ಜೂನ್‌ನಿಂದ ಬಿಡದಿ ಟೌನ್‌ಶಿಪ್ ಪರಿಹಾರದ ಹಣ ಬಿಡುಗಡೆ, ಕುಮಾರಸ್ವಾಮಿ ಸವಾಲಿಗೆ ನಾನು ಸಿದ್ಧ: ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಮುಂಬರುವ ಜೂನ್ ಮೊದಲ ವಾರದಿಂದಲೇ ಪರಿಹಾರದ ಹಣವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ಕುಮಾರಪಾರ್ಕ್‌ನಲ್ಲಿರುವ ಸರ್ಕಾರಿ ಗೃಹ ಕಚೇರಿಯಲ್ಲಿ ಬಿಡದಿ ಭಾಗದ ರೈತರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಇದೇ ವೇಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಶೇ. 80ರಷ್ಟು ರೈತರ ಒಪ್ಪಿಗೆ

ಬಿಡದಿ ಟೌನ್‌ಶಿಪ್ ಯೋಜನೆಗೆ ಆ ಭಾಗದ ಶೇಕಡಾ 80ರಷ್ಟು ರೈತರು ಈಗಾಗಲೇ ಸಮ್ಮತಿ ಸೂಚಿಸಿದ್ದು, ಆದಷ್ಟು ಬೇಗ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಸಭೆಯಲ್ಲಿ ರೈತರು ಹಣದ ಜೊತೆಗೆ ಪರ್ಯಾಯ ನಿವೇಶನವನ್ನೂ ನೀಡುವಂತೆ ಬೇಡಿಕೆ ಇಟ್ಟಿದ್ದು, ಕಾನೂನು ಚೌಕಟ್ಟಿನಲ್ಲಿ ಗರಿಷ್ಠ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ತೊಡಕು ಉಂಟಾಗದಂತೆ ತಡೆಯಲು ಪ್ರತಿ ಮೂರು ಹಳ್ಳಿಗಳನ್ನು ಒಳಗೊಂಡಂತೆ ಪ್ರತ್ಯೇಕವಾಗಿ ಅಂತಿಮ ಹಂತದ ನೋಟಿಫಿಕೇಶನ್ ಹೊರಡಿಸಲಾಗುತ್ತಿದೆ. ಈಗಾಗಲೇ ಕೆಂಪಯ್ಯನಪಾಳ್ಯ ಮತ್ತು ಮಂಡಹಳ್ಳಿ ಗ್ರಾಮಗಳ ಕಡತಗಳಿಗೆ ಸಹಿ ಹಾಕಲಾಗಿದೆ ಎಂದರು.

Bidadi Township

ಮುಂಬರುವ ಜೂನ್ 30ರ ಒಳಗೆ ಎಲ್ಲ ಗ್ರಾಮಗಳ ಅಧಿಸೂಚನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಅವಧಿಯೊಳಗೆ ಒಪ್ಪಿಗೆ ನೀಡುವ ರೈತರಿಗೆ ಪೂರ್ಣಪ್ರಮಾಣದ ಪರಿಹಾರ ಸಿಗಲಿದೆ. ಒಂದು ವೇಳೆ ಒಪ್ಪದಿದ್ದರೆ, ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟು ಜಮೀನು ವಶಕ್ಕೆ ಪಡೆದು ಕಾಮಗಾರಿ ಮುಂದುವರಿಸಲಾಗುವುದು ಎಂದೂ ಸ್ಪಷ್ಟಪಡಿಸಿದರು. ಭವಿಷ್ಯದಲ್ಲಿ ಇಲ್ಲಿನ ಜಮೀನುಗಳಿಗೆ 'ಪ್ರೀಮಿಯಂ ಎಫ್‌ಎಆ‌ರ್' ಸೌಲಭ್ಯ ಸಿಗುವುದರಿಂದ ಭೂಮಿ ಉಳಿಸಿಕೊಳ್ಳುವ ರೈತರಿಗೆ ಭಾರಿ ಲಾಭವಾಗಲಿದೆ. ಹಾಗಾಗಿ ಯಾರೂ ಜಮೀನು ಮಾರಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಉತ್ತಮ ಪ್ಯಾಕೇಜ್ ನೀಡಲಾಗುತ್ತಿದ್ದು, ಪರಿಹಾರ ಮತ್ತು ಅಭಿವೃದ್ಧಿ ವೆಚ್ಚ ಸೇರಿದಂತೆ ಪ್ರತಿ ಎಕರೆಗೆ ಸರ್ಕಾರ 5 ಕೋಟಿ ರೂಪಾಯಿ ಬಂಡವಾಳ ಹೂಡುತ್ತಿದೆ. ಬಿಡಿಎ ಈಗಾಗಲೇ 3,000 ಕೋಟಿ ರೂ. ಹೂಡಿಕೆ ಮಾಡಿದ್ದು, ಹುಡ್ಕೋ ಸಂಸ್ಥೆಯಿಂದ 12,000 ಕೋಟಿ ರೂ. ಆರ್ಥಿಕ ನೆರವು ಸಿಗಲಿದೆ ಎಂದರು.

ಡಿ.ಕೆ.ಶಿವಕುಮಾರ್ ಸಾಹೇಬರೇ, 2028ಕ್ಕೆ ನೀವು ಕೂಡ ಮಾಜಿ ಆಗಲಿದ್ದೀರಿ: ನಿಖಿಲ್‌ ಕುಮಾರಸ್ವಾಮಿ ತಿರುಗೇಟು
ಡಿ.ಕೆ.ಶಿವಕುಮಾರ್ ಸಾಹೇಬರೇ, 2028ಕ್ಕೆ ನೀವು ಕೂಡ ಮಾಜಿ ಆಗಲಿದ್ದೀರಿ: ನಿಖಿಲ್‌ ಕುಮಾರಸ್ವಾಮಿ ತಿರುಗೇಟು

ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕಾರ

ಬಿಡದಿ ಟೌನ್‌ಶಿಪ್ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಹಾಕಿರುವ ಬಹಿರಂಗ ಚರ್ಚೆಯ ಸವಾಲನ್ನು ಸ್ವೀಕರಿಸುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. "ಅವರ ಪಂಥಾಹ್ವಾನಕ್ಕೆ ನಾನು ಸಿದ್ಧನಿದ್ದೇನೆ. ಜಾಗ ಮತ್ತು ಸಮಯವನ್ನು ಅವರೇ ನಿಗದಿಪಡಿಸಲಿ, ನನಗೆ ಕೇವಲ 3 ದಿನಗಳ ಮುನ್ಸೂಚನೆ ನೀಡಿದರೆ ಸಾಕು. ಯಾವುದೇ ಅಸಂಬದ್ಧ ಪದಗಳನ್ನು ಬಳಸದೆ, ಅತ್ಯಂತ ನಮ್ರತೆಯಿಂದಲೇ ಸಾರ್ವಜನಿಕವಾಗಿ ಚರ್ಚಿಸಲು ನಾನು ಸಿದ್ಧನಿದ್ದೇನೆ. ಮಾಗಡಿ ಶಾಸಕ ಬಾಲಕೃಷ್ಣ ಕೂಡ ಈ ಚರ್ಚೆಗೆ ಬರಲಿದ್ದಾರೆ" ಎಂದರು.

ಈ ಯೋಜನೆ ಆರಂಭಿಸಿದ್ದೇ ದೇವೇಗೌಡರು ಮತ್ತು ಕುಮಾರಸ್ವಾಮಿ

ಈ ಯೋಜನೆ ಕಾಂಗ್ರೆಸ್ ಸರ್ಕಾರದ ಸೃಷ್ಟಿಯಲ್ಲ ಎಂದು ಸ್ಪಷ್ಟಪಡಿಸಿದ ಡಿಸಿಎಂ, "ನಾನು ಕೂಡ ಒಬ್ಬ ರೈತನೇ. ಮೇಕೆದಾಟು ಯೋಜನೆಯಲ್ಲಿ ನನ್ನ ಸ್ವಂತ ಜಮೀನೇ ಮುಳುಗಡೆಯಾಗುತ್ತಿದೆ. ರೈತರು ಭೂಮಿ ಕಳೆದುಕೊಳ್ಳುವ ನೋವು ನನಗೂ ಗೊತ್ತು. ಆದರೆ ಬಿಡದಿ ಟೌನ್‌ಶಿಪ್ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದೇ ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಅವಧಿಯಲ್ಲಿ. ಅಂದು ಅವರು ಡಿಎಲ್‌ಎಫ್ ಕಂಪನಿಗೆ ಇದನ್ನು ವಹಿಸಿದ್ದರು, ಬಳಿಕ ಆ ಕಂಪನಿ ಯೋಜನೆ ಕೈಬಿಟ್ಟು ಹಣ ವಾಪಸ್ ಪಡೆಯಿತು. ನಂತರ ಜಗದೀಶ್ ಶೆಟ್ಟರ್ ಹಾಗೂ ಬೊಮ್ಮಾಯಿ ಅವರ ಅವಧಿಯಲ್ಲಿ ಕೆಐಎಡಿಬಿ 1,000 ಎಕರೆ ವಶಪಡಿಸಿಕೊಂಡಾಗ ಕುಮಾರಸ್ವಾಮಿ ಯಾಕೆ ಮೌನವಾಗಿದ್ದರು? ಎಂದು ಪ್ರಶ್ನಿಸಿದರು.

ಕಾನೂನು ಮತ್ತು ನ್ಯಾಯಾಲಯದ ತೀರ್ಪುಗಳ ಕಾರಣದಿಂದ ಈ ಯೋಜನೆಯನ್ನು 'ಡಿನೋಟಿಫಿಕೇಶನ್' ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಹಿಂದೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇಬ್ಬರೂ ಡಿನೋಟಿಫಿಕೇಶನ್ ಪ್ರಕರಣಗಳನ್ನು ಎದುರಿಸಿದ್ದರಿಂದ ಈ ಯೋಜನೆಗೆ ಕೈ ಹಾಕುವ ಧೈರ್ಯ ಮಾಡಲಿಲ್ಲ. ಈ ಭಾಗವನ್ನು 'ರೆಡ್ ಜೋನ್' ಎಂದು ಘೋಷಿಸಲಾಗಿದ್ದು, ರೈತರು ಬೇರೆಯವರಿಗೆ ಭೂಮಿ ಮಾರಾಟ ಮಾಡುವಂತಿಲ್ಲ. ಹಾಗಾಗಿ ರೈತರ ಹಿತದೃಷ್ಟಿಯಿಂದ ಹೆಚ್ಚಿನ ಪರಿಹಾರ ನೀಡಿ ನಾವು ಯೋಜನೆ ಮುಂದುವರಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ದೇವೇಗೌಡರ ಕುಟುಂಬದ ವಿರುದ್ಧ ಭೂಮಿ ಖರೀದಿ ಆರೋಪ

ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದ ಡಿ.ಕೆ.ಶಿ, "ರೈತರ ಬಗ್ಗೆ ಕಾಳಜಿ ಮಾತನಾಡುವ ಅವರ ಕುಟುಂಬದವರು ಹಾಸನದಲ್ಲೇ ಜಮೀನು ಕೊಳ್ಳಬಹುದಿತ್ತಲ್ಲವೇ? ದೇವಗೆರೆ ಹಾಗೂ ಕೇತಗಾನಹಳ್ಳಿ ಭಾಗದಲ್ಲಿ ರೇವಣ್ಣ ಸೇರಿದಂತೆ ಇಡೀ ಕುಟುಂಬ ಹಾಗೂ ಅವರ ಬೀಗರು ಸೇರಿ ನೂರಾರು ಎಕರೆ ಜಮೀನು ಖರೀದಿಸಿದ್ದಾರೆ. ಬಿಎಂಐಸಿಪಿ (ನೈಸ್) ಯೋಜನೆ ವ್ಯಾಪ್ತಿಯಲ್ಲಿ ಇವರ ಜಮೀನು ಬರಬೇಕು, ಆದರೆ ಭೂಸ್ವಾಧೀನ ಮಾತ್ರ ಆಗಬಾರದು ಎಂದರೆ ಹೇಗೆ? ಎಲ್ಲರಿಗೂ ಒಂದೇ ನ್ಯಾಯ ಇರಬೇಕು" ಎಂದು ಆಕ್ರೋಶ ಹೊರಹಾಕಿದರು.

ದೇವೇಗೌಡರು ಈ ಯೋಜನೆಯನ್ನು ರಿಯಲ್ ಎಸ್ಟೇಟ್ ಮಾಫಿಯಾ ಎಂದು ಕರೆದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ತಿರುಗೇಟು ನೀಡಿದ ಅವರು, "ನಮ್ಮ ನಾಯಕರಿಗೆ ಪತ್ರ ಬರೆದು ಏನು ಪ್ರಯೋಜನ? ಅಧಿಕಾರದಲ್ಲಿರುವ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲಿ. ರಿಯಲ್ ಎಸ್ಟೇಟ್ ಮಾಫಿಯಾ ಆರಂಭಿಸಿದ್ದೇ ಇವರು, ಅವರ ಮಗನ ಜೊತೆ ದೇವೇಗೌಡರು ಕೂಡ ಚರ್ಚೆಗೆ ಬರಲಿ" ಎಂದರು.

ನಿಖಿಲ್ ಟೀಕೆಗೆ ತಿರುಗೇಟು

ಕಾಂಗ್ರೆಸ್‌ನ 136 ಶಾಸಕರ ಸಂಖ್ಯಾಬಲದ ಕುರಿತು ನಿಖಿಲ್ ಕುಮಾರಸ್ವಾಮಿ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, "ಆ ಹುಡುಗನಿಗೆ ಉತ್ತರ ನೀಡಲು ನಾನು ಇಷ್ಟಪಡುವುದಿಲ್ಲ. ಅದಕ್ಕೆ ನಮ್ಮ ಸ್ಥಳೀಯ ನಾಯಕರಿದ್ದಾರೆ. ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಮೇಲೆ ಆತನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಹುದು, ಸದ್ಯ ಅವರ ರಾಜಕೀಯ ಸ್ಟೇಟಸ್ ನನಗೆ ಗೊತ್ತಿಲ್ಲ" ಎಂದರು. "ಈ ಹಿಂದೆ ಮೋದಿ ಗೆದ್ದರೆ ದೇಶ ಬಿಡುವುದಾಗಿ ದೇವೇಗೌಡರು ಹೇಳಿದ್ದರು. ಸಮಯಕ್ಕೆ ತಕ್ಕಂತೆ ಬದಲಾಗುವ ಇವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದರು. ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿದ ನಂತರ ಈ ಭಾಗದ ಆಸ್ತಿ ಮೌಲ್ಯ ಗಣನೀಯವಾಗಿ ಹೆಚ್ಚಾಗಿದ್ದು, ಇದನ್ನು ಕಂಡು ಈಗ ಪರಮೇಶ್ವರ್ ಕೂಡ ತುಮಕೂರನ್ನು 'ಬೆಂಗಳೂರು ಉತ್ತರ' ಮಾಡಲು ಕೋರುತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+