ಮಂಡ್ಯದಲ್ಲಿ ಆನೆಗಳ ನಿರಂತರ ದಾಳಿ; ರೈತರಿಗೆ ಜೀವಭಯ: ಸರ್ಕಾರಕ್ಕೆ ಶಾಶ್ವತ ಪರಿಹಾರಕ್ಕೆ ಮನವಿ
ಮಂಡ್ಯ,ಆಗಸ್ಟ್ 03: ಮಂಡ್ಯ ಜಿಲ್ಲೆಯಲ್ಲಿ ಆನೆಗಳ ದಾಳಿ ಹೆಚ್ಚುತ್ತಿದ್ದು, ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ. ಅಲ್ಲದೆ, ಜೀವಭಯವೂ ಕಾಡುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷಗಳು ಹೆಚ್ಚುತ್ತಲಿವೆ. ಕಾಡಿನಿಂದ ನಾಡಿಗೆ ಬರುವ ಕಾಡುಪ್ರಾಣಿಗಳಿಂದ ಅನೇಕ ಸಾವು-ನೋವುಗಳು ಸಂಭವಿಸಿವೆ. ಅಲ್ಲದೆ, ರೈತರ ಬೆಳೆಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಒಂದು ಕಡೆ ಅತಿವೃಷ್ಟಿ-ಅನಾವೃಷ್ಟಿಯಂತಹ ಪ್ರಕೃತಿ ವಿಕೋಪದಿಂದ ಕಂಗೆಟ್ಟಿರುವ ರೈತರಿಗೆ ಕಾಡುಪ್ರಾಣಿಗಳಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳುವ ಸಮಸ್ಯೆ ಮತ್ತೊಂದೆಡೆಯಾಗಿದೆ.

ಇದರಿಂದ ಅವರ ಜೀವನ ಬಹಳವೇ ಕಷ್ಟಸಾಧ್ಯವಾಗಿದೆ. ಚಿರತೆಗಳ ಹಾವಳಿ ಬಳಿಕ ಈಗ ಮಂಡ್ಯ ಜಿಲ್ಲೆಯಲ್ಲಿ ಆನೆಗಳ ಹಾವಳಿ ಪ್ರಾರಂಭವಾಗಿದೆ. ಇದು ರೈತರು ಸೇರಿದಂತೆ ಸ್ಥಳೀಯ ಜನರನ್ನು ಕಂಗೆಡಿಸಿದೆ. ಮಂಡ್ಯ ಜಿಲ್ಲೆಯ ಕೆಲವು ತಾಲೂಕಿನ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ ತಾಲೂಕುಗಳಲ್ಲಿ 9 ಆನೆಗಳು ಕಳೆದ 10-12 ದಿನಗಳಿಂದ ಕಾಡಿನಿಂದ ನಾಡಿಗೆ ಬರುತ್ತಿವೆ. ದಿನದಿಂದ ದಿನಕ್ಕೆ ಇವುವಳ ಉಪಟಳ ಹೆಚ್ಚುತ್ತಿದೆ. ಮದ್ದೂರು-ಮಳವಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ನೆಲಮಾಕನಹಳ್ಳಿ ಗ್ರಾಮದಲ್ಲಿ ವಾರದ ಹಿಂದೆ ಆನೆಗಳ ಹಿಂಡು ದಾಳಿ ಮಾಡಿ ಸುಮಾರು 1 ಎಕರೆ ಕಬ್ಬಿನ ಬೆಳೆಯನ್ನು ನಾಶ ಮಾಡಿತ್ತು. ಹೀಗಾದರೆ ಆ ರೈತ ಹೇಗೆ ತಾನೆ ನೆಮ್ಮದಿಯ ಜೀವನ ಮಾಡಿದಾನು? ಕಾಡುಪ್ರಾಣಿಗಳ ಉಪಟಳದಿಂದ ತಾವು ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗಿಬಿಡಬಹುದು ಎಂಬ ಆತಂಕದಲ್ಲಿ ಯಾವೊಬ್ಬ ರೈತನೂ ಸರಿಯಾಗಿ ನಿದ್ದೆ ಮಾಡದ ಪರಿಸ್ಥಿತಿ ಇದೆ.
ಇನ್ನು ಮದ್ದೂರು ತಾಲೂಕಿನ ಬನ್ನಳ್ಳಿ, ಅಜ್ಜಳ್ಳಿ ಗ್ರಾಮಗಳ ಹೊಲಕ್ಕೆ ಈ ಆನೆಗಳ ಹಿಂಡು ನುಗ್ಗಿತ್ತು. ಮಳವಳ್ಳಿ ತಾಲೂಕಿನ ಯಲದಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಹಲಗೂರು ಸಮೀಪ ನಂದಿಪುರ ಗ್ರಾಮದಲ್ಲಿ ತೆಂಗಿನ ಮರಗಳನ್ನೇ ಕೆಡವಿ ಹಾಕಿವೆ. ಹೀಗೆ ಪ್ರತಿ ದಿನ ಒಂದಲ್ಲ ಒಂದು ಕಡೆ ಆನೆಗಳ ಹಿಂಡು, ಹಗಲು ರಾತ್ರಿ ಎನ್ನದೇ ದಾಳಿ ಮಾಡುತ್ತಿದೆ. ಬೆಳೆ ನಾಶ ಮಾಡುತ್ತಿದೆ. ಜನ ಅದನ್ನು ಓಡಿಸಲು ಪ್ರಯತ್ನ ಮಾಡಿದರೂ ಹಿಮ್ಮೆಟ್ಟುತ್ತಿಲ್ಲ. ಇನ್ನು ಅವುಗಳ ಹತ್ತಿರ ಹೋಗುವುದು ದುಸ್ಸಾಧ್ಯದ ಮಾತು. ಎಷ್ಟೇ ಪ್ರಯತ್ನ ಪಟ್ಟು ಓಡಿಸಲು ಹೋದರೂ ನದಿಗೆ ಇಳಿದು, ಜೀಡಿನ ಮರೆಯಲ್ಲಿ ನಿಂತು ಪುನಃ ಬರುತ್ತವೆ.

ಇದರಿಂದ ಈ ಭಾಗದ ಜನ ಭಯಭೀತರಾಗಿದ್ದಾರೆ. ರೈತರು ಬೆಳೆದ ಭತ್ತ, ಕಬ್ಬು ಬೆಳೆಗಳು ನಿರಂತರವಾಗಿ ನಾಶವಾಗುತ್ತಿವೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಆತಂಕಪಡುತ್ತಿದ್ದಾರೆ. ಎಲ್ಲಿ ಆನೆಗಳು ಬಂದುಬಿಡುತ್ತವೋ ಎಂಬ ಭಯದಲ್ಲಿಯೇ ಅಲ್ಲಿ ಸ್ಥಳೀಯ ಜನರು ಹೆಜ್ಜೆ ಇಡುವಂತೆ ಆಗಿದೆ. ಹಾಗಾಗಿ ತಕ್ಷಣlಜನರ ಭಯ ನಿವಾರಣೆ ಮಾಡಬೇಕು. ರೈತರ ಬೆಳೆ ರಕ್ಷಣೆ ಮಾಡಬೇಕು. ಇದುವರೆಗೆ ಆದ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಈ ಕೆಲಸ ಅರಣ್ಯ ಇಲಾಖೆಯಿಂದ ಈ ಕೂಡಲೇ ಆಗಬೇಕು ಎಂದು ಮನವಿ ಮಾಡುತ್ತೇನೆ.
ಮಂಡ್ಯ ಜಿಲ್ಲೆಯಲ್ಲಿ ಆನೆಗಳ ಹಾವಳಿ ಇದೇ ಮೊದಲಲ್ಲ. ಇತ್ತೀಚೆಗೆ ಪ್ರತಿ ವರ್ಷ ಕಾಡಾನೆಗಳ ಹಿಂಡು ಹೊಲಗಳಿಗೆ ಲಗ್ಗೆ ಇಡುತ್ತಿದೆ.ನೂರಾರು ಎಕರೆ ಬೆಳೆ ನಾಶ ಮಾಡುತ್ತಿದೆ. ಮಾತ್ರವಲ್ಲ ಜನರ ಮೇಲೆ ದಾಳಿ ಮಾಡಿದ್ದು, ಜನವಸತಿ ಪ್ರದೇಶಗಳಿಗೆ ನುಗ್ಗಿದ ಘಟನೆಗಳು ನಡೆದಿದ್ದವು. ಹಾಗಾಗಿ ಆನೆ-ಮಾನವನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅದಕ್ಕೆ ಹಲವಾರು ಮಾರ್ಗಗಳೂ ಇವೆ. ಒಟ್ಟಿನಲ್ಲಿ ಈ ಸಮಸ್ಯೆಗೆ ಮುಕ್ತಿ ಹಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ಏನು ಮಾಡಬಹುದು?
- ಆನೆಗಳು ನಾಡಿಗೆ ಏಕೆ ಬರುತ್ತಿವೆ ಎಂಬ ಬಗ್ಗೆ ತಜ್ಞರಿಂದ ವಿಸ್ತೃತ ಅಧ್ಯಯನ ನಡೆಸಬೇಕು.
- ಅವುಗಳ ವರ್ತನೆ ಹಾಗೂ ಚಲನವಲನಗಳ ಮೇಲೆ ನಿಗಾ ಇಡುವ ಕಾರ್ಯವು ಅರಣ್ಯ ಇಲಾಖೆಯಿಂದ ಆಗಬೇಕು.
- ಆನೆ ಕಾರ್ಯ ಪಡೆ ಅಥವಾ ಟಾಸ್ಕ್ ಪೋರ್ಸ್ ಅನ್ನು ಮಂಡ್ಯ ಜಿಲ್ಲೆಗೂ ವಿಸ್ತರಿಸಿ, ಕಂಗಾಲಾಗಿರುವ ಇಲ್ಲಿನ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.
- ಆನೆಗಳು ನಾಡಿಗೆ ಬರುವುದನ್ನು ತಡೆಯಲು ಕಾಡಿನ ಅಂಚಿನಲ್ಲಿ ಕಂದಕ ತೋಡುವುದು, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕು.












Click it and Unblock the Notifications