Bengaluru Rain: ʼಬೆಂಗಳೂರಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆʼ
ಬೆಂಗಳೂರು, ಅಕ್ಟೋಬರ್ 25: 100 ವರ್ಷಗಳಲ್ಲೇ ಐತಿಹಾಸಿಕ ಮಳೆ ಬಂದಿದೆ. ಕೆಲವು ಭಾಗಗಳಲ್ಲಿ ಶೇ 200-300 ರಷ್ಟು ಹೆಚ್ಚಿನ ಮಳೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 156 ಎಂಎಂ ನಷ್ಟು ಮಳೆಯಾಗಿದೆ. ಈ ಹಿಂದೆ 1997ರಲ್ಲಿ 178, 1999ರಲ್ಲಿ 256 ಎಂಎಂನಷ್ಟು ಮಳೆಯಾಗಿದ್ದ ದಾಖಲೆಗಳಿವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಂಗಳೂರು ನಗರದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಬಿಬಿಎಂಪಿ ಅಧಿಕಾರಿಗಳ ತುರ್ತುಸಭೆ ಕೈಗೊಂಡಿದ್ದೆ. ಭಾರಿ ಪ್ರಮಾಣದ ಮಳೆ ನಡುವೆ ಹಗಲು ರಾತ್ರಿ ಅವರು ಶ್ರಮಿಸಿದ್ದಾರೆ. ನಾನು ಎಲ್ಲರ ಕಾರ್ಯವನ್ನು ಪರಿಶೀಲಿಸುತ್ತಿದ್ದೆ. ಮಳೆ ನಮ್ಮ ನಿಮ್ಮ ಕೈಯಲ್ಲಿ ಇಲ್ಲ ಎಂದ ಅವರು, ಕಳಪೆ ಗುಣಮಟ್ಟದ ಕಟ್ಟಡ ಕುಸಿತದಿಂದ 8 ಮಂದಿ ಕಾರ್ಮಿಕರು, ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರ ಹೊರತಾಗಿ, ಮಳೆಯಿಂದ ಬೇರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದರು.

ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಅಗತ್ಯ ಕ್ರಮ ಕೈಗೊಳ್ಳಲು ನಮಗೆ ಸಂಪೂರ್ಣ ಅಧಿಕಾರವಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಆಸ್ತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಕ್ರಮಕೈಗೊಳ್ಳಲು ಅಧಿಕಾರವಿದೆ. ಬಿಎಂಟಿಎಫ್, ಬಿಡಿಎ, ಬಿಬಿಎಂಪಿ, ಬಿಎಂಆರ್ ಡಿಎ ಕೆಲವು ತಿದ್ದುಪಡಿ ತಂದು ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈ ಹಿಂದೆಯೂ ಅಧಿಕಾರವನ್ನು ಮೇಲ್ಕಂಡ ಸಂಸ್ಥೆಗಳಿಗೆ ನೀಡಲಾಗಿತ್ತು. ಆದರೆ 2020-21ರ ಸಮಯದಲ್ಲಿ ಅದನ್ನು ಹಿಂಪಡೆಯಲಾಗಿತ್ತು. ಈಗ ಮತ್ತೆ ನೀಡಲಾಗುತ್ತಿದೆ. ಕಂದಾಯ ಬಡಾವಣೆಯಾಗಿರಲಿ, ಬೇರೆ ಬಡಾವಣೆಯಾಗಿರಲಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಒತ್ತುವರಿ ನಿಲ್ಲಿಸಲು ಸುಗ್ರೀವಾಜ್ಞೆ ತರಲು ಗೃಹ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇವೆ. ಈ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು.
ಇನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ಸೋಮವಾರದಿಂದ ಸಮೀಕ್ಷೆ ನಡೆಸಲಾಗುವುದು. ಖಾಸಗಿ ಹಾಗೂ ಪಾಲಿಕೆಯಿಂದ ಈ ಸಮೀಕ್ಷೆ ನಡೆಸಲಾಗುವುದು. ಯಾವುದಾದರೂ ಕಟ್ಟಡ ಕಾನೂನುಬಾಹಿರವಾಗಿ ನಿರ್ಮಾಣವಾಗುತ್ತಿದೆಯೇ ಎಂದು ಪತ್ತೆಹಚ್ಚಲಾಗುವುದು. ಅಕ್ರಮ ಕಟ್ಟಡ ನಿರ್ಮಾಣ ತಡೆಯಲಾಗುವುದು. ಪ್ರತಿ ಕಟ್ಟಡದ ಫೋಟೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಲಾಗುವುದು. ಜಂಟಿ ಆಯುಕ್ತರ ನೇತೃತ್ವದಲ್ಲಿ ಡ್ರೋನ್ ಮೂಲಕ ಇದರ ಮೇಲ್ವಿಚಾರಣೆ ಮಾಡಲಾಗುವುದು.
ಬಿಎಂಆರ್ ಡಿಎ ಹಾಗೂ ಬಿಎಂಟಿಎಫ್ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಸೇರಲಿದ್ದು, ಈ ಪ್ರದೇಶಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಚರಂಡಿಗಳ ಹೂಳೆತ್ತಲಾಗುವುದು. ಕಳೆದ ಬಾರಿ ನೀವು ನಗರ ಪ್ರದಕ್ಷಿಣೆ ಮಾಡಿದಾಗ ಇದನ್ನು ಗಮನಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಿರಿ, ಆದರೂ ಕೆಲಸ ಆಗಿಲ್ಲ ಎಂಬ ಬಗ್ಗೆ ಮಾತನಾಡಿ,ಇದಕ್ಕಾಗಿ ಪ್ರತ್ಯೇಕವಾಗಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ.
ಪಾದಚಾರಿ ಮಾರ್ಗದಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡಬಾರದು ಎಂದು ತೀರ್ಮಾನಿಸಲಾಗಿದೆ. ಇದರ ಬಗ್ಗೆ ಬೇರೆ ಸಮಯದಲ್ಲಿ ಪ್ರತ್ಯೇಕವಾಗಿ ಮಾಹಿತಿ ನೀಡುತ್ತೇನೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಒದಗಿಸಲು ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗುತ್ತಿದೆ. ಇದು ಮುಗಿದ ನಂತರ ಅವರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕೆಲವು ಕಡೆ ಬೀದಿ ವ್ಯಾಪಾರಿಗಳ ಮಾಫಿಯಾ ಕೂಡ ಇದೆ. ಯಾರದೋ ಜಾಗದಲ್ಲಿ ಮತ್ಯಾರೋ ಗುತ್ತಿಗೆ ಪಡೆದಿದ್ದಾರೆ. ಇದೆಲ್ಲದರ ಬಗ್ಗೆ ಮುಂದೆ ಚರ್ಚೆ ಮಾಡುತ್ತೇನೆ. ಬೇರೆ ರಾಜ್ಯ ಹಾಗೂ ದೇಶಗಳಲ್ಲಿ ಯಾವ ಮಾದರಿ ಅಳವಡಿಸಲಾಗಿದೆ ಎಂದು ಮಾಹಿತಿ ಕಲೆಹಾಕಲಾಗುತ್ತಿದೆ. ನಮ್ಮಲ್ಲೂ ಮಾದರಿ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.












Click it and Unblock the Notifications