DK Shivakumar: ಬೆಳಗಾವಿ ಸಮಾವೇಶದಲ್ಲಿ ಮೃತಪಟ್ಟ ಕೆಂಚಪ್ಪ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಡಿ ಕೆ ಶಿವಕುಮಾರ್
ಬೆಂಗಳೂರು, ಜನವರಿ 22: ಬೆಳಗಾವಿಯ "ಜೈ ಬಾಪು ಜೈ ಭೀಮ್ ಜೈ ಸಂವಿಧಾನ" ಸಮಾವೇಶಕ್ಕೆ ಆಗಮಿಸಿದ್ದಾಗ ಹೃದಯಘಾತದಿಂದ ಮೃತಪಟ್ಟ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ನದಿಹರ್ಲಳ್ಳಿಯ ಬಸಪ್ಪ ಕೆಂಚಪ್ಪ ಪಾಮೆನಳ್ಳಿ ಅವರ ಕುಟುಂಬಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಬೆಳಗಾವಿಯಲ್ಲಿ ಜನವರಿ 21 ರಂದು ನಡೆದ ಸಮಾವೇಶದಲ್ಲಿ ಸುಮಾರು 60 ವರ್ಷ ವಯಸ್ಸಿನ ಕೆಂಚಪ್ಪ ಅವರು ಕುಸಿದು ಬಿದ್ದು ಮೃತಪಟ್ಟಿದ್ದರು. ಕೆಂಚಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಡಿ ಕೆ ಶಿವಕುಮಾರ್ ಅವರು, ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗೆ ಭಗವಂತ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿ ಭಾರತದ ಆತ್ಮ. ವಿಶ್ವಕ್ಕೆ ಶಾಂತಿ, ಸಹಬಾಳ್ವೆ ಹೇಳಿಕೊಟ್ಟ ಪರಮಾತ್ಮ. ಇಂದು, ಮುಂದು, ಎಂದೆಂದೂ ನಮ್ಮದು ಗಾಂಧಿ ಮಂತ್ರ. ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು. ಈಗ ನೂರು ವರ್ಷಗಳ ನಂತರ ಈ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸಿ ಮುಂದಿನ ಪೀಳಿಗೆಗೆ ಗಾಂಧೀಜಿ ಅವರ ತತ್ವ, ಆದರ್ಶವನ್ನು ಸಾರಲು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದು ದೇಶದ ಜನರು, ದೇಶದ ಐಕ್ಯತೆ, ಸಮಗ್ರತೆಗೆ ಗಾಂಧೀಜಿ, ಅಂಬೇಡ್ಕರ್ ಸ್ಮರಣೆ ಹಾಗೂ ಸಂವಿಧಾನ ರಕ್ಷಣೆ ಈ ಸಮಾವೇಶದ ಮುಖ್ಯ ಉದ್ದೇಶ. 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ" ಇವು ಕೇವಲ ಘೋಷಣೆಗಳಲ್ಲ, ಭಾರತದ ಶಕ್ತಿ ಮಂತ್ರಗಳು. ಇತ್ತೀಚೆಗೆ ನಾವು ಸಂಕ್ರಾಂತಿ ಹಬ್ಬ ಆಚರಿಸಿದ್ದೇವೆ. ಸಂಕ್ರಾಂತಿ ಎಂದರೆ ಹೊಸತನ, ಹೊಸ ಹುರುಪು, ಹೊಸ ಉತ್ಸಾಹ ಎಂದು ತಿಳಿಸಿದರು.
ಅಂದು ಮಹಾತ್ಮ ಗಾಂಧೀಜಿ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕುಳಿತ ಸ್ಥಾನದಲ್ಲಿ ಇಂದು ಕನ್ನಡನಾಡಿನ ವರಪುತ್ರ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಕ್ರಾಂತಿ ಆಗಿ, ಹುರುಪು ತಂದಿತ್ತು. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದರು. ಅಂಬೇಡ್ಕರ್ ಸಂವಿಧಾನ ಕೊಟ್ಟರು. ಗಾಂಧಿ ಭಾರತ ಎಂದರೆ ಸ್ವಾಭಿಮಾನಿಗಳ ಭಾರತ, ಏಕತೆಯ ಭಾರತ, ಸಾಮರಸ್ಯದ ಬದುಕಿನ ಭಾರತ, ಜಾತ್ಯತೀತ ಭಾರತ, ಸರ್ವೋದಯ ಭಾರತ ಎಂದರು.
ನೀವು ಕ್ರಾಂತಿಕಾರಿಯನ್ನು ಕೊಲ್ಲಬಹುದು, ಆದರೆ ಕ್ರಾಂತಿಯನ್ನು ಕೊಲ್ಲಲು ಆಗುವುದಿಲ್ಲ ಎಂದು ಗಾಂಧೀಜಿ ಅವರು ಹೇಳಿದ್ದಾರೆ. ವ್ಯಕ್ತಿ ಸಾಯಬಹುದು, ಆದರೆ ಅವರ ತತ್ವಗಳು ಸಾಯುವುದಿಲ್ಲ. ನನ್ನ ದೇಹವನ್ನು ನಾಶ ಮಾಡಬಹುದು, ಆದರೆ ನನ್ನ ಚಿಂತನೆಗಳನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಗಾಂಧಿ ಹೇಳಿದ್ದರು. ಪಾಪಗಳನ್ನು ನಾಶ ಮಾಡು, ಪಾಪಿಗಳನ್ನು ಪ್ರೀತಿಸು ಎಂದು ಗಾಂಧಿ ಹೇಳಿದ್ದಾರೆ ಎಂದು ಗಾಂಧೀಜಿ ಅವರ ಸಂದೇಶಗಳನ್ನು ಸ್ಮರಿಸಿದರು.
ನಮ್ಮ ಹೆಗಲ ಮೇಲೆ ಕೇಸರಿ, ಬಿಳಿ, ಹಸಿರಿನ ಕಾಂಗ್ರೆಸ್ ಶಾಲಿದೆ. ಎದೆಯ ಒಳಗೆ ಪವಿತ್ರ ಸಂವಿಧಾನವಿದೆ. ಇದನ್ನು ನಾವು ಮರೆಯಲು ಸಾಧ್ಯವಿಲ್ಲ. ಸಂವಿಧಾನವೇ ನಮ್ಮ ತಂದೆ ತಾಯಿ, ಸಂವಿಧಾನವೇ ನಮ್ಮ ಬಂಧು ಬಳಗ, ಸಂವಿಧಾನವೇ ನಮ್ಮ ಧರ್ಮಗ್ರಂಥ. ಭಗವದ್ಗೀತೆ, ಬೈಬಲ್, ಕುರಾನ್ ಧರ್ಮ ಗ್ರಂಥಗಳಂತೆ ನಮಗೆ ಶ್ರೇಷ್ಠ ಗ್ರಂಥ ನಮ್ಮ ಸಂವಿಧಾನ ಎಂದು ತಿಳಿಸಿದರು.












Click it and Unblock the Notifications