ಹೈಕಮಾಂಡ್ ಕರೆದಿದ್ದಕ್ಕೆ ದೆಹಲಿಗೆ ಹೋದೆ ಅನ್ನೋದು ಸುಳ್ಳು: ಡಿಕೆ ಶಿವಕುಮಾರ್ ಸ್ಪಷ್ಟನೆ
ಕಾಂಗ್ರೆಸ್ ಹೈಕಮಾಂಡ್‌ನಿಂದ ತುರ್ತು ಕರೆ ಬಂದಿರುವ ಹಿನ್ನೆಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶಿರಡಿಯಿಂದ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿತ್ತು. ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಭಿನ್ನಾಭಿಪ್ರಾಯಗಳು ಜೋರಾಗಿರುವ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ, ಕಳೆದ ವಾರವೂ ಡಿಕೆಶಿ ದೆಹಲಿಗೆ ತೆರಳಿದ್ದರೂ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಅವಕಾಶ ಸಿಗದೆ ಬೆಂಗಳೂರಿಗೆ ಮರಳಿದ್ದರು. ಈ ಬಾರಿ ಹೈಕಮಾಂಡ್ ಖುದ್ದಾಗಿ ಡಿಕೆ ಶಿವಕುಮಾರ್ ಅವರನ್ನು ಕರೆಸಿಕೊಂಡಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಈ ಬಗ್ಗೆ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ನಿನ್ನೆಯೇ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ನಿರಂತರವಾಗಿ ಊಹಾಪೋಹಗಳು ನಡೆಯುತ್ತಿವೆ. ಸಿದ್ದರಾಮಯ್ಯ ಸಂಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರೂ ಡಿಕೆಶಿ ಮತ್ತು ಅವರ ಬೆಂಬಲಿಗರು ದೆಹಲಿಯಲ್ಲಿ ಹೈಕಮಾಂಡ್ ಅವರನ್ನು ಭೇಟಿಯಾಗಲು ನಿರಂತರ ಪ್ರಯತ್ನ ಮಾಡುತ್ತಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿತ್ತು.

ಇತ್ತೀಚೆಗೆ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದರು. ಆದರೆ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಸಿಗದೆ ವಾಪಸ್ ಆಗಿದ್ದರು. ಈ ಎಲ್ಲಾ ಬೆಳವಣಿಗೆಗಳು ಪಕ್ಷದ ಉನ್ನತ ಮಟ್ಟದಲ್ಲಿ ಅಸಮಾಧಾನ ಮತ್ತು ಪೈಪೋಟಿ ಎಂದು ಹೇಳಲಾಗುತ್ತಿತ್ತು. ಹೈಕಮಾಂಡ್‌ನ ನಿರ್ಧಾರವೇ ಅಂತಿಮವಾಗಲಿದೆ ಎಂಬುದು ಪಕ್ಷದ ಒಳಗಲ್ಲಿಯೂ ಸ್ಪಷ್ಟವಾಗಿತ್ತು. ಆದರೆ ದೆಹಲಿ ಭೇಟಿ ಬಗ್ಗೆ ಹುಟ್ಟಿಕೊಂಡಿದ್ದ ದಂತಿಗಳಿಗೆ ಡಿಕೆ ಶಿವಕುಮಾರ್ ಅವರೇ ಬ್ರೇಕ್ ಹಾಕಿದ್ದಾರೆ.
ರಾಜಕೀಯ ಬಣ್ಣ ಹಚ್ಚಬೇಡಿ
ನಾನು ಖಾಸಗಿ ಕಾರ್ಯಕ್ರಮ ನಿಮಿತ್ತ ಶಿರಡಿ ಹಾಗೂ ಮತ್ತಿತರ ಕಡೆ ಭೇಟಿ ನೀಡಿದ್ದೇನೆ. ಆದರೆ ಕೆಲವು ಟಿವಿ ಚಾನೆಲ್, ಮತ್ತಿತರ ಮಾಧ್ಯಮಗಳಲ್ಲಿ ಹೈಕಮಾಂಡ್ ಬುಲಾವ್ ಮೇರೆಗೆ ನಾನು ದೆಹಲಿಗೆ ತೆರಳಿದ್ದೇನೆ ಎಂದು ವರದಿ ಆಗಿರುವುದು ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರ. ನನ್ನ ಖಾಸಗಿ ಕಾರ್ಯಕ್ರಮಗಳಿಗೆ ರಾಜಕೀಯ ಬಣ್ಣ ಹಚ್ಚುವುದು ಸಲ್ಲುವುದಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು. ಡಿಕೆ ಶಿವಕುಮಾರ್ ಸಹ ಈ ವಿಷಯದಲ್ಲಿ ಮೌನವಾಗಿದ್ದರು. ಆದರೆ ಈಗ ಹೈಕಮಾಂಡ್ ಕರೆಗಾಗಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ ಎಂದು ರಾಜಕೀಯ ಚರ್ಚೆಗಳು ನಡೆದಿದ್ದವು. ದೆಹಲಿಯಲ್ಲಿ ಅವರು ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ಈ ಭೇಟಿ ಕರ್ನಾಟಕದ ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ಪುನರ್‌ರಚನೆ ಕುರಿತು ಚರ್ಚೆಗಳಿಗೆ ಸಂಬಂಧಿಸಿದಿರಬಹುದು ಎಂದು ಹೇಳಲಾಗಿತ್ತು. ಆದರೆ ಡಿಕೆ ಶಿವಕುಮಾರ್ ಅವರು ಈ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.












Click it and Unblock the Notifications