ಸೋನಿಯಾ ಗಾಂಧಿಗೆ ಬ್ಲ್ಯಾಕ್‌ಮೇಲ್ ಮಾಡಿ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್: ರಮೇಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ
ಬೆಂಗಳೂರು, ಅಕ್ಟೋಬರ್ 31: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋನಿಯಾ ಗಾಂಧಿಗೆ ಬೆದರಿಕೆ ಹಾಕುವ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿದ್ದಾರೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಂಗಳವಾರ ಆರೋಪಿಸಿದ್ದಾರೆ.
ಶಿವಕುಮಾರ್ ಅವರನ್ನು 'ಬ್ಲ್ಯಾಕ್‌ಮೇಲರ್' ಎಂದು ರಮೇಶ್ ಜಾರಕಿಹೊಳಿ ಕರೆದಿದ್ದಾರೆ.
ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಒಬ್ಬ ದೊಡ್ಡ ಬ್ಲ್ಯಾಕ್‌ಮೇಲರ್. ಅವರು ಸೋನಿಯಾ ಗಾಂಧಿ ಅವರನ್ನು ತಿಹಾರ್ ಜೈಲಿನಲ್ಲಿ ಭೇಟಿಯಾಗುವಂತೆ ಒತ್ತಾಯಿಸಿದ್ದರು. ಸೋನಿಯಾ ಗಾಂಧಿಗೆ ಧಮ್ಕಿ ಹಾಕಿ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರು. ಇಡಿ ಪ್ರಕರಣದಲ್ಲಿ ಸೋನಿಯಾ ಹೆಸರನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ರಮೇಶ್ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ನಾಯಕರನ್ನು ಡಿಕೆ ಶಿವಕುಮಾರ್ 'ಬ್ಲ್ಯಾಕ್‌ಮೇಲ್' ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸುವಂತೆ ಸಿಎಂಗೆ ಪತ್ರ ಬರೆದಿದ್ದೇನೆ. ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪಾತ್ರದ ಬಗ್ಗೆ ನನ್ನ ಬಳಿ ಸ್ಪಷ್ಟ ಸಾಕ್ಷ್ಯವಿದೆ. ನನ್ನ ಬಳಿ ಆಡಿಯೋ ರೆಕಾರ್ಡಿಂಗ್ ಇದೆ. ಅದರಲ್ಲಿ ಅವರು ಸಿಡಿಯ ಹಿಂದೆ ಮಹಿಳೆ ಸೇರಿದಂತೆ ಇತರ ಮೂವರಿದ್ದಾರೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಲು ಸರ್ಕಾರ ವಿಫಲವಾದಲ್ಲಿ, ನಾನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಹೋಗಲು ಸಿದ್ಧನಿದ್ದೇನೆ ಎಂದು ರಮೇಶ್ ಹೇಳಿದ್ದಾರೆ.
ಗೃಹ ಸಚಿವ ಪರಮೇಶ್ವರ ಅವರು ಸಾಕ್ಷಿ ಇಲ್ಲದೆ ಮಾತನಾಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ್, ಸಚಿವರು ನ್ಯಾಯದ ಭರವಸೆ ನೀಡಿದರೆ ಒಂದು ಗಂಟೆಯೊಳಗೆ ಪುರಾವೆ ಸಲ್ಲಿಸಲು ಸಿದ್ಧನಿದ್ದೇನೆ. ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ತಮ್ಮ ಸಿಡಿ ಪ್ರಕರಣದಲ್ಲಿ ಬಿಜೆಪಿ ಮುಖಂಡರೊಬ್ಬರ ಕೈವಾಡವಿದೆ ಎಂದೂ ಆರೋಪಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಸಿಡಿ ಕಾರ್ಖಾನೆ ಮುಚ್ಚಬೇಕು. ನನ್ನದೇ ತಪ್ಪು ಇದೆ ಎಂದು ಇಷ್ಟು ವರ್ಷ ಸುಮ್ಮನಿದ್ದೆ. ಆದರೆ, ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವಕುಮಾರ್ ಅವರ ಕಾರು ಚಾಲಕ ಪರಶಿವಮೂರ್ತಿ ಅವರನ್ನು ಎಸ್‌ಐಟಿ ಏಕೆ ವಿಚಾರಣೆ ನಡೆಸಲಿಲ್ಲ ಎಂಬುದು ನನಗೆ ತಿಳಿದಿಲ್ಲ. ಪಕ್ಷಕ್ಕೆ ಮುಜುಗರ ತರಲು ನಾನು ಬಯಸುವುದಿಲ್ಲ. ಆದರೆ, ಕ್ಲೈಮ್ಯಾಕ್ಸ್ ಇದೆ. ಅವರು ತುಂಬಾ ದೊಡ್ಡ ವ್ಯಕ್ತಿ. ಶಿವಕುಮಾರ್ ಅವರನ್ನು ಬಂಧಿಸಿದ ನಂತರ ಎಲ್ಲವೂ ಬಹಿರಂಗಗೊಳ್ಳುತ್ತದೆ ಎಂದು ರಮೇಶ್ ತಿಳಿಸಿದ್ದಾರೆ.
ಶಿವಕುಮಾರ್ ನನ್ನನ್ನು ಹತ್ತಿಕ್ಕಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಅಸ್ಸಾಂ, ದುಬೈ ಮತ್ತು ಇತರ ದೇಶಗಳಿಂದ ಕರೆಗಳು ಬರುತ್ತಿವೆ. ಅವರು ಕೆಲವು ಭಯೋತ್ಪಾದನೆ ಸಂಬಂಧಿತ ಕೆಲಸದ ಬಗ್ಗೆ ಮಾತನಾಡುತ್ತಾರೆ. ಅದನ್ನು ದಾಖಲಿಸಿಕೊಂಡು ಕೆಲವು ನಕಲಿ ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸಲು ಶಿವಕುಮಾರ್ ಬಯಸಿದ್ದಾರೆ ಎಂದೂ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಶಿವಕುಮಾರ್ ಅವರು ಕೊತ್ವಾಲ್ ರಾಮಚಂದ್ರ ಅವರ ಶಿಷ್ಯರಾಗಿದ್ದಾರೆ. ಅವರು ಏನು ಮಾಡುತ್ತಾರೆಂದು ನಿಮಗೆ ತಿಳಿದಿಲ್ಲ ಎಂದು ರಮೇಶ್ ಆರೋಪಿಸಿದ್ದಾರೆ.












Click it and Unblock the Notifications