ಕರ್ನಾಟಕ: ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಿಕೆ
ಬೆಂಗಳೂರು, ಜುಲೈ 7: ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥ ನಾರಾಯಣ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ದಿನಾಂಕ 15-07-2020 ರಿಂದ 05-08-2020 ರವರೆಗೆ ನಿಗದಿಪಡಿಸಲಾಗಿದ್ದ ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ಪ್ರಕಟಣೆ ಹೊರಡಿಸಲಾಗಿದೆ. ಈ ಕುರಿತು ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ.
ಹಾಗೆಯೇ ಶೀಘ್ರದಲ್ಲೇ ಪದವಿ, ಸ್ನಾತಕೋತ್ತರ ಪರೀಕ್ಷೆಗಳು ಆರಂಭವಾಗಲಿವೆ. ಡಿಪ್ಲೊಮಾ ಪರೀಕ್ಷೆಯ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೊರೊನಾ ಹಾವಳಿ ಮಿತಿ ಮೀರಿದೆ.

ವಿದ್ಯಾರ್ಥಿಗಳು ಮುಂದಿನ ಪರಿಷ್ಕೃತ ಪರೀಕ್ಷೆ ವೇಳಾಪಟ್ಟಿಯನ್ನು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಥವಾ ಟೆಕ್ನಿಕಲ್ ಎಜುಕೇಷನ್ ಡಿಪಾರ್ಟ್‌ಮೆಂಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಿಳಿಯಬಹುದಾಗಿದೆ.
ರಾಜ್ಯದಲ್ಲಿ ಜುಲೈ 15 ರಿಂದ ನಡೆಯಬೇಕಿದ್ದ ಎಲ್ಲಾ ಕಾಂಬಿನೇಷನ್‌ಗಳ ಡಿಪ್ಲೊಮಾ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ಬರುವಂತೆ, ಪರಿಷ್ಕೃತ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ನೀಡಲಾಗಿದೆ.
ಕೊರೊನಾ ಸೋಂಕಿನಿಂದಾಗಿ ರಾಜ್ಯದಲ್ಲಿ ಸಾಕಷ್ಟು ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇತ್ತೀಚೆಗಷ್ಟೇ ಬಾಕಿ ಉಳಿದಿದ್ದ ಪಿಯುಸಿ ಪರೀಕ್ಷೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಿದೆ.












Click it and Unblock the Notifications