100 ಕೋಟಿ ಖರ್ಚು ಮಾಡಿದರೂ ಜನ ನಿನ್ನ ಮನೆಗೆ ಕಳಿಸಿದ್ದಾರೆ: ಸುಧಾಕರ್ ವಿರುದ್ಧ ಕಾಂಗ್ರೆಸ್ ನಾಯಕ ಕೆಂಡಾಮಂಡಲ!
2018ರಲ್ಲಿ ಜೆಡಿಎಸ್ ಕಾಂಗ್ರೆಸ್ ಸರ್ಕಾರ ಬೀಳಲು ಪರೋಕ್ಷವಾಗಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಮಾಜಿ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕೆಂಡಾಮಂಡಲವಾಗಿದ್ದಾರೆ. ನಿಮಗೆ ಇಂತಹ ಬುದ್ದಿ ಇರುವುದಕ್ಕೇ 100 ಕೋಟಿ ಖರ್ಚು ಮಾಡಿದರೂ ಚಿಕ್ಕಬಳ್ಳಾಪುರದ ಜನ ನಿಮ್ಮನ್ನು ಮನೆಗೆ ಕಳುಹಿಸಿರುವುದು ಎಂದು ಕಿಡಿ ಕಾರಿದ್ದಾರೆ.
ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಕಾರಣ ಎಂದು ಸುಧಾಕರ್ ಆರೋಪ ಮಾಡಿದ್ದಾರೆ. ಅಲ್ಲದೆ ತಾವು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲು ಕೂಡ ಸಿದ್ದರಾಮಯ್ಯ ಕಾರಣ ಎಂದು ಸುಧಾಕರ್ ಆರೋಪಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ದಿನೇಶ್ ಗುಂಡೂ ರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮಾಡಿದ್ದ ಸುಧಾಕರ್, "2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರ ಬಳಿಗೆ ಹೋದಾಗಲೆಲ್ಲ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದರು ಮತ್ತು ಸರ್ಕಾರದಲ್ಲಿ ತನಗೆ ಯಾವುದೇ ಮಾತಿಲ್ಲ ಮತ್ತು ತಮ್ಮ ಕ್ಷೇತ್ರ/ಜಿಲ್ಲೆಯ ಕೆಲಸಗಳು ಸ್ಥಗಿತಗೊಂಡಿವೆ ಎಂದಿದ್ದರು.
ಅಲ್ಲದೆ, ಸಿದ್ದರಾಮಯ್ಯ ಅವರು 2019 ರ ಲೋಕಸಭೆ ಚುನಾವಣೆಯವರೆಗೆ ಕಾಯಿರಿ ಎಂದು ಶಾಸಕರಿಗೆ ಭರವಸೆ ನೀಡುತ್ತಿದ್ದರು ಮತ್ತು ಲೋಕಸಭೆ ಚುನಾವಣೆಯ ನಂತರ ಒಂದು ದಿನವೂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಮುಂದುವರಿಸಲು ಅವರು ಬಿಡುವುದಿಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾಗಿ ಮಾಹಿತಿ ನೀಡಿದ್ದರು.

ಇದೇ ಕಾರಣಕ್ಕೆ ನಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ರಕ್ಷಿಸಲು ನಮ್ಮಲ್ಲಿ ಕೆಲವರು ಕಾಂಗ್ರೆಸ್ ಪಕ್ಷವನ್ನು ತೊರೆದು, ಉಪಚುನಾವಣೆಯಲ್ಲಿ ಜನರ ಬಳಿಗೆ ಹೋಗಬೇಕಾಯಿತು, ಕಾಂಗ್ರೆಸ್ ಶಾಸಕರ ಈ ನಡೆಯಲ್ಲಿ ಸೂಚ್ಯವಾಗಿ ಅಥವಾ ಸ್ಪಷ್ಟವಾಗಿ ತಮ್ಮ ಪಾತ್ರವಿಲ್ಲ ಎಂಬ ಸತ್ಯವನ್ನು ಸಿದ್ದರಾಮಯ್ಯ ಅವರು ನಿರಾಕರಿಸಬಹುದೇ? ಎಂದು ಸುಧಾಕರ್ ಪ್ರಶ್ನೆ ಮಾಡಿದ್ದರು.
Stop this duplicity @mla_sudhakar.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 17, 2023
You didn’t quit to protect your karyakartas or supporters, you quit to serve your own ambition.
Neither do you have any ideology nor any principles.
Only power matters.
Despite spending more than ₹100cr, Chikkaballapur has sent you packing. https://t.co/eCssFefClo
ನಿಮ್ಮ ಲಾಭಕ್ಕಾಗಿ ಬಿಜೆಪಿಗೆ ಹೋಗಿದ್ದು
ಸುಧಾಕರ್ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್, " ನಿಮ್ಮ ದ್ವಂದ್ವ ಹೇಳಿಕೆಗಳನ್ನು ಮೊದಲು ನಿಲ್ಲಿಸಿ, ನಿಮ್ಮ ಕಾರ್ಯಕರ್ತರು ಅಥವಾ ಬೆಂಬಲಿಗರನ್ನು ರಕ್ಷಿಸಲು ನೀವು ಕಾಂಗ್ರೆಸ್ ಬಿಡಲಿಲ್ಲ, ಬದಲಾಗಿ ನಿಮ್ಮ ದುರಾಸೆಯನ್ನು ಪೂರೈಸಿಕೊಳ್ಳಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಿರಿ, ನಿಮಗೆ ಯಾವುದೇ ಸಿದ್ಧಾಂತ ಅಥವಾ ತತ್ವಗಳು ಇಲ್ಲ, ನಿಮಗೆ ಅಧಿಕಾರ ಮಾತ್ರ ಮುಖ್ಯವಾಗಿತ್ತು" ಎಂದು ಕಿಡಿ ಕಾರಿದ್ದಾರೆ.
"ಇದೇ ಕಾರಣಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ನೀವು 100 ಕೋಟಿ ರುಪಾಯಿ ಖರ್ಚು ಮಾಡಿದರೂ, ಚಿಕ್ಕಬಳ್ಳಾಪುರದ ಜನತೆ ನಿಮ್ಮನ್ನು ಮನೆಗೆ ಕಳುಹಿಸಿದ್ದಾರೆ" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications