ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊಸ ತಲೆನೋವು: ಸರ್ಕಾರ ವಿರುದ್ಧ ಶಾಸಕರು ಹೀಗೆ ಯಾಕೆ ಹೇಳ್ತಿದ್ದಾರೆ?
ಬೆಂಗಳೂರು, ಸೆಪ್ಟೆಂಬರ್ 12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸದ್ಯ ಮುಡಾ ಹಗರಣ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊಸ ಸಮಸ್ಯೆ ಎದುರಾಗಿದೆ.
ಮುಡಾ ಹಗರಣದಲ್ಲಿ ಕಾನೂನು ಹೋರಾಟದ ಜೊತೆಗೆ ಸಿಎಂ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದರುವ ಸಿದ್ದರಾಮಯ್ಯಗೆ ಹೊಸ ಟೆನ್ಷನ್ ಆರಂಭವಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಬೆಂಬಲಿತ ಶಾಸಕರು ಹಾಗೂ ಜೆಡಿಎಸ್ ಶಾಸಕರು ಆರೋಪಿಸುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಬೊಕ್ಕಸದ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ. ನನ್ನ ಕ್ಷೇತ್ರದ ಜನ ಬಹು ನಿರೀಕ್ಷೆ ಇಟ್ಟು ಒಂದು ಉನ್ನತ ಜವಾಬ್ದಾರಿ ಸ್ಥಾನಕ್ಕೆ ಕಳುಹಿಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಹೆಚ್.ಮಂಜು ಆರೋಪಿಸಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ನಾಗರಘಟ್ಟ ಗ್ರಾಮದಲ್ಲಿ ರಸ್ತೆ ಅವ್ಯವಸ್ಥೆ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದ ಗ್ರಾಮಸ್ಥರ ಮುಂದೆ ಶಾಸಕ ಮಂಜು ಸರ್ಕಾರದ ಆರ್ಥಿಕ ಸ್ಥಿತಿ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಸ್ವತಃ ತಮ್ಮ ಸಚಿವರು ಹಾಗೂ ಶಾಸಕರ ಕ್ಷೇತ್ರಗಳ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ನೀಡುತ್ತಿಲ್ಲ. ಈ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ.

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಶಾಸಕರಾಗಿದ್ದೇನೆ. ಆದರೂ ಸುಮ್ಮನೆ ಕೂರುವ ಸೋಂಬೇರಿ ಶಾಸಕ ನಾನಲ್ಲ. ಹೋರಾಟದ ಮೂಲಕವೇ ಅನುದಾನ ತಂದು ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಶಾಸಕ ಹೆಚ್.ಟಿ.ಮಂಜು ಗ್ರಾಮಸ್ಥರ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಶಾಸಕರಿಂದ ಸರ್ಕಾರ ವಿರುದ್ಧ ಅಸಮಾಧಾನ
ರಾಜ್ಯ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನ ಏನು ಬರುತ್ತಿಲ್ಲ. ಅಭಿವೃದ್ಧಿ ಮಾಡಲು ಸಾಕಷ್ಟು ಸಮಸ್ಯೆ ಆಗುತ್ತಿದೆ. ಜನರ ಬಳಿ ಹೋದ ಸಂದರ್ಭದಲ್ಲಿ ಮುಜುಗರವಾಗುತ್ತಿದೆ. ಅಭಿವೃದ್ಧಿ ಮಾಡುವಷ್ಟು ಹಣ ಬರುತ್ತಿಲ್ಲ. ದುಡ್ಡೆಲ್ಲ ಗ್ಯಾರಂಟಿ ಯೋಜನೆಗೆ ಹೋಗುತ್ತಿದೆ. ಹಾಗಾಗಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಕಾಂಗ್ರೆಸ್ ಬೆಂಬಲಿತ, ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ ರಾಜ್ಯ ಸರ್ಕಾರ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ. ಎಷ್ಟಿದೆ ಅದರಲ್ಲಿ ಹೊಂದಾಣಿಕೆ ಮಾಡುತ್ತಿದ್ದಾರೆ. ಹಿಂದಿನ ಪೇಮೆಂಟ್ ಮಾಡೋದೆ ಸಾಕಷ್ಟು ಬಾಕಿ ಇದೆ. ತಾತ್ಕಾಲಿಕ ಪರಿಹಾರ ಬಿಟ್ಟು ಶಾಶ್ವತ ಪರಿಹಾರ ಕೊಡಬೇಕು. ಗ್ಯಾರಂಟಿ ನಮ್ಮ ರಾಜ್ಯದಲ್ಲಿ ಒಂದೇ ಅಲ್ಲ. ಬೇರೆ ಕಡೆಗಳಲ್ಲೂ ಮಾಡಿದ್ದಾರೆ. ಕಳೆದ ಅಧಿವೇಶನದಲ್ಲೇ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದುಕೊಂಡಿದ್ದೆ. ಸರ್ಕಾರ ಗ್ಯಾರಂಟಿ ಯಾರ ಯಾರಿಗೆ ತಲುಪುತ್ತಿದೆ, ಯಾರಿಗೆ ತಲುಪುತ್ತಿಲ್ಲ ಎನ್ನುವುದರ ಅರ್ಥಿಕತೆ ಬಗ್ಗೆ ಮಾಹಿತಿ ಪಡೆಯಬೇಕು. ಅವಶ್ಯಕತೆ ಇಲ್ಲದ ಗ್ಯಾರಂಟಿ ಯೋಜನೆ ತೆಗೆಯುವುದು ಒಳ್ಳೆಯದು. ಗ್ಯಾರಂಟಿ ಜೊತೆಗೆ ಸರ್ಕಾರ ರಾಜ್ಯದ ಆರ್ಥಿಕತೆ ಬಗ್ಗೆಯೂ ಸಹ ಅರ್ಥಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.












Click it and Unblock the Notifications