Aishwarya: ಡಿಕೆ ಶಿವಕುಮಾರ್ ಪುತ್ರಿ ರಾಜಕೀಯಕ್ಕೆ?: ಐಶ್ವರ್ಯ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 11: ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರು ರಾಜಕೀಯಕ್ಕೆ ಬರುತ್ತಾರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಐಶ್ವರ್ಯ ಅವರು ಅವರ ತಂದೆ ಹಾಗೂ ಚಿಕ್ಕಪ್ಪನ ಪರ ಸಕ್ರಿಯವಾಗಿ ಪ್ರಚಾರ ನಡೆಸುವುದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದನ್ನು ನೋಡಿದ ಜನರು ಡಿಕೆಶಿ ಪುತ್ರಿ ರಾಜಕೀಯಕ್ಕೆ ಬರಬಹುದು ಎಂಬ ಚರ್ಚೆಗಳು ಶುರುವಾಗಿದ್ದವು. ಆದರೆ, ಇದಕ್ಕೆ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹೆಗಡೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರು, ನನಗೆ ರಾಜಕೀಯಕ್ಕೆ ಬರುವ ಉದ್ದೇಶ ಇಲ್ಲ ಎಂದಿದ್ದಾರೆ. ಈ ಮೂಲಕ ರಾಜಕೀಯ ಕ್ಷೇತ್ರದ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದು, ಅದಲ್ಲದೇ ನಾನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ದೇಶಕ್ಕೆ ಅದು ಈಗ ಅಗತ್ಯವಿದೆ ಎಂದು ಹೇಳಿದರು. ನನಗೆ ರಾಜಕೀಯ ಸೇರುವ ಉದ್ದೇಶ ಇಲ್ಲ. ನಾನು ಶಿಕ್ಷಣೋದ್ಯಮಿಯಾಗಿದ್ದು, ನನಗೆ ಅದರಲ್ಲಿಯೇ ಖುಷಿ ಸಿಗುತ್ತಿದೆ. ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಈಗ ಅಗತ್ಯವಿರುವ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ನಮ್ಮ ಅಪ್ಪ ಯಾವುತ್ತಿಗೂ ರಾಜಕೀಯದ ಬಗ್ಗೆ ಹೇಳಿಲ್ಲ. ನಾವು ಮೂರು ಜನ ಮಕ್ಕಳಿಗೂ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನೀವು ಬೆಳೆಯಿರಿ ಅಂತ ಹೇಳಿದ್ದಾರೆ. ನಮ್ಮ ಅಪ್ಪ, ನಮ್ಮ ಚಿಕ್ಕಪ್ಪ ಅವರು ರಾಜಕೀಯದ ಬಗ್ಗೆ ಹೇಳಿಲ್ಲ. ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬಂದ್ರೆ ಏನು ತಪ್ಪು ಎಂದು ಪ್ರಶ್ನಿಸಿರುವ ಐಶ್ವರ್ಯ ಅವರು ಪ್ರಶ್ನಿಸಿದ್ದಾರೆ. ನಮಗೆ ಯಾವತ್ತಿಗೆ ರಾಜಕೀಯಕ್ಕೆ ಬರ್ಬೇಕು ಅಂತ ಅನ್ಸಿಲ್ಲ. ನನಗೆ ರಾಜಕೀಯದ ಬಗ್ಗೆ ಗೊತ್ತಾಗಿದ್ದೆ ನಮ್ಮ ಅಪ್ಪ ಜೈಲಿಗೆ ಹೋದಾಗ. ನಾನು ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇವತ್ತು ನಾವು ದೇಶದ ಬಗ್ಗೆ ಯೋಚನೆ ಮಾಡಬೇಕು. ದೇಶ ಅಭಿವೃದ್ಧಿಯಾದರೆ ನಾನು ಅಥವಾ ಯಾರಾದರೂ ಕೂಡ ಅಭಿವೃದ್ಧಿ ಹೊಂದಬಹುದು. ನನ್ನ ಮುಖ್ಯ ಉದ್ದೇಶ ಈಗೀನ ಯುವ ಜನತೆಗೆ ಶಿಕ್ಷಣವನ್ನ ಕೊಡುವುದು. ಶಿಕ್ಷಣ ತುಂಬಾ ಮುಖ್ಯ ಎಂದು ಹೇಳಿದರು.
ಇನ್ನೂ ತಂದೆ ಮುಖ್ಯಮಂತ್ರಿ ಆಗುವ ಕುರಿತು ಮಾತನಾಡಿದ್ದು, ಯಾವ ಕಾರಣಕ್ಕೆ ತಂದೆ ಸಿಎಂ ಆಗಬೇಕು ಎಂಬುದನ್ನು ರಿವೀಲ್ ಮಾಡಿದ್ದಾರೆ. ತಂದೆ ತಮ್ಮ ಬೆಂಬಲಿಗರು, ಕಾರ್ಯಕರ್ತರು ಸೇರಿದಂತೆ ಜನರ ಮೇಲೆ ಅಪಾರ ನಂಬಿಕೆ, ಪ್ರೀತಿ ಹೊಂದಿದ್ದಾರೆ ಎಂದಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದ ಬಳಿಕ ನಡೆದ ಸಂಗತಿಗಳನ್ನು ಅವರು ನೆನೆದು ತಮ್ಮ ತಂದೆ ಸಿಎಂ ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಅಪ್ಪ ಜೈಲಿನಿಂದ ಬಿಡುಗಡೆ ಆದ ಬಳಿಕ ಬಳಿಕ ಮೊದಲು ಕುಟುಂಬ ನೋಡಲು ಬರಲಿಲ್ಲ. ಕುಟುಂಬದಲ್ಲಿ ಯಾರೊಬ್ಬರಿಗೂ ಅವರು ಕರೆ ಮಾಡಲಿಲ್ಲ. ಅವರು ಮೊದಲು ಜನರನ್ನು ನೋಡಲು ತೆರಳಿದರು. ಎರಡು ದಿನ ನಾವು ತಂದೆಯೊಂದಿಗೆ ಮಾತನಾಡಲು ಆಗಲಿಲ್ಲ. ಮಗಳೇ ನಾನು ಜೈಲಲ್ಲಿದ್ದಾಗ ಊಟ- ನೀರು ಬಿಟ್ಟು ಜೈಲಿನ ಮುಂದೆ ಜನ ನನಗಾಗಿ ಕಾಯುತ್ತಾ ನಿಂತಿದ್ದರು. ಕಾಲಿಗೆ ಚಪ್ಪಲಿ ಇಲ್ಲದೇ ವಿಮಾನ ಏರಿ ಬಂದಿದ್ದಾರೆ. ಅವರಿಗಾಗಿ ನಾನು ಇರದೇ ಕುಟುಂಬಕ್ಕಾಗಿ ಹೇಗೆ ಓಡೋಡಿ ಬರಲಿ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ಅದನ್ನು ನಾನು ಇವತ್ತು ನಿಮ್ಮೊಂದುಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಐಶ್ವರ್ಯ ಅವರು ತಿಳಿಸಿದ್ದಾರೆ.












Click it and Unblock the Notifications