭಾರಿ ಸಮಯ ತೆಗೆದುಕೊಂಡ ಹಿನ್ನೆಲೆಯಲ್ಲಿ ನೇರವಾಗಿ ಕಚೇರಿಗೆ ತೆರಳುವ ನಿರ್ಧಾರ ತೆಗೆದುಕೊಂಡರು ಎಂದು ವರದಿಯಾಗಿದೆ.
4:53 PM, 26 Oct

ನಾನು ಅತ್ತರೆ ನೋವಿನಿಂದ ಅಳುವುದಿಲ್ಲ, ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಸೋತು ಕಣ್ಣೀರು ಹಾಕುತ್ತೇನೆ, ನಾನು ಅಳುವ ಮಗ ಅಲ್ಲ, ಆಳುವ ಮಗ-ಡಿ.ಕೆ.ಶಿವಕುಮಾರ್
4:49 PM, 26 Oct

ಹಲವು ಶಾಸಕರು, ಮುಖಂಡರು ಡಿ.ಕೆ.ಶಿವಕುಮಾರ್ ಅವರ ಜೊತೆ ಸೇರಿದ್ದಾರೆ. ಕೃಷ್ಣಬೈರೇಗೌಡ, ಮುನಿಯಪ್ಪ, ಡಿ.ಕೆ.ಸುರೇಶ್ ಇನ್ನೂ ಹಲವರು ಡಿ.ಕೆ.ಶಿವಕುಮಾರ್ ಜೊತೆ ಮೆರವಣಿಗೆಯಲ್ಲಿದ್ದಾರೆ.
4:33 PM, 26 Oct

ಡಿ.ಕೆ.ಶಿವಕುಮಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಕುಮಾರಸ್ವಾಮಿ ಅವರು ನಿಲ್ದಾಣದಲ್ಲಿಯೇ ಡಿಕೆಶಿ ಯನ್ನು ಭೇಟಿ ಮಾಡಿ ಸ್ವಾಗತ ಮಾಡಿದರು.
4:28 PM, 26 Oct

ಬಹಳ ವಿಚಾರಗಳನ್ನು ಮಾತನಾಡುವವನಿದ್ದೇನೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಆಯೋಜಿಸಿದ್ದಾರೆ. ದೇಶಕ್ಕೆ ಸಂದೇಶವೊಂದು ತಲುಪಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲಿ ಹೆಚ್ಚಿನ ವಿಷಯ ನಾನು ಮಾತನಾಡುತ್ತೇನೆ-ಡಿಕೆಶಿ
4:27 PM, 26 Oct

ಇದು ಅಂತ್ಯವಲ್ಲ, ಇದು ಆರಂಭ, ಅನ್ಯಾಯದ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ನಂಜಾವಧೂತರು, ಕನ್ನಡ ರಕ್ಷಣಾ ವೇದಿಕೆ, ಸಮಾಜದ ಸಂಘ, ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದಾರೆ ಅವರಿಗೆಲ್ಲರಿಗೂ ನಾನು ಋಣಿ- ಡಿಕೆಶಿ
4:26 PM, 26 Oct

ನೂರಕ್ಕೂ ಹೆಚ್ಚು ಜನ ನನ್ನ ಸ್ನೇಹಿತರಿಗೆ, ಬಂಧುಗಳಿಗೆ ಕಿರುಕುಳ ನೀಡಿದ್ದನ್ನು ನೀವೆಲ್ಲಾ ನೋಡಿದ್ದೀರಿ. ನನ್ನ ತಾಯಿ, ಮಗಳು ಎಲ್ಲರಿಗೂ ಕಿರುಕುಳ ನೀಡಿದ್ದಾರೆ. ನಾನು ನನ್ನ ಕುಟುಂಬಕ್ಕೆ ಮಾತ್ರ ಸೀಮಿತವಲ್ಲ, ನಾನು ನಿಮ್ಮೆಲ್ಲರ ಕುಟುಂಬದ ಆಸ್ತಿ-ಡಿಕೆಶಿ
4:24 PM, 26 Oct

ನಿಮ್ಮ ಅಭಿಮಾನ ಪ್ರೀತಿಯನ್ನು ತೋರಿಸಿದ್ದೀರಿ. ನನ್ನ ಶಾಸಕ ಮಿತ್ರರೇ, ಮುನಿಯಪ್ಪ, ಕೃಷ್ಣಬೈರೇಗೌಡ, ಹಲವು ಮುಖಂಡರು ಬಂದಿದ್ದೀರಿ. ಪ್ರತಿಯೊಬ್ಬರ ಹೆಸರು ಹೇಳಲಾಗುತ್ತಿಲ್ಲ ಆದರೆ ಎಲ್ಲರ ಪ್ರೀತಿ ನನಗೆ ನೆನಪಿದೆ-ಡಿಕೆಶಿ
4:23 PM, 26 Oct

ನನ್ನಂತಹಾ ಪ್ರಾಮಾಣಿಕ ಕಾರ್ಯಕರ್ತನಿಗೆ ಆದ ಅನ್ಯಾಯವನ್ನು ನೀವು ಪ್ರತಿಭಟಿಸಿದ್ದೀರಿ. ನಾನು ಯಾರ ಬಳಿಯೂ ಲಂಚ ಪಡೆದಿಲ್ಲ, ಯಾರಿಗೂ ಕೇಡು ಬಯಸಿಲ್ಲ ಆದರೂ ನನ್ನ 40 ವರ್ಷದ ರಾಜಕಾರಣವನ್ನು ಕೊನೆಗಾಣಿಸಲು ಪ್ರಯತ್ನ ಮಾಡಲಾಗಿದೆ-ಡಿ.ಕೆ.ಶಿವಕುಮಾರ್
4:22 PM, 26 Oct

ಹಗಲು, ರಾತ್ರಿ ನನಗೋಸ್ಕರ ಪೂಜೆ, ಪ್ರಾರ್ಥನೆ ಮಾಡಿ, ರಸ್ತೆಗಿಳಿದು ಹೋರಾಟ ಮಾಡಿದ್ದೀರಿ, ಇದೆಲ್ಲಾ ನನ್ನ ಪುಣ್ಯ. ನಿಮ್ಮ ಪ್ರೀತಿ ಅಭಿಮಾನ, ಸಾಗರವಾಗಿ ಉಕ್ಕಿ ಬಂದು ನನ್ನನ್ನು ಸೇರಿಕೊಂಡಿದೆ-ಡಿಕೆಶಿ
4:21 PM, 26 Oct

ಕಾರ್ಯಕರ್ತರನ್ನುದ್ದೇಶಿಸಿ ಡಿ.ಕೆ.ಶಿವಕುಮಾರ್ ಭಾಷಣ ಆರಂಭಿಸಿದ್ದಾರೆ. ಹಲವು ಮುಖಂಡರು ಸೇರಿದ್ದು, ಎಲ್ಲರಿಗೂ ಧನ್ಯವಾದ ಹೇಳಿ ಮಾತು ಆರಂಭಿಸಿದ್ದಾರೆ.
3:44 PM, 26 Oct

ವಿಮಾನ ನಿಲ್ದಾಣ ಬಿಟ್ಟು ಡಿ.ಕೆ.ಶಿವಕುಮಾರ್ ಮುಂದೆ ಬಂದಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, 500 ಕೆ.ಜಿ ತೂಕದ ಸೇಬಿನ ಹಾರವನ್ನು ಅವರಿಗಾಗಿ ಕಾಯ್ದಿರಿಸಲಾಗಿದೆ. ದಾರಿಯಲ್ಲಿ ಶಿವಕುಮಾರ್ ಮೇಲೆ ಪುಷ್ಪವೃಷ್ಠಿ ಆಗುತ್ತಿದೆ.
READ MORE

English summary
Former Minister D K Shivakumar Land in Bengaluru. He was in Jail for 50 days, He is returning to Karnataka after more than 55 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X