ಪರಿಷತ್ ಚುನಾವಣೆಯಲ್ಲಿ ಯತ್ನಾಳ್‌ ಕಾಂಗ್ರೆಸ್‌ಗೆ ಮತ ಹಾಕಿದ್ರಾ; ಅಡ್ಜಸ್ಟ್‌ಮೆಂಟ್‌ ಗಿರಾಕಿಗಳು ಎಂದಿದ್ದು ಯಾರನ್ನ?

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯ ಬಿಜೆಪಿ ವಿರುದ್ಧ ಉಚ್ಚಾಟಿತ ಶಾಸಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಚುನಾವಣೆಯಲ್ಲಿ ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರ ವಿರುದ್ಧ "ಅಡ್ಜಸ್ಟ್‌ಮೆಂಟ್ ರಾಜಕಾರಣಿಗಳು" ಮತ್ತು "ಮೀರ್ ಸಾದಿಕ್‌ಗಳು" ಎಂದು ಕರೆಯುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

"ಮಾಡಲಾರದವನು ಮದ್ದಲೆ ತಿಂದ" ಎಂದ ಯತ್ನಾಳ್

ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಯತ್ನಾಳ್, "ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿರುವ ಹೀನಾಯ ಸೋಲಿನಿಂದಾಗಿ ಸಾರ್ವಜನಿಕವಾಗಿ ನಗೆಪಾಟಲಾಗಿರುವ ಸದ್ಯದ ರಾಜ್ಯಾಧ್ಯಕ್ಷರ (ವಿಜಯೇಂದ್ರ) ತಂಡವು, ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೊಸ ತಂತ್ರ ಹೂಡಿದೆ. ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ ಎಂಬ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ, ತಮಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಲು ವಿಫಲರಾದ ಅಡ್ಜಸ್ಟ್‌ಮೆಂಟ್ ಗಿರಾಕಿಗಳು ಈಗ ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.

Basanagouda Patil Yatnal

ಅಡ್ಡ ಮತದಾನದ ವದಂತಿಗೆ ಸ್ಪಷ್ಟನೆ

ಪಕ್ಷನಿಷ್ಠೆಯ ಕುರಿತು ಎದ್ದಿರುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿರುವ ಅವರು, "ಕೈಲಾಗದವನಿಗೆ ಕತ್ತೆ ಹೊರುವ ಕೆಲಸ ಎಂಬ ಗಾದೆ ಮಾತಿನಂತೆ ಈ ನಾಯಕರು ವರ್ತಿಸುತ್ತಿದ್ದಾರೆ. ಕೊಟ್ಟ ಕೆಲಸವನ್ನು ಸರಿಯಾಗಿ ಮಾಡಲು ಇವರಿಂದ ಸಾಧ್ಯವಾಗಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿಲ್ಲ. ಭಾರತೀಯ ಜನತಾ ಪಕ್ಷದ ಚಿಹ್ನೆಯಡಿಯೇ ಶಾಸಕನಾಗಿ ಆಯ್ಕೆಯಾಗಿರುವ ನಾನು, ನನ್ನ ಪಕ್ಷದ ಅಧಿಕೃತ ಅಭ್ಯರ್ಥಿಗೇ ಮತ ನೀಡಿದ್ದೇನೆ. ಯಾವುದೇ ಕೆಲಸವಿಲ್ಲದ ಕೆಲ ತಿಳಿಗೇಡಿಗಳು ಮತ್ತು ಅವರ ಪಟಾಲಂ ನನ್ನ ಮೇಲೆ ಮಾಡುತ್ತಿರುವ ಆಪಾದನೆಗಳು ಸತ್ಯಕ್ಕೆ ಮೈಲುಗಳಷ್ಟು ದೂರವಾಗಿವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಸೋಲಿಗೆ ಕಾರಣ ಬಿಚ್ಚಿಟ್ಟ ಯತ್ನಾಳ್‌

ಪಕ್ಷದ ಸದ್ಯದ ದುಸ್ಥಿತಿಗೆ ಮತ್ತು ಸರಣಿ ಸೋಲುಗಳಿಗೆ ರಾಜ್ಯ ಮಟ್ಟದ ನಾಯಕರೇ ಕಾರಣ ಎಂದು ನೇರವಾಗಿ ಬೆರಳು ಮಾಡಿರುವ ಯತ್ನಾಳ್, ಪ್ರಮುಖ ನಾಲ್ಕು ಕಾರಣಗಳನ್ನು ಮುಂದಿಟ್ಟಿದ್ದಾರೆ. ಪಕ್ಷದಲ್ಲಿ ಯೋಗ್ಯರಿಗೆ ಮನ್ನಣೆ ನೀಡದೆ ಕೇವಲ ತಮ್ಮವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ರಾಜ್ಯ ಬಿಜೆಪಿ ನಾಯಕರಲ್ಲಿ ಯಾವುದೇ ಒಗ್ಗಟ್ಟು ಮತ್ತು ಹೊಂದಾಣಿಕೆ ಉಳಿದಿಲ್ಲ. ಒಳಗೊಳಗೇ ವಿರೋಧ ಪಕ್ಷಗಳೊಂದಿಗೆ ಮಾಡಿಕೊಳ್ಳುತ್ತಿರುವ ಹೊಂದಾಣಿಕೆಯಿಂದಾಗಿ ಪಕ್ಷಕ್ಕೆ ಸೋಲಾಗುತ್ತಿದೆ ಎಂದು ದೂರಿದ್ದಾರೆ. ನಮ್ಮದೇ ಪಕ್ಷದ ಒಳಗಡೆ ಕೆಲವು 'ಮೀರ್ ಸಾದಿಕ್‌ಗಳು' ಅಡಗಿ ಕುಳಿತಿದ್ದಾರೆ. ಬೇರೆಯವರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿರುವ ಇಂತಹ ನಾಯಕರಿಂದಲೇ ಇಂದು ಬಿಜೆಪಿ ಸರಣಿ ಸೋಲುಗಳನ್ನು ಕಾಣುವಂತಾಗಿದೆ ಎಂದು ಆರೋಪಿಸಿದ್ದಾರೆ.

ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿರುವ ಅವರು, "ನನ್ನ ಕಡೆಗೆ ಬೆರಳು ಮುಖ ಮಾಡುವ ಮುನ್ನ, ಈ ಚುನಾವಣೆಯಲ್ಲಿ ಪಕ್ಷವನ್ನು ವ್ಯವಸ್ಥಿತವಾಗಿ ಸೋಲಿಸಿದ ಆ ನಯವಂಚಕರು ಯಾರು? ಮತ್ತು ಆ ನಯವಂಚಕರ ಬೆನ್ನ ಮೂಳೆಯಾಗಿ ನಿಂತು ಪ್ರೋತ್ಸಾಹ ನೀಡಿದ ಶಕ್ತಿಗಳು ಯಾವುವು ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ಸವಾಲು ಹಾಕಿದ್ದಾರೆ. ಯತ್ನಾಳ್ ಅವರ ಈ ಪೋಸ್ಟ್ ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಬಿಜೆಪಿಯ ಆಂತರಿಕ ಕಲಹ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದೆ. ಅಡ್ಡಮತದಾನ ನಾನು ಮಾಡಿಲ್ಲ ಎಂದು ಯತ್ನಾಳ್‌ ಸ್ಪಷ್ಟನೆ ನೀಡಿದ್ದು, ಉಚ್ಚಾಟನೆ ಮಾಡಿದರೂ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿರುವುದು ಅವರ ಪಕ್ಷ ನಿಷ್ಠೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+