Karnataka Rain: ಜೀವನದಿ ಕಾವೇರಿ ಹೋರಾಟಕ್ಕೆ ನ್ಯಾಯವಾದಿಗಳ ಸಾಥ್!
ಮಂಡ್ಯ: ರಾಜ್ಯದಲ್ಲಿ ಮಳೆ ಕೈಕೊಟ್ಟು ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಹೀಗಾಗಿಯೇ ಹನಿ ನೀರಿಗು ತಾತ್ವರ ಎದುರಾಗಿದೆ. ಇಷ್ಟೆಲ್ಲಾ ಸಂಕಷ್ಟ ಇದ್ದರೂ ನೆರೆಯ ತಮಿಳುನಾಡು ಕಿರಿಕ್ ಮುಂದುವರಿಸಿ, ಸುಖಾಸುಮ್ಮನೆ ಭಾರಿ ಪ್ರಮಾಣದಲ್ಲಿ ನೀರು ಕೇಳುತ್ತಿದೆ. ಇದರಿಂದ ರೊಚ್ಚಿಗೆದ್ದು ರಾಜ್ಯದ ರೈತರು ಮತ್ತು ಹೋರಾಟಗಾರರು ಭಾರಿ ಪ್ರತಿಭಟನೆ ನಡೆಸ್ತಿದ್ದಾರೆ. ಹೀಗೆ ರೈತರ ಹೋರಾಟಕ್ಕೆ ನ್ಯಾಯವಾದಿಗಳು ಕೂಡ ಸಾಥ್ ನೀಡಿದ್ದಾರೆ.
ಅಷ್ಟಕ್ಕೂ ಕಳೆದ ವರ್ಷವೇ ತಮಿಳುನಾಡು ಮೂಲಕ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿದೆ. ಮುಂಗಾರು ಅಬ್ಬರದ ಕಾರಣ ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು. 62 ವರ್ಷ ಬಳಿಕ ಇಷ್ಟು ಪ್ರಮಾಣದ ನೀರು ಹೊರಬಿಟ್ಟರೂ ತಮಿಳುನಾಡು ತಣ್ಣಗಾಗಿಲ್ಲ. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೆಲ್ಲ ನೀರನ್ನು ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರು ಬೇಕು ಅಂತಾ ತಮಿಳುನಾಡು ಕಿರಿಕ್ ಶುರುಮಾಡುತ್ತಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಭಾರಿ ಪ್ರತಿಭಟನೆ ಆರಂಭವಾಗಿದೆ.

ಸಕ್ಕರೆ ನಾಡಲ್ಲಿ ಕಾವೇರಿ ಹೋರಾಟ
ಇನ್ನು, ಮಂಡ್ಯದ ಶ್ರೀರಂಗಪಟ್ಟಣ ರೈತರ ಕಾವೇರಿ ಹೋರಾಟಕ್ಕೆ ವಕೀಲರ ಸಂಘವು ಸಾಥ್ ನೀಡಿ ಪ್ರತಿಭಟನೆಗೆ ಇಳಿದಿದೆ. ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಚಂದ್ರೇಗೌಡ ಹಾಗೂ ಖಜಾಂಚಿ ವಿನಯ್ ಹಾಗೂ ಸದಸ್ಯರ ನೇತೃತ್ವದಲ್ಲಿ ಕಾವೇರಿ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಲಾಯಿತು. ಶ್ರೀರಂಗಪಟ್ಟಣದಲ್ಲಿ ವಕೀಲರು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಹಾಗೇ ಇಂದು ಪ್ರತಿಭಟನೆಯ ಹಿನ್ನೆಲೆ ಕಲಾಪ ಬಹಿಷ್ಕರಿಸಿ ನ್ಯಾಯಾಲಯದಿಂದ ತಾಲೂಕು ಕಚೇರಿ ತನಕ ವಕೀಲರು ಮೆರವಣಿಗೆ ನಡೆಸಿದರು. ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆ ತಕ್ಷಣ ತಮಿಳುನಾಡಿಗೆ ನೀರು ನಿಲ್ಲಿಸುವಂತೆ ವಕೀಲರು ಆಗ್ರಹಿಸಿದ್ದಾರೆ. ಜೊತೆಗೆ ಪ್ರತಿಭಟನೆ ನಂತರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ವಕೀಲರು ಈ ಕುರಿತು ಮನವಿ ಸಲ್ಲಿಕೆ ಮಾಡಿದರು.
ಮೇಕೆದಾಟು ಯೋಜನೆ ಆರಂಭವಾಗುತ್ತಾ?
ಒಂದು ಕಡೆ ತಮಿಳುನಾಡು ನೀರಿಗಾಗಿ ಕಿರಿಕ್ ಶುರುಮಾಡಿದ ಸಂದರ್ಭದಲ್ಲೇ ನೀರು ಬೇಕು ಅಂತಾ ರಾಜ್ಯದಲ್ಲು ಹೋರಾಟ ಶುರುವಾಗಿದೆ. ಹೀಗೆ ತಮಿಳುನಾಡು ಕಿರಿಕ್‌ಗೆ ಅಂತ್ಯವನ್ನ ಕಾಣಿಸಲು ಮೇಕೆದಾಟು ಯೋಜನೆ ಒಂದೇ ಮಾರ್ಗ. ಹೀಗೆ ಮತ್ತೆ ಮೇಕೆದಾಟು ಯೋಜನೆ ವಿಚಾರ ಚರ್ಚೆಗೆ ಬಂದಿದೆ. ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಮಳೆಗಾಲದಲ್ಲಿ ಸುಮ್ಮನೆ ವ್ಯರ್ಥವಾಗುವ ನೀರನ್ನು, ಕರ್ನಾಟಕ & ತಮಿಳುನಾಡು ಗಡಿ ಭಾಗದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಸಾಧ್ಯ.

ಮೇಕೆದಾಟು ಡ್ಯಾಂನಲ್ಲಿ ನೀರು ಸಂಗ್ರಹವಾದರೆ ಸುಮಾರು 65ರಿಂದ 66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿನಿಂದ ಸಮುದ್ರದ ಪಾಲಾದಂತೆ ತಡೆಯಬಹುದು. ತಮಿಳುನಾಡು ಕೂಡ ಉಪಯೋಗ ಪಡೆಯಲಿದೆ. ಹೀಗಾಗಿ ಮೇಕೆದಾಟು ಬಗ್ಗೆ ಚರ್ಚೆ ಶುರುವಾಗಿದೆ. ಬೆಂಗಳೂರು ಸುತ್ತಮುತ್ತ ಕುಡಿಯುವ ನೀರು ಒದಗಿಸುವ ಜೊತೆಗೆ, ಕರ್ನಾಟಕಕ್ಕೂ ಅಗತ್ಯ ಇರುವ ವಿದ್ಯುತ್ ಉತ್ಪಾದನೆಗೆ ಸಹಕಾರಿ. ಇಷ್ಟೆಲ್ಲಾ ಇದ್ದರೂ ಅತ್ತ ನಮಗೂ ಡ್ಯಾಂ ಕಟ್ಟಲು ಬಿಡದೆ ಇತ್ತ ಬಿಟ್ಟ ನೀರನ್ನು ಉಳಿಸಿಕೊಳ್ಳದೆ ನೆರೆ ರಾಜ್ಯ ತಮಿಳುನಾಡು ಕಿರಿಕ್ ಮಾಡ್ತಿದೆ. ರಾಮನಗರ ಸುತ್ತಲು ಅಂತರ್ಜಲ ಬತ್ತಿ ಹೋಗುತ್ತಿದ್ದು, ಮೇಕೆದಾಟು ಡ್ಯಾಂ ನಿರ್ಮಾಣವಾದ್ರೆ ಅಂತರ್ಜಲ ಏರಿಕೆ ಆಗುವ ನಿರೀಕ್ಷೆ ಇದೆ.
ಒಟ್ನಲ್ಲಿ ರಾಜ್ಯದಲ್ಲಿ ಕಾವೇರಿ ಹೋರಾಟದ ಜೊತೆಗೆ ಮೇಕೆದಾಟು ಯೋಜನೆ ಶುರುಮಾಡಿ ಎಂಬ ಆಗ್ರಹವು ಕೇಳಿಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಪ್ಲ್ಯಾನ್ ಮಾಡಿ ಇದೀಗ ಕಾವೇರಿ ನೀರಿಗೆ ಕಿರಿಕ್ ತೆಗೆದಿರುವ ತಮಿಳುನಾಡು ಸರ್ಕಾರಕ್ಕೆ ಪಾಠ ಕಲಿಸುವ ಯೋಜನೆ ಹಾಕಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ವರ್ಷದಲ್ಲಿ ಡ್ಯಾಂ ಕೂಡ ಪೂರ್ಣವಾಗಿ ನೀರಿನ ಸಮಸ್ಯೆ ಬಗೆಹರಿಯಲಿದೆ.












Click it and Unblock the Notifications