ಐಟಿ ಕಚೇರಿಗೆ ವಿಚಾರಣೆಗೆ ಬಂದ ಡಿ.ಕೆ.ಶಿವಕುಮಾರ್
ಐಟಿ ಅಧಿಕಾರಿಗಳ ವಿಚಾರಣಗೆ ಆಗಮಿಸಿದ ಡಿ.ಕೆ.ಶಿವಕುಮಾರ್ನಾಲ್ಕು ದಿನಗಳ ಕಾಲ ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆದಿತ್ತು
ಬೆಂಗಳೂರು, ಆ.06 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆದಾಯ ತೆರಿಗೆ ಇಲಾಖೆ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ಸಚಿವರಿಗೆ ಸಮನ್ಸ್ ಜಾರಿ ಮಾಡಿತ್ತು.
ಸೋಮವಾರ ಕ್ವಿನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಜೊತೆ ಆಗಮಿಸಿದರು. ಇಂದು ಮಧ್ಯಾಹ್ನದ ತನಕ ಅಧಿಕಾರಿಗಳು ಸಚಿವರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಐಟಿ ಕಚೇರಿ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, 'ವಿಚಾರಣೆಗೆ ಬರುವಂತೆ ಸೂಚಿಸಿದ್ದರಿಂದ ಆಗಮಿಸಿದ್ದೇನೆ. ಅಧಿಕಾರಿಗಳು ನಡೆಸುವ ವಿಚಾರಣೆಗೆ ಸಹಕಾರ ನೀಡುತ್ತೇನೆ' ಎಂದು ಹೇಳಿದರು.
'ಗುಜರಾತ್ ಕಾಂಗ್ರೆಸ್ ಶಾಸಕರ ಜೊತೆ ಅಹಮದಾಬಾದ್ ಗೆ ಹೋಗಬೇಕಿದೆ. ಆದರೆ, ಇಲ್ಲಿನ ಪ್ರಕ್ರಿಯೆಗಳಿಂದಾಗಿ ತೆರಳಿಲ್ಲ. ಈ ಪ್ರಕ್ರಿಯೆ ಪೂರ್ಣಗೊಂಡರೆ ತೆರಳುತ್ತೇನೆ' ಎಂದರು.
ಆಗಸ್ಟ್ 2ರಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದಲ್ಲಿರುವ ನಿವಾಸ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿತ್ತು. ಮೈಸೂರಿನಲ್ಲಿರುವ ಡಿ.ಕೆ.ಶಿವಕುಮಾರ್ ಮಾನವ ಮನೆಯ ಮೇಲೆಯೂ ದಾಳಿ ನಡೆಸಲಾಗಿತ್ತು. ಶನಿವಾರ ಬೆಳಗ್ಗೆ ದಾಳಿ ಮುಕ್ತಾಯಗೊಂಡಿದ್ದು, ಅಧಿಕಾರಿಗಳು ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು.
ಡಿ.ಕೆ.ಶಿವಕುಮಾರ್ ಅವರ ವಿದೇಶ ಪ್ರವಾಸಕ್ಕೆ ನಿರ್ಬಂಧ ವಿಧಿಸಿರುವ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಸಮನ್ಸ್ ಹಿನ್ನಲೆಯಲ್ಲಿ ಇಂದು ಸಚಿವರು ವಿಚಾರಣೆಗೆ ಹಾಜರಾಗಿದ್ದಾರೆ.












Click it and Unblock the Notifications