Karnataka Rain: ತುಂಬಲಿಲ್ಲ ಜಲಾಶಯಗಳು, ಎಚ್ಚರಿಕೆ ನೀಡಿದ ತಜ್ಞರು!
ಕರ್ನಾಟಕದಲ್ಲಿ ಜುಲೈ ತಿಂಗಳು ವರವಾಗಿತ್ತು, ಮಳೆಯೇ ಇಲ್ಲದೆ ಬಾಡಿ ಹೋಗಿದ್ದ ರಾಜ್ಯ ಹೊಸ ಕಳೆ ತುಂಬಿಕೊಂಡಿತ್ತು. ಜುಲೈ ತಿಂಗಳಲ್ಲಿ ಸುರಿದ ಮಳೆ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳಿಗೂ ಭಾರಿ ಪ್ರಮಾಣದ ನೀರು ಹೊತ್ತು ತಂದಿತ್ತು. ಆದರೆ ದಿಢೀರ್ ಮಳೆಯ ಪ್ರಮಾಣ ಕುಸಿದಿದ್ದು ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರು ಕೂಡ ಕಡಿಮೆ ಆಗಿಬಿಟ್ಟಿದೆ. ಹೀಗಾಗಿ ತಜ್ಞರು ಎಚ್ಚರಿಕೆ ಸಂದೇಶ ನೀಡಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.
ಅಂದಹಾಗೆ ರಾಜ್ಯದಲ್ಲಿ ಮಳೆ ಪ್ರಮಾಣ ಕುಸಿದ ನಂತರ ಮತ್ತೆ ನೀರಿನ ಸಮಸ್ಯೆ ಆತಂಕವು ಶುರುವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರದ ಅಂಕಿ ಅಂಶ ತಿಳಿಸುವ ಪ್ರಕಾರ ರಾಜ್ಯದ ಡ್ಯಾಂಗಳು ಇನ್ನೂ ತುಂಬಿಲ್ಲ. ರಾಜ್ಯದ ಡ್ಯಾಂಗಳಲ್ಲಿ ಕೇವಲ ಶೇ. 67ರಷ್ಟು ನೀರು ತುಂಬಿದೆ. ಜೂನ್ ಆರಂಭಕ್ಕೆ ಹೋಲಿಕೆ ಮಾಡಿದರೆ ಇದೀಗ ಪರಿಸ್ಥಿತಿ ಒಂದಷ್ಟು ಸುಧಾರಿಸಿದ್ದರೂ ಜಲಾಶಯಗಳ ಒಳಹರಿವು ಭಾರಿ ಪ್ರಮಾಣದಲ್ಲಿ ಕುಗ್ಗಿಬಿಟ್ಟಿದೆ. ಹೀಗಾಗಿ ನೀರನ್ನ ವಿವೇಚನೆಯಿಂದ ಬಳಸಲು ಅಧಿಕಾರಿಗಳು ಮತ್ತು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅದರಲ್ಲೂ ಕಾವೇರಿ ಕೊಳ್ಳದಲ್ಲಿ ನೀರಿನ ಪ್ರಮಾಣ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಭಾರಿ ಪ್ರಮಾಣದಲ್ಲಿ ಕುಸಿದುಬಿಟ್ಟಿದೆ.

ಕರ್ನಾಟಕದಲ್ಲಿ ಮಳೆ ಕಥೆ ಏನಾಗುತ್ತೆ?
ಈ ಬಾರಿ ಮುಂಗಾರು ಮಾರುತಗಳು ಬರುವುದೇ ತಡವಾಗಿತ್ತು. ಹೀಗಾಗಿ ಮುಂಗಾರು ಮಳೆ ಕೂಡ ನೀರಿನ ಕೊರತೆಗೆ ಕಾರಣವಾಗಿದೆ. ಜಲಾನಯನ ಪ್ರದೇಶಗಳಲ್ಲಿ ಸೂಕ್ತ ಮಳೆಯಿಲ್ಲದೆ ನೈಋತ್ಯ ಮಾನ್ಸೂನ್ ದುರ್ಬಲವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಇದೇ ಕಾರಣಕ್ಕೆ ಇರುವ ನೀರನ್ನು ಸೂಕ್ತವಾಗಿ ಬಳಕೆ ಮಾಡಲು ಸೂಚಿಸಲಾಗಿದೆ. ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದವಾರ 35ರಿಂದ 40 ಟಿಎಂಸಿ ಇದ್ದ ಒಳಹರಿವಿನ ಪ್ರಮಾಣ 17 ಟಿಎಂಸಿಗೆ ಕುಸಿತವನ್ನ ಕಂಡಿದೆ. ಹೀಗಾಗಿ ಈಗ ಇರುವ ನೀರನ್ನೇ ಸದ್ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ.
ಆಲಮಟ್ಟಿ ಜಲಾಶಯಕ್ಕೆ ಭಾರಿ ನೀರು
ಇತ್ತ ದಕ್ಷಿಣ ಕರ್ನಾಟಕದಲ್ಲಿ ನೀರಿನ ಪ್ರಮಾಣ ಭಾರಿ ಕುಗ್ಗಿದ್ದರೆ ಅತ್ತ ಉತ್ತರ ಕರ್ನಾಟಕದ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿಗೆ ಒಳಹರಿವು ನಿರಂತರವಾಗಿದೆ. ಆದರೆ 10 ದಿನಗಳಲ್ಲಿ ಮೊದಲ ಬಾರಿಗೆ ಒಂದು ಲಕ್ಷದ ಒಳಗೆ ಒಳಹರಿವು ದಾಖಲಾಗಿದೆ. ಜಲಾಶಯಕ್ಕೆ 96 ಸಾವಿರ ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 519.02 ಮೀಟರ್ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಜಲಾಶಯದ ಹೊರ ಹರಿವು 62 ಸಾವಿರ ಕ್ಯೂಸೆಕ್ ಆಗಿದೆ. 123 ಟಿಎಂಸಿ ಸಂಗ್ರಹದ ಸಾಮರ್ಥ್ಯ ಇರುವ ಡ್ಯಾಂನ ಇದೀಗ 113 ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ಜಲಾಶಯದ ಪರಿಸ್ಥಿತಿ ಹೇಗಿದೆ?
ರಾಜ್ಯದ ಬೃಹತ್ ಡ್ಯಾಂಗಳ ಪೈಕಿ ತುಂಗಭದ್ರ ಜಲಾಶಯ ಕೂಡ ಒಂದಾಗಿದೆ. ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಡ್ಯಾಂಗೆ 20,550 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ 1626.99 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಪ್ರಮಾಣ 1633 ಅಡಿ ಆಗಿದೆ. ಡ್ಯಾಂನ ಹರಿವು 2253 ಕ್ಯೂಸೆಕ್ ಆಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105 ಟಿಎಂಸಿ ಆಗಿದ್ದರೆ, ಡ್ಯಾಂನಲ್ಲಿ ಈಗ 83 ಟಿಎಂಸಿ ನೀರು ಸಂಗ್ರಹ ಇದೆ. ಹೀಗಾಗಿ ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಚಿಂತೆ ಶುರುವಾಗಿದೆ.

ಮಲೆನಾಡು ಭಾಗದಲ್ಲೂ ಕುಗ್ಗಿದ ಮಳೆ
ಕಳೆದ ತಿಂಗಳು ಪೂರ್ತಿ ಭಾರಿ ಮಳೆ ಹಿನ್ನೆಲೆ ಮಲೆನಾಡು ಅಕ್ಷರಶಃ ನಲುಗಿ ಹೋಗಿತ್ತು. ಆದರೆ ಈಗ ಮಳೆ ಪ್ರಮಾಣ ಕುಗ್ಗಿದ್ದು, ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕಿನ ಭದ್ರಾ ಜಲಾಶಯದಲ್ಲೂ ಒಳಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ 5756 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯದ ಮಟ್ಟ 162.80 ಅಡಿ ಆಗಿದ್ದು, ಗರಿಷ್ಠ ಮಟ್ಟ 186 ಅಡಿ ಆಗಿದೆ. ಹೊರ ಹರಿವು 189 ಕ್ಯೂಸೆಕ್ ಆಗಿದ್ದರೆ, 71 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇದೀಗ ಕೇವಲ 41 ಟಿಎಂಸಿ ನೀರು ಇದೆ. ಹೀಗಾಗಿ ಇನ್ನೂ 30 ಟಿಎಂಸಿ ನೀರು ಅಗತ್ಯವಾಗಿದೆ.
ಕೆಆರ್‌ಎಸ್ ಡ್ಯಾಂನಲ್ಲಿ ಎಷ್ಟು ನೀರು?
ರಾಜ್ಯದ ಇತರ ಜಲಾಶಗಳಲ್ಲಿ ಹೇಗೆ ನೀರಿನ ಪ್ರಮಾಣ ಕುಗ್ಗಿದೆಯೋ ಅದೇ ರೀತಿ ಕಾವೇರಿ ಕೊಳ್ಳದಲ್ಲು ನೀರಿನ ಒಳಹರಿವು ಕಡಿಮೆ ಆಗಿದೆ. ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಡ್ಯಾಂಗೆ ಒಳಹರಿವು 4,117 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಳಹರಿವಿನ ಪ್ರಮಾಣ 35,888 ಕ್ಯೂಸೆಕ್ ಆಗಿತ್ತು. ಜಲಾಶಯದ ನೀರಿನ ಮಟ್ಟ 113.48 ಅಡಿಯಷ್ಟಿದೆ. ಕೆಆರ್‌ಎಸ್ ಡ್ಯಾಂಗೆ 49 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿದೆ. ಆದರೆ ಇಲ್ಲಿಯ ತನಕ 35 ಟಿಎಂಸಿ ನೀರು ಸಂಗ್ರಹವಾಗಿದೆ. 3,193 ಕ್ಯೂಸೆಕ್ ಹೊರ ಹರಿವು ದಾಖಲಾಗಿದೆ.
ತಮಿಳುನಾಡು ಜೊತೆ ನೀರಿಗಾಗಿ ಫೈಟ್?
ಈಗ ಕಾವೇರಿ ಕೊಳ್ಳದಲ್ಲಿ ನೀರಿನ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ತಮಿಳುನಾಡು ಜೊತೆಗೆ ಮತ್ತೆ ನೀರಿಗಾಗಿ ಕಿರಿಕ್ ಶುರುವಾಗುತ್ತಾ? ಎಂಬ ಭಯವು ಕೂಡ ಆವರಿಸಿದೆ. ಏಕೆಂದರೆ ಈ ಬಾರಿ ಮುಂಗಾರು ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕರ್ನಾಟಕದಿಂದ ಬಿಡಬೇಕಾದ ನೀರಿನ ಪ್ರಮಾಣ ಕೂಡ ಕಡಿಮೆ ಆಗಿದೆ. ಸದ್ಯ ಸಮಸ್ಯೆ ಎದುರಾಗದಿದ್ದರೂ ಮುಂದಿನ ದಿನಗಳಲ್ಲಿ ನೀರಿಗಾಗಿ ವಾರ್ ಶುರುವಾದರೂ ಅಚ್ಚರಿ ಇಲ್ಲ. ಹೀಗಾಗಿ ರೈತರು ಮಳೆಗಾಗಿ ಮತ್ತೆ ಮೊರೆ ಇಡುವಂತಾಗಿದೆ. ಜುಲೈ ತಿಂಗಳಲ್ಲಿ ಸುರಿದಂತೆ ಮತ್ತೆ ಮಳೆಯ ಆಗಮನವಾದರೆ ಪರಿಸ್ಥಿತಿ ಸಂಪೂರ್ಣ ಸುಧಾರಿಸುವುದು ಗ್ಯಾರಂಟಿ.

ಒಟ್ನಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ಮತ್ತೆ ಬರದ ಆತಂಕ ಕೂಡ ಶುರುವಾಗಿದೆ. ಕಳೆದ ತಿಂಗಳು ಸುರಿದ ಮಳೆ ನೋಡಿ ರೈತರ ಮೊಗದಲ್ಲಿ ಮಂದಹಾಸವೂ ಮೂಡಿತ್ತು. ಆದರೆ ಆಗಸ್ಟ್ ತಿಂಗಳು ಆರಂಭವಾಗಿ ಮೂರು ದಿನ ಕಳೆದರೂ ಮಳೆ ಸುಳಿವು ಇಲ್ಲ. ಹೀಗಾಗಿ ಮತ್ತೆ ಮಳೆ ಕೈಕೊಟ್ಟಿದೆಯಾ? ಎಂಬ ಭಯ ಶುರುವಾಗಿದೆ. ಈ ಕಾರಣಕ್ಕೆ ಇರುವ ನೀರನ್ನೇ ಸದ್ಬಳಕೆ ಮಾಡಿ ಅಂತಾ ತಜ್ಞರು ಸಲಹೆ ನೀಡಿದ್ದಾರೆ. ಇದೇ ಸಂದರ್ಭಕ್ಕೆ ರೈತರು ಕೂಡ ತಮ್ಮ ಬೆಳೆಗೆ ನೀರು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications