ಡಿಪ್ಲೋಮಾ ಓದಿದ್ದರೂ ಕುರಿ ಕಾಯುವ ಕಾಯಕ; ಯುವಕನ ಸಂಪಾದನೆ ಎಷ್ಟು ಲಕ್ಷ ಗೊತ್ತಾ?
'ಡೋಂಟ್ ಜಡ್ಜ್ ಬುಕ್ ಬೈ ಕವರ್' ಅನ್ನೋ ಒಂದು ಮಾತಿದೆ. ಪುಸ್ತಕವನ್ನು ಮುಖಪುಟ ನೋಡಿ ಅಳೆಯಬಾರದು ಎನ್ನುವುದು. ಮೇಲೆ ಅಂದವಾಗಿ ಕಾಣುವ ಪುಸ್ತಕದ ಒಳಗೆ ಯಾವುದೇ ಮಾಹಿತಿ ಇಲ್ಲದೆಯೂ ಇರಬಹುದು, ಮುಖಪುಟ ಹಳೆಯದಾಗಿದ್ದರೂ, ಒಳಗಿರುವ ಮಾಹಿತಿ ಅಮೂಲ್ಯವಾಗಿರಬಹುದು ಎಂದರ್ಥ. ಇಲ್ಲೊಬ್ಬ ಯುವಕನ ಕಥೆಯೂ ಅದೇ, ಓದಿರುವುದು ಡಿಪ್ಲೋಮಾ ಸಿವಿಲ್, ಮಾಡುತ್ತಿರುವುದು ಕುರಿ ಮೇಯಿಸೋ ಕೆಲಸ, ಸಂಪಾದನೆ ಮಾತ್ರ ಲಕ್ಷ ಲಕ್ಷ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೇವರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಯುವಕನ ಆದಾಯದ ಬಗ್ಗೆ ಕೇಳಿದ್ರೆ ಶಾಕ್ ಆಗೋದು ಖಂಡಿತ. ಕಿರಣ್ ಯಾದವ್ ಎನ್ನುವ ಯುವಕ 1000 ಕುರಿಗಳ ಮಾಲೀಕ, ಊರೂರು ತಿರುಗಿ ಕುರಿ ಮೇಯಿಸುವುದು ಆತನ ಕಾಯಕ. ಯಾರದೋ ಬಲವಂತಕ್ಕೆ ಈ ಕೆಲಸಕ್ಕೆ ಬಂದಿದ್ದಲ್ಲ, ಕುಲ ಕಸುಬನ್ನು ಇಷ್ಟದಿಂದಲೇ ಮಾಡುತ್ತಿರುವ ಯುವಕ ಉತ್ತಮ ಆದಾಯ ಕಂಡುಕೊಂಡಿದ್ದಾರೆ.

ರಸ್ತೆ ಬದಿಯಲ್ಲಿ ಕುರಿಗಳೊಂದಿಗೆ ಹೋಗುವಾಗ ಯೂಟ್ಯೂಬರ್ ಒಬ್ಬರು ಕುತೂಹಲದಿಂದ ಮಾತನಾಡಿಸಿದ್ದು ಆ ವಿಡಿಯೋ ಈಗ ವೈರಲ್ ಆಗಿದೆ. ಒಂದು ಸಾವಿರ ಕುರಿಗಳನ್ನು ತೆಂಗು, ಅಡಿಕೆ ತೋಟದಲ್ಲಿ ಮಂದೆ ಹಾಕಿದರೆ, ಪ್ರತಿ ದಿನ 1500 ರಿಂದ 2000 ಸಾವಿರ ರೂಪಾಯಿ ಸಿಗುತ್ತದೆ. ಅದು ಪ್ರತಿದಿನ ಖರ್ಚಿಗೆ ಆಗುತ್ತದೆ ಎನ್ನುತ್ತಾರೆ. (ಮಂದೆ ಹಾಕುವುದು ಎಂದರೆ ತೋಟ, ಹೊಲಗಳಲ್ಲಿ ರಾತ್ರಿ ಹೊತ್ತು ಕುರಿಗಳನ್ನು ತಂಗುವಂತೆ ಮಾಡುವುದು. ಇದರಿಂದ ಹೊಲಕ್ಕೆ, ತೋಟಕ್ಕೆ ಗುಣಮಟ್ಟದ ಗೊಬ್ಬರ ಸಿಗುತ್ತದೆ)
ಕುರಿ ಮೇಯಿಸೋ "ಕೋಟಿ ಕುಳ". pic.twitter.com/9bLIeclXRq
— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) August 5, 2024
ಕೋಟಿ ಒಡೆಯ!
ಸುಮಾರು 1000 ಕುರಿಗಳನ್ನು ಹೊಂದಿರುವ ಕಿರಣ್ ಯಾದವ್ ಅವರ ಕುರಿಗಳ ಮೌಲ್ಯವೇ 1 ಕೋಟಿ ದಾಟುತ್ತದೆ. ಕುರಿ ಮರಿಗಳನ್ನು ಮಾರಾಟ ಮಾಡುವ ಮೂಲಕವೇ ವರ್ಷಕ್ಕೆ 20 ರಿಂದ 25 ಲಕ್ಷದವರೆಗೆ ಸಂಪಾದನೆ ಮಾಡುತ್ತೇನೆ ಎನ್ನುತ್ತಾರೆ. ಡಿಪ್ಲೋಮಾ ಓದಿದ್ದೆ ನನ್ನ ತಂದೆ ತೀರಿಕೊಂಡ ಬಳಿಕ ನಾನೇ ಕುರಿ ಮೇಯಿಸುವ ಜವಾಬ್ದಾರಿ ವಹಿಸಿಕೊಂಡೆ, ಯಾವ ಕೆಲಸವಾದರೇನು ಹಣ ಗಳಿಸುವುದು ಮುಖ್ಯ, ಡಿಪ್ಲೋಮಾ ಓದಿ ಕೆಲಸಕ್ಕೆ ಹೋದರೆ 20-30 ಸಾವಿರ ಸಂಬಳ ಸಿಗುತ್ತದೆ, ನಾನು ಇಲ್ಲಿ ಲಕ್ಷಗಳಲ್ಲಿ ದುಡಿಯುತ್ತೇನೆ ಎನ್ನುತ್ತಾರೆ.
ಊರಿನಲ್ಲಿ ರಾಯಲ್ ಎನ್‌ಫೀಲ್ಡ್ ಇದೆ, ಎನ್‌ಎಸ್ ಬೈಕ್ ಇದೆ ಸರ್. ಊರಿಗೆ ಹೋದಾಗ ಶೋಕಿ ಮಾಡ್ತೀವಿ. ಬಳಿಕ ಕುರಿ ಮೇಯಿಸುವ ಕೆಲಸ ಮಾಡುತ್ತೇನೆ. ಯಾರು ಬೇಕಾದರೂ ಸ್ವಂತವಾಗಿ ಕುರಿ ಸಾಕಾಣಿಕೆ ಮಾಡಿ ಲಾಭ ಮಾಡಬಹುದು, ಮುಖ್ಯವಾಗಿ ಅವರಿಗೆ ಆಸಕ್ತಿ ಇರಬೇಕು ಎನ್ನುತ್ತಾರೆ. 10-15 ಮಂದಿ ಒಟ್ಟಿಗೆ ಬರುತ್ತೇವೆ, ಒಟ್ಟಿಗೆ ಇರುತ್ತೇವೆ ಎಂದರು.
ಆತ ಲಕ್ಷ ಲಕ್ಷ ದುಡಿಯಲು ಪಡುವ ಕಷ್ಟವೂ ಅಷ್ಟೇ ಇರುತ್ತದೆ ಎನ್ನುವುದನ್ನು ಕೂಡ ಮರೆಯಬಾರದು. ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ಮಳೆ ಕಡಿಮೆಯಾದಾಗ ಇಲ್ಲಿನ ಕುರಿ ಮೇಯಿಸುವವರು ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಮಂಡ್ಯ, ರಾಮನಗರ, ಮೈಸೂರು, ಹಾಸನ ಭಾಗಗಳಿಗೆ ಹೋಗುತ್ತಾರೆ. ಮಳೆಗಾಲ ಶುರುವಾದ ಬಳಿಕ ಮತ್ತೆ ತಮ್ಮೂರಿಗೆ ವಾಪಸ್ ಬರುತ್ತಾರೆ.
ಕಷ್ಟಪಟ್ಟರೆ ಮಾತ್ರ ಆದಾಯ
ಕಿರಣ್ ಯಾದವ್ ಲಕ್ಷಗಟ್ಟಲೆ ದುಡಿದರೂ ಅವರ ಕೆಲಸದಲ್ಲಿ ನಿತ್ಯವೂ ಸವಾಲಿನದ್ದೇ, ಅಷ್ಟು ಕುರಿಗಳಿಗೆ ಪ್ರತಿದಿನ ಮೇಯಿಸುವುದು, ಅವುಗಳ ಆರೋಗ್ಯ ಗಮನಿಸುವುದು ಸುಲಭವಲ್ಲ. ಮಳೆ, ಚಳಿ ಎನ್ನದೆ ಕುರಿಗಳ ಜೊತೆಗೇ ಇರಬೇಕು ರಜೆ ಎನ್ನುವುದು ಕೂಡ ಇರುವುದಿಲ್ಲ. ಕಷ್ಟಕ್ಕೆ ತಕ್ಕಂತೆ ದುಡಿಮೆ ಕೂಡ ಇರುತ್ತದೆ.












Click it and Unblock the Notifications