ತಮಿಳುನಾಡು ಶಾಸಕರು ಬೆಂಗಳೂರು ರೆಸಾರ್ಟ್‌ಗೆ ಬಂದಿಲ್ಲ: ಸ್ಪಷ್ಟನೆ ಕೊಟ್ಟ ಡಿ.ಕೆ.ಶಿವಕುಮಾರ್
ಬೆಂಗಳೂರು: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 'ರೆಸಾರ್ಟ್ ರಾಜಕೀಯ'ದ ವದಂತಿಗಳಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆರೆ ಎಳೆದಿದ್ದಾರೆ. ತಮಿಳುನಾಡು ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ಸುದ್ದಿಗಳನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, "ತಮಿಳುನಾಡಿನ ಯಾವುದೇ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿಲ್ಲ. ಈಗಲ್ಟನ್ ರೆಸಾರ್ಟ್‌ಗೆ ಶಾಸಕರು ಆಗಮಿಸಿದ್ದಾರೆ ಎನ್ನುವುದೆಲ್ಲಾ ಕೇವಲ ವದಂತಿ. ಅಷ್ಟೇ ಅಲ್ಲದೆ, ಶಾಸಕರು ಹೈದರಾಬಾದ್‌ಗೆ ಹೋಗಿದ್ದಾರೆ ಎಂಬ ಸುದ್ದಿಯಲ್ಲೂ ಸತ್ಯಾಂಶವಿಲ್ಲ. ಈ ಬಗ್ಗೆ ನನಗಂತೂ ಯಾವುದೇ ಮಾಹಿತಿ ಇಲ್ಲ" ಎಂದು ಸ್ಪಷ್ಟಪಡಿಸಿದರು. "ಪಕ್ಷದ ಹೈಕಮಾಂಡ್ ಈವರೆಗೆ ಈ ವಿಷಯದ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ. ಒಂದು ವೇಳೆ ಹೈಕಮಾಂಡ್ ಸೂಚನೆ ನೀಡಿದ್ದರೆ ಅದು ಬೇರೆ ವಿಷಯವಾಗಿರುತ್ತಿತ್ತು. ಆದರೆ ಸದ್ಯಕ್ಕೆ ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ" ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕರನ್ನು ರಕ್ಷಿಸಲು ನಡೆಸಲಾಗುತ್ತಿದೆ ಎನ್ನಲಾದ 'ಆಪರೇಷನ್' ಸುದ್ದಿಯನ್ನು ತಳ್ಳಿಹಾಕಿದರು.

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಮೈತ್ರಿ ಸರ್ಕಾರ ರಚನೆಯ ಕಸರತ್ತುಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಶಾಸಕರು ಬೇರೆ ಪಕ್ಷಗಳತ್ತ ವಾಲದಂತೆ ತಡೆಯಲು ಕಾಂಗ್ರೆಸ್ ಅವರನ್ನು ಬೆಂಗಳೂರಿನ ರೆಸಾರ್ಟ್‌ಗೆ ಶಿಫ್ಟ್ ಮಾಡುತ್ತಿದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಈ ಹಿಂದೆ ಹಲವು ಬಾರಿ ಅಂತರಾಜ್ಯ ಶಾಸಕರಿಗೆ ಆತಿಥ್ಯ ನೀಡಿ 'ಟ್ರಬಲ್ ಶೂಟರ್' ಎನಿಸಿಕೊಂಡಿದ್ದ ಡಿ.ಕೆ. ಶಿವಕುಮಾರ್ ಅವರ ಈ ಸ್ಪಷ್ಟನೆ ಈಗ ಎಲ್ಲ ಕುತೂಹಲಗಳಿಗೆ ಅಂತ್ಯ ಹಾಡಿದೆ.
ಯಡಿಯೂರಪ್ಪ ಅವರಿಗೆ ಆರೋಗ್ಯ, ಆಯಸ್ಸು ಹೆಚ್ಚಾಗಲಿ
ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದ ಬಗ್ಗೆ ಕೇಳಿದಾಗ, "ಅವರು ರಾಜ್ಯದ ಸೇವೆ ಮಾಡಿದ್ದಾರೆ. ಅವರ ಜನ್ಮದಿನವಿದ್ದರೆ ಅವರಿಗೆ ಒಳ್ಳೆಯದಾಗಲಿ. ಅವರ ಪಕ್ಷದವರು ಪಕ್ಷ ಸಂಘಟನೆ ಹಾಗೂ ಅವರಿಗೆ ಗೌರವ ನೀಡುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಅವರಿಗೆ ಉತ್ತಮ ಆರೋಗ್ಯ ಸಿಗಲಿ ಎಂದು ಆಶಿಸುತ್ತೇನೆ. ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ನೀಡಲಿ. ರಾಜಕೀಯವಾಗಿ ಅವರ ವಿಚಾರಧಾರೆ ಬೇರೆ, ನಮ್ಮ ವಿಚಾರಧಾರೆ ಬೇರೆ" ಎಂದು ತಿಳಿಸಿದರು.
ಪುದುಚೆರಿ ಪ್ರವಾಸದ ಬಗ್ಗೆ ಕೇಳಿದಾಗ, "ನಾನು ಬಹಳ ದಿನಗಳಿಂದ ದೇವಾಲಯಕ್ಕೆ ಹೋಗಿರಲಿಲ್ಲ. ಹೀಗಾಗಿ ಶನೇಶ್ವರ ದೇವಾಲಯಕ್ಕೆ ಹೋಗುತ್ತಿದ್ದೇನೆ" ಎಂದು ತಿಳಿಸಿದರು. ಕೇರಳಂ ಸಿಎಂ ಆಯ್ಕೆ ವಿಚಾರವಾಗಿ, "ನಮ್ಮ ಎಲ್ಲಾ ನಾಯಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಅದು ಎಲ್ಲಾ ಪಕ್ಷಗಳಲ್ಲೂ ನಡೆಯುವ ಪ್ರಕ್ರಿಯೆ" ಎಂದರು.
ನಗರದಲ್ಲಿ ಮರಗಳ ತೆರವಿಗೆ ಸಮಯವಿಲ್ಲ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಟೀಕೆಗೆ ಉತ್ತರಿಸಿದ ಡಿಕೆಶಿ,"ಬಿದ್ದಿರುವ ಎಲ್ಲ ಮರಗಳ ತೆರವು ಮಾಡಲಾಗುತ್ತಿದೆ. ಅರಮನೆ ಮೈದಾನ ಸುತ್ತಮುತ್ತ ಸೇರಿದಂತೆ ಎಲ್ಲೆಡೆ ಈ ಕಾರ್ಯ ಮಾಡಲಾಗುತ್ತಿದೆ. ದುರ್ಬಲವಾಗಿರುವ ಮರಗಳ ತೆರವಿಗೂ ಸೂಚಿಸಲಾಗಿದೆ. 480 ಮರಗಳ ಪಟ್ಟಿ ನೀಡಿದ್ದು, ಅವುಗಳ ರೆಂಬೆ ಕತ್ತರಿಸಲು ಅನುಮತಿ ನೀಡಲಾಗಿದೆ. ಅಶೋಕ್ ಅವರು ಹೇಳಿರುವ ಎಲ್ಲಾ ಕೆಲಸ ಮಾಡಲಾಗುತ್ತಿದೆ" ಎಂದರು.
ನನಗಾಗಿ ಐಪಿಎಲ್ ಟಿಕೆಟ್ ಕೇಳಿಲ್ಲ
ಆರ್.ಅಶೋಕ್ ಅವರು ಶಾಸಕರಾದ ಕಾಶಪ್ಪನವರು ಐಪಿಎಲ್ ಟಿಕೆಟ್ ಕೇಳಿದ್ದರು. ಈಗ ಅದನ್ನು ನನ್ನ ಮೇಲೆಯೇ ಹಾಕಿಕೊಂಡಿದ್ದೇನೆ. ಗುಜರಾತಿನವರಿಗೆ ಟಿಕೆ ಟ್‌ಗಳು ಹೆಚ್ಚಾಗಿ ಬೇಕಾಗಿತ್ತು, ವ್ಯಾಪಾರ ಜಾಸ್ತಿ ಆಗಬೇಕಿತ್ತು. ಅದಕ್ಕೆ ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ನಾವು ಕೇಳಿದ್ದ 300 ಟಿಕೆಟ್ ದೊಡ್ಡದಾಯ್ತಾ? ಬೇರೆ ರಾಜ್ಯಗಳಲ್ಲಿ 60% ಟಿಕೆಟ್ ಅನ್ನು ರಾಜ್ಯ ಸರ್ಕಾರಗಳಿಗೆ ಕೊಡುತ್ತಿದ್ದಾರೆ. ನಾನು ಕರ್ನಾಟಕದ ಪ್ರತಿನಿಧಿಯಾಗಿ ಶಾಸಕರು ಏನು ಹೇಳುತ್ತಾರೋ ಅದನ್ನು ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಎಲ್ಲ ಪಕ್ಷದವರು ಸೇರಿ ಬೇಡಿಕೆ ಇಟ್ಟರಲ್ಲವೇ? ದಳದವರಿಗೆ ಬೇಡವಾದರೆ ತಮ್ಮ ಪಕ್ಷದ ಶಾಸಕರಿಗೆ ಟಿಕೆಟ್ ಬೇಡ ಎಂದು ವಾಪಸ್ ನೀಡಲಿ. ನಾನು ನನಗಾಗಿ ಟಿಕೆಟ್ ಕೇಳಿದ್ದೀನಾ? ನಮ್ಮ ಜನಪ್ರತಿನಿಧಿಗಳು ಮನವಿ ಮಾಡಿದ್ದಕ್ಕೆ ಕೇಳಿದೆ. ಈ ಹಿಂದೆ ಶಾಸಕರಿಗೆ 2 ಟಿಕೆಟ್ ನೀಡುತ್ತಿದ್ದರು. ಈಗ ಮೂರು ಟಿಕೆಟ್ ನೀಡಿ ಎಂದು ಹೇಳಿರುವೆ" ಎಂದು ಸ್ಪಷ್ಟನೆ ನೀಡಿದರು.













Click it and Unblock the Notifications