ಡೀಸೆಲ್ ದರ ಏರಿಕೆ: ಶೀಘ್ರದಲ್ಲೇ ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳ
ಬೆಂಗಳೂರು, ಜೂನ್ 16: ಲೋಕಸಭೆ ಚುನಾವಣೆ 2024 ಮುಕ್ತಾಯಗೊಳ್ಳುತ್ತಿದ್ದಂತೆಯೇ ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳ ಪ್ರಯಾಣ ದರ ಏರಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಸಾರಿಗೆ ನಿಗಮಗಳು ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿವೆ. ಆದರೆ ಸರ್ಕಾರದ ಹಸಿರು ನಿಶಾನೆ ಬಾಕಿ ಇದೆ.
ಶನಿವಾರ ಕರ್ನಾಟಕ ಸರ್ಕಾರ ಪೆಟ್ರೋಲ್ ಬೆಲೆಯನ್ನು 3.02 ರೂ. ಮತ್ತು ಡೀಸೆಲ್ ಬೆಲೆಯನ್ನು 3 ರೂ. ಹೆಚ್ಚಳ ಮಾಡಿದೆ. ಈಗಾಗಲೇ ನಷ್ಟದಲ್ಲಿರುವ ಸಾರಿಗೆ ನಿಗಮಗಳಿಗೆ ಡೀಸೆಲ್ ಬೆಲೆ ಹೆಚ್ಚಳ ಮತ್ತಷ್ಟು ಸಂಕಷ್ಟ ತಂದಿದೆ. ಆದ್ದರಿಂದ ಟಿಕೆಟ್ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರಯಾಣ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈಗ ಸರ್ಕಾರದ ಮೇಲೆ ಮತ್ತಷ್ಟು ಒತ್ತಡವನ್ನು ಹಾಕಲಿವೆ.
ಎಷ್ಟು ಖರ್ಚಾಗುತ್ತಿದೆ?; ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಪ್ರತಿದಿನ 6.2 ಲಕ್ಷ ಲೀಟರ್ ಡೀಸೆಲ್ ಖರೀದಿ ಮಾಡುತ್ತದೆ. ಈಗ ಡೀಸೆಲ್ ದರ ಏರಿಕೆಯಾದ ಕಾರಣ ನಿಗಮಕ್ಕೆ ಹೆಚ್ಚುವರಿಯಾಗಿ 18.2 ಲಕ್ಷ ರೂ. ಖರ್ಚಾಗಲಿದೆ. ಕಳೆದ ವರ್ಷದಲ್ಲಿ ನಿಗಮ ಕೇವಲ ಇಂಧನ ಖರೀದಿಗೆ 1,828 ರೂ.ಗಳನ್ನು ಖರ್ಚು ಮಾಡಿದೆ.
ಸಿಬ್ಬಂದಿಗಳ ವೇತನ, ವಾಹನದ ಬಿಡಿಭಾಗಗಳ ಖರ್ಚು, ನಿರ್ವಹಣಾ ಖರ್ಚು ಹೆಚ್ಚಾದ ಹಿನ್ನಲೆಯಲ್ಲಿ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಕೆಎಸ್ಆರ್‌ಟಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯಲ್ಲಿ ಈಗಾಗಲೇ ವಿವರಿಸಿದೆ. ಅದರ ಜೊತೆಗೆ ಈಗ ಡೀಸೆಲ್ ಬೆಲೆಯಲ್ಲಿಯೂ ಏರಿಕೆಯಾಗಿದೆ.
ಈಗ ಪ್ರಯಾಣದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನಿಗಮದ ಮುಂದೆ ಆದಾಯ ಸಂಗ್ರಹ ಮಾಡಲು ಬೇರೆ ಯಾವುದೇ ಮಾರ್ಗವಿಲ್ಲ. ಸರ್ಕಾರ ಎಷ್ಟು ಏರಿಕೆ ಮಾಡಲು ಅನುಮತಿ ನೀಡಲಿದೆ? ಎಂದು ಕಾದು ನೋಡಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾರಿಗೆ ನಿಗಮಗಳು ಶೇ 20 ರಿಂದ 25ರಷ್ಟು ಪ್ರಯಾಣ ದರ ಏರಿಕೆಗೆ ಮನವಿ ಮಾಡಿವೆ. ಆದರೆ ಸರ್ಕಾರ 10 ರಿಂದ 15 ಶೇ ಏರಿಕೆಗೆ ಒಪ್ಪಿಗೆ ನೀಡಬಹುದು ಎಂದು ಅಂದಾಜಿಸಲಾಗಿದೆ. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಆದರೆ ಸಂಸ್ಥೆಗಳ ಆದಾಯದಲ್ಲಿ ನಿರೀಕ್ಷಿತ ಹೆಚ್ಚಳವಾಗಿಲ್ಲ.
ಮತ್ತೊಂದು ಕಡೆ ಬಿಎಂಟಿಸಿ ಪ್ರತಿದಿನ 2.5 ಲಕ್ಷ ಲೀಟರ್ ಡೀಸೆಲ್ ಖರೀದಿ ಮಾಡುತ್ತದೆ. ಈಗ ಡೀಸೆಲ್ ದರ ಏರಿಕೆಯ ಪರಿಣಾಮ ಸಂಸ್ಥೆಗೆ 8.7 ಲಕ್ಷ ರೂ.ಗಳ ಹೆಚ್ಚುವರಿ ಹೊರೆಯಾಗಲಿದೆ. ವಾರ್ಷಿಕ 32 ಕೋಟಿ ರೂ. ಹೊರೆ ನಿರೀಕ್ಷೆ ಮಾಡಲಾಗಿದೆ.
ಸಾರಿಗೆ ನಿಗಮಗಳ ಬೇಡಿಕೆಯಂತೆ ಪ್ರಯಾಣದರ ಕೊನೆಯ ಬಾರಿ ಏರಿಕೆಯಾಗಿದ್ದು 2020ರಲ್ಲಿ. ಆದರೆ ಆಗ ಬಿಎಂಟಿಸಿ ಪ್ರಯಾಣ ದರ ಏರಿಕೆಯಾಗಿರಲಿಲ್ಲ. 2014ರಲ್ಲಿ ಬಿಎಂಟಿಸಿ ಪ್ರಯಾಣ ದರ ಶೇ 18ರಷ್ಟು ಏರಿಕೆ ಮಾಡಲಾಗಿತ್ತು.
ಈ ಹಿಂದೆ ಪ್ರಯಾಣ ದರ ಹೆಚ್ಚಳವಾದಾಗ ಡೀಸೆಲ್ ದರ 61 ರೂ.ಗಳ ಸನಿಹದಲ್ಲಿತ್ತು. ಆದರೆ 5 ವರ್ಷದಲ್ಲಿ ಡೀಸೆಲ್ ದರದಲ್ಲಿ ಭಾರೀ ಏರಿಕೆಯಾಗಿದೆ. ಅಲ್ಲದೇ ಸಿಬ್ಭಂದಿ ವೇತನ, ಭತ್ಯೆಗಳು, ಬಿಡಿಭಾಗಗಳ ದರ, ಟೋಲ್ ಶುಲ್ಕ ಹೀಗೆ ವಿವಿಧ ಕಾರಣಕ್ಕೆ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ. ಆದ್ದರಿಂದ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ನಿಗಮಗಳು ಸರ್ಕಾರವನ್ನು ಕೋರಿವೆ.












Click it and Unblock the Notifications