ಬಿಜೆಪಿ ಶಾಸಕ ಮುನಿರತ್ನ ಬಂಧನ ಹಿಂದೆ ಈ ಮೂವರ ಕೈವಾಡ: ಹೊಸ ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ
ಬೆಳಗಾವಿ, ಸೆಪ್ಟೆಂಬರ್ 17: ಜಾತಿನಿಂದನೆ ಮತ್ತು ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಅವರನ್ನ ಬಂಧಿಸಿದ್ದು, ಮುನಿರತ್ನ ಬಂಧನದ ಹಿಂದೆ ಆ ಮೂವರ ಕೈವಾಡವಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಾಸಕ ಮುನಿರತ್ನ ಬಂಧನ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಹೋದರ ಡಿ.ಕೆ.ಸುರೇಶ ಮತ್ತು ಕುಸುಮಾ ಅವರ ಕೈವಾಡ ಇದೆ. ಆತ ಡಿ.ಕೆ.ಶಿವಕುಮಾರ್ ಅಲ್ಲ ಸೀಡಿ ಶಿವು. ತನ್ನ ವಿರುದ್ಧ ಯಾರಿದ್ದಾರೋ ಅವರೆಲ್ಲರ ಸಿ.ಡಿ. ಬಿಡುಗಡೆ ಮಾಡಿ ಜೈಲಿಗೆ ಕಳಿಸುತ್ತಾನೆ. ಮುನಿರತ್ನ ಪ್ರಕರಣದ ಸತ್ಯ ಹೊರಬರಬೇಕಾದರೆ ಸಿಬಿಐ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಥಮವಾಗಿ ನನ್ನ ಬಲಿ ತೆಗೆದುಕೊಂಡರು. ನಂತರ ದೇವೇಗೌಡರ ಕುಟುಂಬ ಬಲಿ ತೆಗೆದುಕೊಂಡರು. ಈಗ ಮುನಿರತ್ನ ಸರದಿ. ನಾನು ಬಹಳ ಗಟ್ಟಿ, ಸಮರ್ಥವಾಗಿ ಎದುರಿಸಿದೆ. ಹೀಗಾಗಿ ಹೊರಗಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದವರ ಸಿ.ಡಿ ಸರದಿ ಬರುವುದರಲ್ಲಿ ಅಚ್ಚರಿ ಇಲ್ಲ. ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವಂತಹ ಸಿಡಿಗಳು ಅವರಿಂದ ಹೊರಬರಹುದು.
ಇನ್ನೂ ಸಾಕಷ್ಟು ಸಿಡಿಗಳು ಅವರ ಬಳಿ ಇವೆ. ಇದು ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಪಕ್ಷಾತೀತ ತನಿಖೆ ನಡೆಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಿಕೊಳ್ಳುವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಆಡಿಯೋದಲ್ಲಿರುವ ಧ್ವನಿ ಶಾಸಕ ಮುನಿರತ್ನರದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ನಮ್ಮ ಪಕ್ಷದವರೇ ಅವರ ವಿರುದ್ಧ ಮಾತನಾಡುವುದು ಎಷ್ಟು ಸರಿ. ಸಂಸದ ರಮೇಶ ಜಿಗಜಿಣಗಿ ಅವರು ವಯಸ್ಸಿನಲ್ಲಿ ಹಿರಿಯ ಅನುಭವಿಗಳು. ಅವರೂ ಮುನಿರತ್ನ ವಿರುದ್ಧ ಮಾತನಾಡುವುದು ಸರಿಯಲ್ಲ. ಬಿಜೆಪಿ ಹೈಕಮಾಂಡ್ ಮೊದಲು ಇಂತವರಿಗೆ ನೋಟಿಸ್ ನೀಡಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಒತ್ತಾಯಿಸಿದರು.
ಮುಡಾ ಹಗರಣದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆ ಯಡಿಯೂರಪ್ಪನವರ ವಿರುದ್ಧ ಆರೋಪ ಬಂದಾಗಿ ಏನು ಮಾತನಾಡಿದ್ದರು ಎಂಬುದನ್ನು ಅರಿತುಕೊಳ್ಳಲಿ. ವಿಚಾರ ಮಾಡಿ ತಿರ್ಮಾನ ಕೈಗೊಳ್ಳಬೇಕು. ಮುಡಾ ಹಗರಣಕ್ಕಿಂತ ದೊಡ್ಡ ಹಗರಣ ವಾಲ್ಮೀಕಿ ನಿಗಮ ಹಣ ದುರುಪಯೋಗ ಕುರಿತು ತ್ವರಿತವಾಗಿ ತನಿಖೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಈ ಹಗರಣ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಲು ಹೈಕಮಾಂಡ್ ಅನುಮತಿ ಕೇಳಿದ್ದೇವೆ. ಅವರ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಇನ್ನೂ ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿರುವುದಕ್ಕೆ ನನ್ನ ವಿರೋಧವಿದೆ. ಪಕ್ಷಕ್ಕೆ ಭ್ರಷ್ಟತೆಯ ಲೇಪನ ಬಂದಿರುವುದೇ ವಿಜಯೇಂದ್ರನಿಂದ, ಅವನಿಗೆ ನಮ್ಮ ಪಕ್ಷದ ಸಿದ್ದಾಂತದ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಅವನ ನಾಯಕತ್ವ ನಾವು ಒಪ್ಪುವುದಿಲ್ಲ. ಅವರ ತಂದೆ ಯಡಿಯೂರಪ್ಪರನ್ನು ನಾವು ಗೌರವಿಸುತ್ತೇವೆ. ಪಕ್ಷಕ್ಕೆ ಸಾಮೂಹಿಕ ನಾಯಕತ್ವದ ಅವಶ್ಯಕತೆ ಇದೆ. ಏಕ ವ್ಯಕ್ತಿಗೆ ಪಕ್ಷದ ಜವಾಬ್ದಾರಿ ನೀಡಬಾರದು. ಸಾಮೂಹಿಕ ನಾಯಕತ್ವಕ್ಕೆ ನೀಡಿದರೆ 136ಕ್ಕೂ ಅಧಿಕ ಸ್ಥಾನ ಗೆದ್ದು ತೋರಿಸುತ್ತೇವೆ ಎಂದು ಹೇಳಿದರು.












Click it and Unblock the Notifications