Namma Metro: ತುಮಕೂರಿಗೆ ಬರಲಿದೆ ಬೆಂಗಳೂರು ಮೆಟ್ರೋ: ಮಹತ್ವದ ಮಾಹಿತಿ, ವಿವರ ತಿಳಿಯಿರಿ
ತುಮಕೂರು, ಜೂನ್ 21: ತುಮಕೂರು ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್. ಬೆಂಗಳೂರು ನಮ್ಮ ಮೆಟ್ರೋ ತುಮಕೂರಿಗೆ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಕಾರ್ಯ ಸಾಧ್ಯತಾ ವರದಿ ಸಿದ್ಧವಾಗಿದೆ. "ತುಮಕೂರಿಗೆ ಹೆಚ್ಚಿನ ಶಕ್ತಿ ತುಂಬಲು, ಸ್ಯಾಟಲೈಟ್ ಟೌನ್ ಜತೆಗೆ, ಅಂತರನಗರ ರೈಲು ಹಾಗೂ ಮೆಟ್ರೋ ರೈಲು ನೀಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಸಚಿವ ಕೆ.ಎನ್. ರಾಜಣ್ಣ ಅವರ 75ನೇ ಜನ್ಮದಿನ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿ, ಕಲ್ಪತರು ನಾಡು ತುಮಕೂರು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೊಡ್ಡ ಪರಂಪರೆ ಇದೆ. ಬೆಂಗಳೂರಿನಂತೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅನೇಕ ಯೋಜನೆ ರೂಪಿಸುತ್ತಿದೆ ಎಂದರು.

ನೀವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ, ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಿ, ನಿಮ್ಮೆಲ್ಲರ ಸೇವೆ ಮುಂದುವರಿಸಲು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ರೈತರ ಬದುಕು ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಕೊಟ್ಟ ಮಾತಿನಂತೆ ನಡೆದು ಜನರ ಆಶೋತ್ತರ ಈಡೇರಿಸಿದ್ದೇವೆ. 2027ರ ಒಳಗಾಗಿ ಎತ್ತಿನ ಹೊಳೆ ನೀರನ್ನು ತುಮಕೂರು ಮಾರ್ಗವಾಗಿ ಹರಿಸಲು ತೀರ್ಮಾನಿಸಿದ್ದೇವೆ.
ಕುಡಿಯುವ ನೀರು ಪೂರೈಸಿದ ನಂತರ ಕೆರೆ ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ನಾವು ನಿಮಗೆ ನುಡಿದಂತೆ ನಡೆದಿದ್ದು, ನಮಗೆ ನಿಮ್ಮ ಆಶೀರ್ವಾದ ಬೇಕು. ನೀವು ಎಲ್ಲಿಯವರೆಗೂ ಆಶೀರ್ವಾದ ಮಾಡುತ್ತೀರೋ ಅಲ್ಲಿಯವರೆಗೆ ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ. ನಾವು ಪರಮೇಶ್ವರ್ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ರಚಿಸಿದ್ದೆವು. ನಮ್ಮ ಸರ್ಕಾರ 2 ವರ್ಷದಲ್ಲೇ 70% ಪ್ರಣಾಳಿಕೆಯಲ್ಲಿರುವ ಭರವಸೆ ಪೂರ್ಣಗೊಳಿಸಿದ್ದೇವೆ. ನಮ್ಮ ಈ ಹಿಂದಿನ ಸರ್ಕಾರದಲ್ಲಿ 165 ಭರವಸೆಗಳ ಪೈಕಿ 145ಕ್ಕೂ ಹೆಚ್ಚಿನ ಭರವಸೆ ಈಡೇರಿಸಿದ್ದೆವು ಎಂದು ಹೇಳಿದರು. ನಮ್ಮ ಗ್ಯಾರಂಟಿ ಹಾಗೂ ಎಲ್ಲಾ ಇಲಾಖೆಗಳಲ್ಲಿನ ಅಭಿವೃದ್ಧಿ ಯೋಜನೆ ದೇಶಕ್ಕೆ ಮಾದರಿಯಾಗಿದೆ. 4 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡಿಸಿ ಎಲ್ಲಾ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ವಿಜಯನಗರದಲ್ಲಿ 1,11,111 ಮಂದಿ ತಾಂಡಾ, ಬುಡಕಟ್ಟು ಜನರಿಗೆ, ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಮೂಲಕ ಭೂಮಿ ದಾಖಲೆ ಉಚಿತವಾಗಿ ಹಂಚಿದ್ದೇವೆ ಎಂದರು.
ಇದು ಐತಿಹಾಸಿಕ ಜನ್ಮದಿನ ಕಾರ್ಯಕ್ರಮ. ನೇರ ನುಡಿ ಸ್ವಾಭಿಮಾನದ ನಾಯಕ ರೈತಾಪಿ ಜನರ ಬದುಕು ಸುಧಾರಣೆಯ ಗುರಿ ಹೊಂದಿರುವ, ಆತ್ಮೀಯ ಸ್ನೇಹಿತನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ರಾಜಣ್ಣ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಜನರ ಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ರೈತನಿಗೆ ಲಂಚ, ಬಡ್ತಿ, ನಿವೃತ್ತಿ, ಪಿಂಚಣಿ ಇಲ್ಲ. ರೈತರ ಹಿತಕ್ಕಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ನೀಡಿತ್ತಿದ್ದೇವೆ. ರಾಜಣ್ಣ ಅವರು ಬಹಳ ಆಸಕ್ತಿಯಿಂದ ಈ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದಾರೆ. ನಾನು ಕೂಡ ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ಸಹಕಾರ ಸಚಿವನಾಗಿದ್ದಾಗ, ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಹಾಗೂ ಷಡಕ್ಷರಿ ಅವರನ್ನು ಎಸ್ ಎಲ್ ಡಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು ಎಂದು ಸ್ಮರಿಸಿದರು.












Click it and Unblock the Notifications