• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದಗಂಗಾ ಮಠದ ಆಹಾರಕ್ಕೆ ಕತ್ತರಿ; ದಾಖಲೆಗಳು ಬಿಚ್ಚಿಟ್ಟ ಲೆಕ್ಕ

|

ಬೆಂಗಳೂರು, ಫೆ. 04: ಹಿಂದೆ ಅಧಿಕಾರದಲ್ಲಿದ್ದಾಗ ಮಠ-ಮಾನ್ಯಗಳಿಗೆ ಕೋಟಿ ಕೋಟಿ ರೂ.ಗಳನ್ನು ಕೊಡುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ರಾಜ್ಯ ಬಿಜೆಪಿ ಸರ್ಕಾರ, ಇದೀಗ ದಿಢೀರ್ ಅಂತಾ ಮಠಗಳಿಗೆ ಕೊಡುತ್ತಿದ್ದ ಆಹಾರ ಧಾನ್ಯ ಸ್ಥಗಿತಗೊಳಿಸುವ ಮೂಲಕ ಜನರ ಆಕ್ರೋಶಕ್ಕೆ ತುತ್ತಾಗಿದೆ.

ತುಮಕೂರಿನ ಸಿದ್ದಗಂಗಾ, ಆದಿಚುಂಚನಗಿರಿ ಹಾಗೂ ಸುತ್ತೂರು ಮಠಗಳು ಸೇರಿದಂತೆ ಹಲವು ಕಲ್ಯಾಣ ಸಂಸ್ಥೆಗಳಿಗೆ ಅನ್ನ ದಾಸೋಹ ಯೋಜನೆಯಡಿ ಸರಬರಾಜು ಆಗುತ್ತಿದ್ದ ಆಹಾರ ಧಾನ್ಯವನ್ನು ರಾಜ್ಯ ಬಿಜೆಪಿ ಸರ್ಕಾರ ದಿಢೀರ್ ಸ್ಥಗಿತಗೊಳಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನ ದಾಸೋಹ ಯೋಜನೆಯಡಿ, ಮಠ-ಮಾನ್ಯಗಳು ಸೇರಿದಂತೆ ಕಲ್ಯಾಣ ಸಂಸ್ಥೆಗಳನ್ನು ಗುರುತಿಸಿ ಉಚಿತವಾಗಿ ಆಹಾರ ಧಾನ್ಯ ಸರಬರಾಜು ಮಾಡುವ ಯೋಜನೆ ಜಾರಿಗೆ ತಂದಿತ್ತು.

ಸಿದ್ದಗಂಗಾ ಮಠ ಸೇರಿ ಹಲವು ಸಂಸ್ಥೆಗಳಿಗೆ ಅಕ್ಕಿ-ಗೋದಿ ಸರಬರಾಜು ನಿಲ್ಲಿಸಿದ ಸರ್ಕಾರ

ಇದೀಗ ವಿವಾದ ಸುತ್ತಿಕೊಳ್ಳುತ್ತಿದ್ದಂತೆಯೆ ಹಿಂದಿನ ಮೈತ್ರಿ ಸರ್ಕಾರದಲ್ಲೇ ಯೋಜನೆ ಸ್ಥಗಿತಗೊಂಡಿತ್ತು ಎಂದು ರಾಜ್ಯ ಬಿಜೆಪಿ ಸರ್ಕಾರ ಸ್ಪಷ್ಟನೆ ಕೊಡುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿತ್ತು. ಆದರೆ ನಾವು ಜಾರಿಗೆ ತಂದಿದ್ದ ಅನ್ನ ದಾಸೋಹ ಯೋಜನೆಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ ಅಂತಾ ಹಿಂದಿನ ಸರ್ಕಾರದ ಆಹಾರ ಸಚಿವ ಯು.ಟಿ. ಖಾದರ್ ರಾಜ್ಯ ಸರ್ಕಾರಕ್ಕೆ ತಿರುಗೇಟು ಕೊಟ್ಟಿದ್ದಾರೆ. ಈ ಎಲ್ಲ ಆರೋಪ-ಪ್ರತ್ಯಾರೋಪಗಳ ಮಧ್ಯೆ, ಅಷ್ಟಕ್ಕೂ ನಿಜವಾಗಿಯೂ ನಡೆದಿದ್ದೇನು ಎಂಬುದನ್ನು ದಾಖಲೆ ಸಹಿತ 'ಒನ್ ಇಂಡಿಯಾ' ನಿಮ್ಮ ಮುಂದೆ ಇಡುತ್ತಿದೆ.

ಏನಿದು ಕಲ್ಯಾಣ ಸಂಸ್ಥೆಗಳಿಗೆ ಧಾನ್ಯ ಸರಬರಾಜು ಯೋಜನೆ ?

ಏನಿದು ಕಲ್ಯಾಣ ಸಂಸ್ಥೆಗಳಿಗೆ ಧಾನ್ಯ ಸರಬರಾಜು ಯೋಜನೆ ?

ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮಗಳು, ಆಸ್ಪತ್ರೆಗಳು, ಮಠಗಳಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯ ಒದಗಿಸಲು 1996ರಲ್ಲಿ ಆಗಿನ ಕೇಂದ್ರ ಸರ್ಕಾರ ಯೋಜನೆ ಆರಂಭಿಸಿತ್ತು. ಕಲ್ಯಾಣ ಸಂಸ್ಥೆಗಳಿಗೆ ರಿಯಾಯತಿ ದರದಲ್ಲಿ ಅಕ್ಕಿ, ಗೋಧಿ ಸರಬರಾಜು ಮಾಡುವ ಯೋಜನೆ ಅದಾಗಿತ್ತು.

ಹೀಗೆ ಆಗಿನ ಕೇಂದ್ರ ಸರ್ಕಾರ ಆರಂಭಿಸಿದ್ದ ಯೋಜನೆಯನ್ನು ಹಿಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ತಾನೇ ಸಬ್ಸಿಡಿ ಭರಿಸುವ ಮೂಲಕ ಬದಲಾವಣೆ ಮಾಡಿ 'ಅನ್ನ ದಾಸೋಹ' ಎಂದು ನಾಮಕರಣ ಮಾಡಿ, ಕಲ್ಯಾಣ ಸಂಸ್ಥೆಗಳಿಗೆ ಉಚಿತವಾಗಿ ಆಹಾರ ಧಾನ್ಯ ಸರಬರಾಜು ಮುಂದುವರೆಸಿತ್ತು.

ಕಲ್ಯಾಣ ಸಂಸ್ಥೆಗಳಿಗೆ ಉಚಿತ ಆಹಾರ ಧಾನ್ಯ ಸರಬರಾಜು

ಕಲ್ಯಾಣ ಸಂಸ್ಥೆಗಳಿಗೆ ಉಚಿತ ಆಹಾರ ಧಾನ್ಯ ಸರಬರಾಜು

ಕಾಂಗ್ರೆಸ್ ಸರ್ಕಾರದ ಆಡಳಿತವಿದ್ದಾಗ ದಾಸೋಹ ಯೋಜನೆಯ ಅಡಿಯಲ್ಲಿ ಸರ್ಕಾರವೇ ಗುರುತಿಸಿದ ಕಲ್ಯಾಣ ಸಂಸ್ಥೆಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುತ್ತಿತ್ತು. ಮಠ-ಮಾನ್ಯಗಳು, ವೃದ್ಧಾಶ್ರಮಗಳು, ಸರ್ಕಾರಿ ಆಸ್ಪತ್ರೆಗಳು, ಅನಾಥಾಶ್ರಮ ಸೇರಿದಂತೆ ಒಟ್ಟು 460 ಕಲ್ಯಾಣ ಸಂಸ್ಥೆಗಳಿಗೆ ಉಚಿತವಾಗಿ ಆಹಾರ ಧಾನ್ಯ ಸರಬರಾಜು ಮಾಡಲು ಹಿಂದಿನ ಆಹಾರ ಸಚಿವ ಯು.ಟಿ. ಖಾದರ್ ಆದೇಶ ಹೊರಡಿಸಿದ್ದರು.

ಯೋಜನೆಯಡಿ 460 ಸಂಸ್ಥೆಗಳ 41,348 ನಿವಾಸಿಗಳಿಗೆ ತಲಾ 10 ಕೆ.ಜಿ. ಅಕ್ಕಿ, 5 ಕೆ.ಜಿ. ಗೋದಿ ಕೊಡಲಾಗುತ್ತಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಳೆದ ಮೂರು ತಿಂಗಳುಗಳಲ್ಲಿ ಮೂರು ಆಧಿಸೂಚನೆ ಹೊರಡಿಸಿ ಯೋಜನೆಯಿಂದ ಮಠಗಳನ್ನು ಕೈಬಿಟ್ಟಿದೆ.

ಸಿದ್ದಗಂಗಾ ಮಠ ಸೇರಿ, ಕಲ್ಯಾಣ ಸಂಸ್ಥೆಗಳಿಗೆ ಯೋಜನೆ ಕಟ್!

ಸಿದ್ದಗಂಗಾ ಮಠ ಸೇರಿ, ಕಲ್ಯಾಣ ಸಂಸ್ಥೆಗಳಿಗೆ ಯೋಜನೆ ಕಟ್!

ಎರಡು ತಿಂಗಳಲ್ಲಿ 3 ಅಧಿಸೂಚನೆ ಹೊರಡಿಸಿದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯೋಜನೆಯಿಂದ ಕಲ್ಯಾಣ ಸಂಸ್ಥೆಗಳನ್ನು ಕೈಬಿಟ್ಟಿತ್ತು. 2019ರ ನವೆಂಬರ್ 12ರಿಂದ ಡಿಸೆಂಬರ್ 27ವರೆಗೆ ಮೂರು ಬಾರಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ಕಳೆದ 12.11.2019 ರಂದು ಮೊದಲ ಆದೇಶದಂತೆ ಅನುಮೋದಿತ 460 ಕಲ್ಯಾಣ ಸಂಸ್ಥೆಗಳಲ್ಲಿನ 41,348 ನಿವಾಸಿಗಳಿಗೆ ತಲಾ 15 ಕೆ.ಜಿ.ಯಂತೆ ಆಹಾರ ಧಾನ್ಯ ಸರಬರಾಜಿಗೆ ಸೂಚನೆ ಹೊರಡಿಸಿದೆ. ಇದು ಹಿಂದಿನ ಸರ್ಕಾರದ ಯೋಜನೆಯ ಮುಂದುವರಿಸುವ ಭಾಗವಾಗಿತ್ತು.

ಆದರೆ ಅದಾದ ಒಂದು ತಿಂಗಳ ಬಳಿಕ ಅಂದರೆ 13.12.2019 ರಂದು ಹೊರಡಿಸಿದ್ದ ಆದೇಶದಲ್ಲಿ 460 ಕಲ್ಯಾಣ ಸಂಸ್ಥೆಗಳಲ್ಲಿ 284 ಕಲ್ಯಾಣ ಸಂಸ್ಥೆಗಳನ್ನು ಕೈಬಿಟ್ಟು ಕೇವಲ 176 ಸಂಸ್ಥೆಗಳಲ್ಲಿರುವ 11,762 ನಿವಾಸಿಗಳಿಗೆ ತಲಾ 15 ಕೆ.ಜಿ.ಯಂತೆ ಅಕ್ಕಿ ಹಾಗೂ ಗೋದಿ ವಿತರಿಸಲು ಆದೇಶ ಮಾಡಿತ್ತು.

ಕೊನೆಗೆ 27.12.2019ರಂದು ಮೂರನೇ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ 176 ಸಂಸ್ಥೆಗಳೊಂದಿಗೆ ಇನ್ನಷ್ಟು ಸಂಸ್ಥೆಗಳನ್ನು ಸೇರಿಸಿ 189 ಕಲ್ಯಾಣ ಸಂಸ್ಥೆಗಳಲ್ಲಿನ 13,785 ನಿವಾಸಿಗಳಿಗೆ ತಲಾ 15 ಕೆಜಿಯಂತೆ ಅಕ್ಕಿ-ಗೋದಿ ಕೊಡಲು ಆದೇಶ ಮಾಡಿತ್ತು.

ಇದರಿಂದಾಗಿ ಪ್ರಮುಖವಾಗಿ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠಕ್ಕೆ ನೀಡಲಾಗುತ್ತಿದ್ದ ಆಹಾರ ಧಾನ್ಯದ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದರ ನೇರ ಪರಿಣಾಮ ಎದುರಿಸಿದ್ದು ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಬಡ ವಿದ್ಯಾರ್ಥಿಗಳು.

ಯೋಜನೆ ಸ್ಥಗಿತಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಕ್ಷೇಪ

ಯೋಜನೆ ಸ್ಥಗಿತಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಕ್ಷೇಪ

ಮಾಜಿ ಸಚಿವ ಯು.ಟಿ. ಖಾದರ್ ಯೋಜನೆ ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. 'ಅನ್ನ ದಾಸೋಹ ಕಾರ್ಯಕ್ರಮವನ್ನ ನಾವು ಜಾರಿಗೆ ತಂದಿದ್ದೆವು. ಅನಾಥಾಶ್ರಮ, ವೃದ್ಧಾಶ್ರಮ 454 ಸಂಸ್ಥೆಗಳು ಯೋಜನೆಯೆ ಉಪಯೋಗ ಪಡೆಯುತ್ತಿದ್ದವು. ಆದರೆ ಈಗ ರಾಜ್ಯ ಸರ್ಕಾರ ಇದನ್ನ ರದ್ದುಪಡಿಸಿದೆ. ಓದುವ ಮಕ್ಕಳು, ವೃದ್ದಾಶ್ರಮದಲ್ಲಿರುವ ವೃದ್ಧರು ಎಲ್ಲಿಗೆ ಹೋಗಬೇಕು? ಮಠಗಳಲ್ಲಿ ಓದುತ್ತಿರುವ ಮಕ್ಕಳಿಗೆ ಏಕೆ ಅನ್ಯಾಯ ಮಾಡುತ್ತಿದ್ದೀರಿ' ಎಂದು ಗಂಭೀರ ಪ್ರಶ್ನೆ ಎತ್ತಿದ್ದರು.

ಜೊತೆಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಡಿತಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರದ ನಿಲುವನ್ನೂ ಖಾದರ್ ವಿರೋಧಿಸಿದ್ದರು. ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿದ್ದ 7 ಕೆ.ಜಿ. ಅಕ್ಕಿಯನ್ನು 5 ಕೆ.ಜಿ. ಇಳಿಸಲು ಸರ್ಕಾರ ಹೊರಟಿದೆ. ಎರಡೂ ಯೋಜನೆಗಳನ್ನು ಬದಲಾವಣೆ ಮಾಡಿದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದರು.

ಹಿಂದಿನ ಸರ್ಕಾರ ಯೋಜನೆ ಕಡಿತಗೊಳಿಸಿದೆ ಎಂದ ಶಶಿಕಲಾ ಜೊಲ್ಲೆ

ಹಿಂದಿನ ಸರ್ಕಾರ ಯೋಜನೆ ಕಡಿತಗೊಳಿಸಿದೆ ಎಂದ ಶಶಿಕಲಾ ಜೊಲ್ಲೆ

ಮಾಜಿ ಸಚಿವ ಯು.ಟಿ. ಖಾದರ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಆಹಾರ ಸಚಿವೆ ಶಶಿಕಲಾ ಜೊಲ್ಲೆ, 'ಸಿದ್ದಗಂಗಾ ಮಠ ಸೇರಿದಂತೆ ರಾಜ್ಯದ 250ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆಹಾರ ಧಾನ್ಯಗಳ ಪೂರೈಕೆ ಕಡಿತಗೊಳಿಸಿರುವುದು ನಮ್ಮ ಸರ್ಕಾರದ ನಿರ್ಧಾರ ಅಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೇ ಯೋಜನೆ ನಿಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಅನ್ವಯ ಖಾಸಗಿ ಸಂಸ್ಥೆಗಳಿಗೆ ಆಹಾರಧಾನ್ಯ ಪೂರೈಕೆ ಕಡಿತ ಮಾಡಲಾಗಿದೆ. ನಮ್ಮ ಸರ್ಕಾರದಿಂದ ಇದಾಗಿಲ್ಲ' ಎಂದಿದ್ದರು.

ಆದರೆ ಆದೇಶಗಳನ್ನು ಶಶಿಕಲಾ ಜೊಲ್ಲೆ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಮೇಲೆಯೇ ಯೋಜನೆ ನಿಲ್ಲಿಸಿ ಆದೇಶ ಹೊರಡಿಸಲಾಗಿತ್ತು ಎಂಬುದು ಗಮನಾರ್ಹ.

3 ತಿಂಗಳು ಹಿಂದೆಯೆ ಸಿಎಂಗೆ ಪತ್ರ ಬರೆದಿದ್ದ ಸಿದ್ದಗಂಗಾ ಶ್ರೀಗಳು

3 ತಿಂಗಳು ಹಿಂದೆಯೆ ಸಿಎಂಗೆ ಪತ್ರ ಬರೆದಿದ್ದ ಸಿದ್ದಗಂಗಾ ಶ್ರೀಗಳು

ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಯೋಜನೆ ಸ್ಥಗಿತಗೊಳಿಸಿದ ತಕ್ಷಣವೇ ರಾಜ್ಯ ಸರ್ಕಾರಕ್ಕೆ ಸಿದ್ದಗಂಗಾ ಮಠದ ಸಿದ್ದಲಿಂಗಶ್ರೀಗಳು ಸಿಎಂ ಸೇರಿದಂತೆ ಸಚಿವರಿಗೆ ಪತ್ರ ಬರೆದು ಅವರ ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಶ್ರಿಗಳೇ ಹೇಳಿರುವಂತೆ, 'ಕಳೆದ ಡಿಸೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿ ಯೋಜನೆ ನಿಲ್ಲಿಸಿದ್ದೇವೆ ಎಂದು ತಿಳಿಸಿತ್ತು. ಆಗ ನಾವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಆಹಾರ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಬರೆದು ಯೋಜನೆ ನಿಲ್ಲಿಸದಂತೆ ಮನವಿ ಮಾಡಿಕೊಂಡಿದ್ದೇವು. ಆಹಾರ ಧಾನ್ಯ ಸರಬರಾಜು ನಿಲ್ಲಿಸುವುದರಿಂದ ಮಕ್ಕಳಿಗೆ ತೊಂದರೆ ಆಗಲಿದೆ ಎಂಬುದನ್ನೂ ಪತ್ರದಲ್ಲಿ ವಿವರಿಸಿದ್ದೇವು. 1996ರಲ್ಲಿ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತಂದಿತ್ತು. ಕಳೆದ ಎರಡು ವರ್ಷಗಳವರೆ ಸಬ್ಸಿಡಿ ದರದಲ್ಲಿ ಧಾನ್ಯ ಪೂರೈಕೆ ಆಗುತ್ತಿತ್ತು. ಎರಡು ವರ್ಷಗಳ ಹಿಂದೆ ಒಂದು ಕ್ವಿಂಟಾಲ್ ಧಾನ್ಯಕ್ಕೆ 600 ರೂ. ಭರಿಸಿ ತೆಗೆದುಕೊಳ್ಳುತ್ತಿದ್ದೇವು. ಆದರೆ ಆಗ ರಾಜ್ಯ ಸರ್ಕಾರವೇ ಸಬ್ಸಿಡಿ ಭರಿಸಿ ಉಚಿತವಾಗಿ ಆಹಾರ ಧಾನ್ಯ ಒದಗಿಸುವ ಯೋಜನೆ ಜಾರಿಗೆ ತಂದಿತ್ತು' ಎನ್ನುತ್ತಾರೆ ಸಿದ್ದಲಿಂಗ ಶ್ರೀಗಳು.

ಭಕ್ತರು ಕೊಟ್ಟಿದ್ದ ಭತ್ತದ ಅಕ್ಕಿ ಉಪಯೋಗಿಸುತ್ತಿದ್ದೇವೆ

ಭಕ್ತರು ಕೊಟ್ಟಿದ್ದ ಭತ್ತದ ಅಕ್ಕಿ ಉಪಯೋಗಿಸುತ್ತಿದ್ದೇವೆ

ಕಳೆದ ವರ್ಷ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದಾಗ ಉತ್ತರ ಕರ್ನಾಟಕ ಭಾಗದಿಂದ ಬಹಳಷ್ಟು ಭಕ್ತರು ಭತ್ತವನ್ನು ತಂದು ಕೊಟ್ಟಿದ್ದರು. ಅದೇ ಭತ್ತವನ್ನು ಕಳೆದ ಎರಡು ತಿಂಗಳುಗಳಿಂದ ಅಕ್ಕಿ ಮಾಡಿಸಿ ಉಪಯೋಗಿಸುತ್ತಿದ್ದೇವೆ. ಭತ್ತ ಇದ್ದಿದ್ದರಿಂದ ನಮಗೆ ಅನುಕೂಲವಾಗಿದೆ. ಈಗ ಸಧ್ಯಕ್ಕೆ ತೊಂದರೆ ಆಗಿಲ್ಲ. ಆದರೆ ಮುಂದೆ ಮಠದಲ್ಲಿ ಮಕ್ಕಳಿಗೆ ಊಟ ಕೊಡಲು ಕಷ್ಟವಿದೆ. ಹಾಗಾಗಿ ಸರ್ಕಾರದ ತೀರ್ಮಾನವನ್ನು ನೋಡುತ್ತಿದ್ದೇವೆ ಎಂದು ಸಿದ್ದಗಂಗಾಮಠದ ಸಿದ್ದಲಿಂಗ ಶ್ರೀಗಳು ಹೇಳಿಕೆ ಕೊಟ್ಟಿದ್ದಾರೆ. ನಿಮ್ಮ ಕೈಯಲ್ಲಿ ಉಚಿತವಾಗಿ ಕೊಡಲು ಆಗದೇ ಇದ್ದರೆ ಸಬ್ಸಿಡಿ ದರದಲ್ಲಿ ಆದರೂ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇವೆಂದು ಸಿದ್ದಲಿಂಗ ಶ್ರೀಗಳು ತಿಳಿಸಿದ್ದಾರೆ.

ಯೋಜನೆ ಸ್ಥಗಿತಗೊಳಿಸಿದ್ದ ಕೇಂದ್ರ ಬಿಜೆಪಿ ಸರ್ಕಾರ

ಯೋಜನೆ ಸ್ಥಗಿತಗೊಳಿಸಿದ್ದ ಕೇಂದ್ರ ಬಿಜೆಪಿ ಸರ್ಕಾರ

ಉತ್ತರ ಭಾರತದ ಕೆಲವು ಕಡೆಗಳಲ್ಲಿ ಯೋಜನೆ ದುರುಪಯೋಗ ಆಗುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಯೋಜನೆಯ ಪರಿಶೀಲನೆ ನಡೆಸಿದ್ದೇವೆ. ಕೇಂದ್ರ ಸರ್ಕಾರದ ಸೂಚನೆಯಂತೆ ಯೋಜನೆಯಿಂದ ನಿಮ್ಮನ್ನು ಹೊರಗಿಡಲಾಗಿದೆ ಎಂದು ಕಲ್ಯಾಣ ಸಂಸ್ಥೆಗಳಿಗೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರು.

ಆ ಬಗ್ಗೆ ಚರ್ಚೆಯೇ ಬೇಡ ಎಂದ ಸಿಎಂ ಯಡಿಯೂರಪ್ಪ

ಆ ಬಗ್ಗೆ ಚರ್ಚೆಯೇ ಬೇಡ ಎಂದ ಸಿಎಂ ಯಡಿಯೂರಪ್ಪ

ಮಠಗಳಿಗೆ ಆಹಾರ ಧಾನ್ಯ ಪೂರೈಕೆ ಸ್ಥಗಿತದ ಬಗ್ಗೆ ಈ ಬಗ್ಗೆ ಪ್ರತಿಕ್ರಿಯೆ ಕೊಡಲು ಸಿಎಂ ಯಡಿಯೂರಪ್ಪ ಮುಂದಾಗಲಿಲ್ಲ. ಆದರೆ 'ಈಗ ಅದರ ಬಗ್ಗೆ ಚರ್ಚೆ ಬೇಡ, ತಕ್ಷಣದಿಂಲೇ ಜಾರಿಗೆ ಬರುವಂತೆ ರಾಜ್ಯದ ಮಠ-ಮಾನ್ಯಗಳಿಗೆ ಅಕ್ಕಿ, ಗೋಧಿ ಪೂರೈಕೆಗೆ ಆದೇಶ ಕೊಟ್ಟಿದ್ದೇನೆ. ಎಷ್ಟೇ ಆರ್ಥಿಕ ಭಾರವಾದರೂ ಅಕ್ಕಿ, ಗೋಧಿ ಪೂರೈಕೆಗೆ ಕ್ರಮ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ಇನ್ನೂ ಏನೇ ಅಡೆತಡೆಗಳಿದ್ದರೂ ಅವುಗಳನ್ನೂ ಪರಿಹರಿಸಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ: ಇದು ಕೇಂದ್ರದ ನಡೆ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ: ಇದು ಕೇಂದ್ರದ ನಡೆ

ಇಷ್ಟಕ್ಕೆಲ್ಲ ಕಾರಣವಾಗಿದ್ದು ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರ. ಉತ್ತರ ಭಾರತದಲ್ಲಿ ದುರುಪಯೋಗವಾಗಿದ್ದಕ್ಕೆ ಕರ್ನಾಟಕದಲ್ಲಿ ಯೋಜನೆಗೆ ಕಡಿವಾಣ ಹಾಕಿದ್ದೇಕೆ ಎಂದು ಇದೀಗ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದಗಂಗಾ ಮಠದಲ್ಲಿ ಮಕ್ಕಳ ಎದುರು ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಠಕ್ಕೆ ಬರುತ್ತಿದ್ದ ಆಹಾರ ಧಾನ್ಯ ಸ್ಥಗಿತಗೊಳಿಸಿದ್ದು ನಿಜಕ್ಕೂ ವಿಪರ್ಯಾಸ ಎಂದು ತುಮಕೂರಿನ ನಿವಾಸಿ ಮಲ್ಲೇಶಪ್ಪ ಕರದೀನ್ ಅಭಿಪ್ರಾಯ ಪಟ್ಟಿದ್ದಾರೆ.

ಜೊತೆಗೆ ಮೂರು ತಿಂಗಳು ಹಿಂದೆಯೆ ತುಮಕೂರು ಸಿದ್ದಗಂಗಾ ಮಠದಿಂದ ಸಿಎಂ ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಆಹಾರ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಬಂದಿದೆ. ಆದರೂ ಯೋಜನೆ ಸ್ಥಗಿತಗೊಳಿಸಿದ್ದು ಯಾಕೇ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಮುಂದೆಂದೂ ಕೂಡ ರಾಜ್ಯ ಸರ್ಕಾರ 'ಅನ್ನ ದಾಸೋಹ' ಯೋಜನೆ ಸ್ಥಗಿತಗೊಳಿಸಬಾರದು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

English summary
Disruption of Food Grain Supply Scheme supplied by the State Government to welfare organizations. The BJP government order has caused controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X