ಉದ್ಯೋಗದಿಂದ ವಜಾ, ಲೈಂಗಿಕ ಪ್ರಕರಣ ದಾಖಲಿಸಲು ಆಧಾರವಲ್ಲ; ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 06; ಅಂಚೆ ಮಾಸ್ಟರ್‌ಗಳ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ದೂರು ಮತ್ತದರ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ನೀಡಿದೆ.
ಅಲ್ಲದೆ, ಉದ್ಯೋಗದಿಂದ ವಜಾಗೊಳಿಸಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ಹೇಳಿದೆ.
ಬಸವನಗುಡಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್‌ಗಳಾದ ರಾಧಾಕೃಷ್ಣ ಮತ್ತು ಹನುಮಂತಯ್ಯ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?; ಅರ್ಜಿದಾರರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪೂರಕ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ. ಅಂಚೆ ಕಚೇರಿಯ ಉಸ್ತುವಾರಿ ಅಧಿಕಾರಿಯು ಕೆಲಸದಿಂದ ತೆಗೆದು ಹಾಕಿದರು ಎಂಬುದು ದೂರು ದಾಖಲಿಸಲು ಆಧಾರವಾಗುವುದಿಲ್ಲ.
ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಕೋರ್ಟ್‌ಗೆ ಎಳೆದು ತರಲಾಗುವುದಿಲ್ಲ. ಮೇಲಾಗಿ ಸಂತ್ರಸ್ತೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಿಗಳ ಪೂರಕ ಸಾಕ್ಷ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 354 (1) ಅರ್ಜಿದಾರರ ಮೇಲೆ ಮಾಡಲಾದ ಲೈಂಗಿಕ ಶೋಷಣೆ ಆರೋಪಕ್ಕೆ ಅನ್ವಯಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರ ವಿರುದ್ಧದ ದೂರು ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣ ವಿವರ; ದೂರು ದಾರೆಯು 2018ರ ಮೇ 16ರಂದು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ತಾಯಿ ಬಸವನಗುಡಿ ಅಂಚೆ ಕಚೇರಿಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರು. ಅವರು ಅನಾರೋಗ್ಯಕ್ಕೆ ಗುರಿಯಾದಾಗ ನಾನು ಅಂಚೆ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ರಾಧಾಕೃಷ್ಣ ಅವರು ಕಳೆದ ಹತ್ತು ವರ್ಷಗಳಿಂದ ಪೋಸ್ಟ್ ಮಾಸ್ಟರ್ ಆಗಿದ್ದರು.
ಬಳಿಕ ಹನುಮಂತಯ್ಯ ಪೋಸ್ಟ್ ಮಾಸ್ಟರ್ ಆದರು, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ನನಗೆ ಹನುಮಂತಯ್ಯ ಅವಮಾನಿಸುತ್ತಿದ್ದರು. ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ನನಗೆ ಬೆದರಿಕೆ ಹಾಕುತ್ತಿದ್ದರು ಎಂದು ದೂರಿದ್ದರು.
ಒಂದು ದಿನ ರಾಧಾಮಕೃಷ್ಣ ಅವರು ನನ್ನನ್ನು ಕಾರಿನಲ್ಲಿ 8ನೇ ಮೈಲಿಯ ಬಳಿಯ ಉದ್ಯಾನಕ್ಕೆ ಕರೆದೊಯ್ದು, ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದರು. ಆ ಸಂದರ್ಭದಲ್ಲಿ ಒಬ್ಬರು ಬಂದು ರಾಧಕೃಷ್ಣ ಅವರನ್ನು ಹಿಡಿದರು. ಅಲ್ಲಿಂದ ನಾನು ಹೊರಟು ಬಂದೆ ಎಂದು ದೂರುದಾರೆ ದೂರಿನಲ್ಲಿ ಆರೋಪಿಸಿದ್ದರು.
ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು, ರಾಧಾಕೃಷ್ಣ ಮತ್ತು ಹನುಮಂತಯ್ಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದರು. ಪ್ರಕರಣವು 37ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಹಾಗಾಗಿ, ಅವರು ದೂರಿನ ರದ್ದತಿಗೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications