Ashwini Puneeth Rajkumar: ಅಶ್ವಿನಿ ಪುನೀತ್ ರಾಜಕುಮಾರ್ ರಾಜಕೀಯಕ್ಕೆ ಎಂಟ್ರಿ: ಬಹಿರಂಗ ಪಡಿಸಿದ ಡಿ ಕೆ ಶಿವಕುಮಾರ್!
ಬೆಂಗಳೂರು, ಅಕ್ಟೋಬರ್ 25: ರಾಜ್ ಕುಟುಂಬವನ್ನು ಸ್ಯಾಂಡಲ್ವುಡ್ನಲ್ಲಿ ದೊಡ್ಮನೆ ಎಂದೇ ಕರೀತಾರೆ. ಕರ್ನಾಟಕದಾದ್ಯಂತ ರಾಜ್ ಫ್ಯಾಮಿಲಿ ಬಹುದೊಡ್ಡ ಅಭಿಮಾನಿ ಬಳಗ ಹೊಂದಿದೆ. ಅಣ್ಣಾವ್ರ ಇದ್ದಾಗಲು ರಾಜಕೀಯ ಪ್ರವೇಶಕ್ಕೆ ಒತ್ತಡ ಹೆಚ್ಚಿತ್ತು ಆದ್ರೂ ರಾಜ್ ಕುಮಾರ್ ಅವರು ರಾಜಕಾರಣದಿಂದ ದೂರ ಉಳಿದಿದ್ರು. ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಸಹ ಅವರ ಹಾದಿಯಲ್ಲೇ ಸಾಗ್ತಿದ್ದಾರೆ. ಇದೀಗ ಅಪ್ಪು ಕನಸನ್ನು ನನಸು ಮಾಡುವ ಹಾದಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ರಾಜಕೀಯ ಪ್ರವೇಶಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದ್ದು, ಈ ಬಗ್ಗೆ ಕೊನೆಗೂ ಸ್ಪಷ್ಟನೆ ಸಿಕ್ಕಿದೆ.
ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜೀವನಾಧಾರಿತ ಎಐ ತಂತ್ರಜ್ಞಾನ ಬಳಸಿ ಮಾಡಿರುವ 'ಕನ್ನಡದ ಅಪ್ಪು' ಮೊಬೈಲ್ ಆ್ಯಪ್ ಅನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬಿಡುಗಡೆಗೊಳಿಸಿ, ಮಾತನಾಡಿದ ಅವರು, ರಾಜಕಾರಣಕ್ಕೆ ಪುನೀತ್ ರಾಜಕುಮಾರ್ ಅವರನ್ನು ಸೆಳೆಯಲು ನಾನು ಅನೇಕ ಬಾರಿ ಪ್ರಯುತ್ನ ಪಟ್ಟೆ, ಚಾಕಲೇಟ್ ಕೊಟ್ಟೆ. ಆದರೆ ಅವರು ಬರಲಿಲ್ಲ. ಸಹೋದರಿ ಅಶ್ವಿನಿ ಅವರನ್ನು ಸಹ ಆಹ್ವಾನಿಸಿದೆ. ಅವರು ಸಹ ತಮ್ಮ ಪತಿ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದರು, ರಾಜಕಾರಣಕ್ಕೆ ಬರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಅಶ್ವಿನಿ ಅವರು ರಾಜಕೀಯಕ್ಕೆ ಬರಲು ತಿರಸ್ಕರಿಸಿದಾಗ. ಸಕ್ರಿಯ ರಾಜಕಾರಣಕ್ಕೆ ಬರುವುದು ಬೇಡ ಆದರೆ ಮುಖ್ಯವಾಹಿನಿಯಲ್ಲಿರಿ ಎಂದು ತಿಳಿಸಿದ್ದೆ. ಇಷ್ಟು ದಿನ ಇದನ್ನು ಬಹಿರಂಗ ಗೊಳಿಸಿರಲಿಲ್ಲ. ಇಂದು ಬಹಿರಂಗಗೊಳಿಸಿದ್ದೇನೆ ಎಂದು ಹೇಳಿದರು. ರಾಮಾಯಣ ಮತ್ತು ಮಹಾಭಾರತಗಳು ಅನೇಕ ವರ್ಷಗಳಿಂದ ನಮ್ಮ ನಡುವೆ ಉಳಿದುಕೊಂಡಿವೆ. ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ ಎಂದು ತಿಳಿಸಿದರು.
ಎಐ ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್ ನಲ್ಲಿ ಬಾಲ್ಯಕಾಲದ ಪುನೀತ್ ಸೇರಿದಂತೆ ಇತ್ತೀಚಿನ ದಿನದವರೆಗಿನ ತನಕ ಸೃಷ್ಟಿಸಲಾಗಿದೆ. ಪುನೀತ್ ಅವರು ಕೊನೆಯುಸಿರು ಎಳೆದ ಸಂದರ್ಭದಲ್ಲಿ ಎಷ್ಟೊಂದು ಅಭಿಮಾನಿಗಳು ಅವರಿಗಾಗಿ ಮಿಡಿದರು. ನೂರಾರು ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಕತ್ತಲೆಗೆ ಹೋಗಿರುವ ಅಪ್ಪು ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ ಎಂದರು.
ನನಗೆ ಬಹಳಷ್ಟು ರಾಜ್ಯಗಳ ಸಿನಿಮಾ ಸ್ನೇಹಿತರು ಪರಿಚಯ ಇದ್ದಾರೆ. ಯಾರೂ ಕೂಡ ಈ ಆಲೋಚನೆ ಮಾಡಿಲ್ಲ. ನನ್ನ ಸ್ನೇಹಿತನ ಹೆಸರಿನಲ್ಲಿ ಇಂತಹ ಆ್ಯಪ್ ರೂಪುಗೊಂಡಿದ್ದು, ಅದನ್ನು ಉದ್ಘಾಟನೆ ಮಾಡಲು ನಾನು ಬಂದಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದರು. ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆಯಾಗಿದ್ದಾರೆ ಎಂದರು.
ಸಾವು ಎಂಬುದು ಯಾರ ಕೈಯಲ್ಲಿ ಇಲ್ಲ. ನಾನು ಹಾಗೂ ಪುನೀತ್ ರಾಜಕುಮಾರ್ ಅವರು ನೆರೆಹೊರೆಯವರು. ಇಬ್ಬರೂ ಒಟ್ಟಿಗೆ ಒಂದೇ ಜಿಮ್ ಗೆ ಕಸರತ್ತು ನಡೆಸಲು ಹೋಗುತ್ತಿದ್ದೆವು. ಕೊನೆ ಕ್ಷಣಗಳು ಅವರ ಕೈಯಲ್ಲೂ ಇರಲಿಲ್ಲ. ಅವರ ಜಿಮ್ ತರಬೇತುದಾರ ಹಾಗೂ ನನ್ನ ತರಬೇತುದಾರ ಕೊನೆ ಕ್ಷಣದಲ್ಲಿ ಒಟ್ಟಿಗೆ ಇದ್ದರು. ಅವರು ನನಗೆ ಈ ವಿಚಾರ ತಿಳಿಸಿದರು ಎಂದರು.












Click it and Unblock the Notifications