NEP ಎಡವಟ್ಟು: ಪದವಿ 2 ಸೆಮಿಸ್ಟರ್ ದಾಖಲಾತಿ ಶುಲ್ಕ ಪಾವತಿಗೆ ಕೊನೆ ದಿನ
ಬೆಂಗಳೂರು, ಮೇ. 04: ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ದ್ವಿತೀಯ ಸೆಮಿಸ್ಟರ್ ದಾಖಲಾತಿ ಪ್ರಕ್ರಿಯೆ ಶುಲ್ಕ ಪಾವತಿಗೆ ಮೇ. 5 ಕೊನೆ ದಿನ. ಕಳೆದ ಒಂದು ವಾರದಿಂದ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿ ಮಾಡಲಾಗದೇ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನ್‌ಲೈನ್ ಪಾವತಿ ವ್ಯವಸ್ಥೆ ಸರಿಪಡಿಸದೇ ಧಾರವಾಡ ಕರ್ನಾಟಕ ವಿವಿ ಕೂಡ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ಕಳೆದ ವರ್ಷವೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಎನ್‌ಇಪಿ ಭಾಗವಾಗಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಕೂಡ ಬದಲಿಸಿತ್ತು. ವಿದ್ಯಾರ್ಥಿಗಳು ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ಮುಗಿಸಿದ ಕೂಡಲೇ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಗೆ ಅವಕಾಶ ಕಲ್ಪಿಸಿತ್ತು. ಇದಕ್ಕಾಗಿ ಪ್ರತ್ಯೇಕ ವೆಬ್ ತಾಣ ಸೃಷ್ಟಿಸಿದ್ದು, ಅಲ್ಲಿಯೇ ಪಾವತಿ ಮಾಡಲು ಸೂಚಿಸಿತ್ತು.
ಪ್ರಸಕ್ತ ಸಾಲಿನಲ್ಲಿ ಸ್ನಾತಕ ಹಾಗೂ ಪದವಿ ಕೋರ್ಸ್ ಗಳ ಎರಡನೇ ಸೆಮಿಸ್ಟರ್ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ ದಾಖಲಾತಿ ಪ್ರಕ್ರಿಯೆ ಮುಗಿಸಿ ದಾಖಲಾತಿ ಶುಲ್ಕ ಪಾವತಿಗೆ ಮೇ. 5 ಕೊನೆ ದಿನಾಂಕ ನಿಗದಿ ಮಾಡಿದೆ. ಆದರೆ ಕಳೆದ ಒಂದು ವಾರದಿಂದಲೂ ಆನ್‌ಲೈನ್ ನಲ್ಲಿ ಶುಲ್ಕ ಪಾವತಿ ಮಾಡಲಾಗದೇ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನ್‌ಲೈನ್ ನಲ್ಲಿ ಶುಲ್ಕ ಪಾವತಿಗೆ https://uucms.karnataka.gov.in/Login/Index ಈ ವೆಬ್ ತಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಅದೇನು ಲೋಪದೋಷವಿದೆಯೋ ಗೊತ್ತಿಲ್ಲ. ಕಳೆದ ಒಂದು ವಾರದಿಂದಲೂ ಶುಲ್ಕ ಪಾವತಿ ಮಾಡಲಾಗದೇ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ.


ವಿದ್ಯಾರ್ಥಿಗಳ ಅಳಲು
"ನನ್ನ ಮಗ ಪವನ್ ಹೆಗಡೆ. ಎನ್ಇಪಿ ಅಡಿಯಲ್ಲಿ ಸಿರಸಿಯ ಎಂಎಂ ಕಾಲೇಜಿನಲ್ಲಿ ಬಿಎಸ್ಸಿ ಪದವಿಗೆ ದಾಖಲಾತಿ ಪಡೆದಿದ್ದರು. ಎರಡನೇ ಸೆಮಿಸ್ಟರ್ ನಲ್ಲಿ ದಾಖಲಾತಿ ಪ್ರಕ್ರಿಯೆ ಮಾಡಲು ದಂಡದ ಸಮೇತ ಮೇ. 07 ಕೊನೆ ದಿನಾಂಕ ನಿಗದಿ ಪಡಿಸಲಾಗಿದೆ. ಒಂದು ವಾರದಿಂದ ಪ್ರತಿದಿನ ಬೈಕ್ ನಲ್ಲಿ 20 ಕಿ.ಮೀ. ಹೋಗಿ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿಯವರೆಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಧಾರವಾಡ ವಿವಿ ಅವರ ಗಮನಕ್ಕೆ ತಂದರೆ, ನಮಗೆ ಅದರ ಬಗ್ಗೆ ಗೊತ್ತಿಲ್ಲ, ಬೆಂಗಳೂರಿನವರನ್ನು ಸಂಪರ್ಕ ಮಾಡಿ ಎಂದು ನಂಬರ್ ಕೊಟ್ಟಿದ್ದಾರೆ. ಅದಕ್ಕೆ ನೂರು ಸಲ ಕರೆ ಮಾಡಿದರೂ ಕರೆ ಸ್ವೀಕರಿಸುವರೇ ಇಲ್ಲ. ಕೊನೆ ದಿನಾಂಕ ಮುಗಿಯಿತು ನಮ್ಮ ಸಮಸ್ಯೆ ಕೇಳುವರು ಯಾರು,'' ಎಂದು ವಿದ್ಯಾರ್ಥಿಯ ತಂದೆ ರಮೇಶ್ 'ಒನ್‌ಇಂಡಿಯಾ ಕನ್ನಡ'ಕ್ಕೆ ಮಾಹಿತಿ ನೀಡಿದರು.

ಇದಕ್ಕೆ ಪರ್ಯಾಯ ಅವಕಾಶವೇ ಇಲ್ಲ.
"ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚೆ ಮಾಡಿಕೊಂಡು ಶಿಕ್ಷಣ ಸಚಿವರು ಕಾಲ ಕಳೆಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಸೌಲಭ್ಯವಿಲ್ಲ ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲದೇ ಆನ್ ಲೈನ್ ನಲ್ಲಿಯೇ ಪಾವತಿಗೆ ಆದ್ಯತೆ ನೀಡಿದ್ದಾರೆ. ಗ್ರಾಮೀಣರ ಮಕ್ಕಳು ಕೃಷಿಕರ ಮಕ್ಕಳು ಏನು ಮಾಡಬೇಕು. ಈ ಮೊದಲು ಶಾಲೆಯಲ್ಲಿಯೇ ದಾಖಲಾತಿ ಶುಲ್ಕ ಪಾವತಿಸಿ ರಶೀದಿ ಪಡೆಯುತ್ತಿದ್ದೆವು. ಒಂದು ವಾರದಿಂದ ಓಡಾಡುತ್ತಿದ್ದೇನೆ. ಆದರೆ ಇಲ್ಲಿಯವರೆಗೂ ವಿಷಯ ಆಯ್ಕೆ ಮಾಡಿಕೊಂಡು ದಾಖಲಾತಿ ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲ. ಪೋಷಕರು ಸೈಬರ್ ಸೆಂಟರ್ ಗಳಿಗೆ ಹೋಗಿ, ಓಪನ್ ಆಯ್ತಾ, ಓಪನ್ ಆಯ್ತಾ ಅಂತ ಸಂಜೆ ವರೆಗೂ ಪೇಟೆಗಳಲ್ಲಿ ಕಾದು ಬರೀ ಗೈಯಲ್ಲಿ ಹೋಗುವಂತಾಗಿದೆ. ಇದಕ್ಕೆ ಪರ್ಯಾಯ ಅವಕಾಶವೇ ಇಲ್ಲ. ಕಾಲೇಜುಗಳಲ್ಲಿಯೇ ಶುಲ್ಕ ಪಾವತಿ ಮಾಡುವುದರಲ್ಲಿ ತಪ್ಪೇನಿತ್ತು,'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶುಲ್ಕ ಪಾವತಿ ಕಳೆದ ವರ್ಷವೂ ಸಮಸ್ಯೆ
ಮೊದಲ ಸೆಮಿಸ್ಟರ್ ವೇಳೆಯೂ ಶುಲ್ಕ ಪಾವತಿ ಮಾಡಲಾಗದೇ ಸಮಸ್ಯೆ ತಲೆದೋರಿತ್ತು. ಪೋಷಕರು ಗಲಾಟೆ ಮಾಡಿದ ಬಳಿಕ ದಿನಾಂಕ ವಿಸ್ತರಣೆ ಮಾಡಿದ್ದರು. ಈ ಭಾರಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದವರೂ ಸ್ಪಂದಿಸುತ್ತಿಲ್ಲ. ಬೆಂಗಳೂರಿನ ನಂಬರ್ ಗೆ ಕರೆ ಮಾಡಿದ್ರೂ ಸ್ವೀಕರಿಸುವರೇ ಇಲ್ಲ. ಇದನ್ನು ಸರಿ ಪಡಿಸದಿದ್ದರೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ನಿಂತು ಹೋಗುತ್ತದೆ. ವಿದ್ಯಾರ್ಥಿಗಳ ಓದಿನ ಮೇಲೆ ಪರಿಣಾಮ ಬೀರಲಿದೆ ಎಂದು ರಮೇಶ್ ಕಿಡಿ ಕಾರಿದ್ದಾರೆ.

ಅಶ್ವತ್ಥ ನಾರಾಯಣ ಅವರು ಬ್ಯುಸಿ
ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪೂರ್ಣ ಗೊಳ್ಳಬೇಕಾದರೆ, ಶುಲ್ಕವನ್ನು ಆನ್‌ಲೈನ್ ನಲ್ಲಿ ಪಾವತಿ ಮಾಡಲೇಬೇಕು. ಪಾವತಿ ಮಾಡಿದ ಬಳಿಕವೇ ಒಂದು ನಂಬರ್ ಜನರೇಟ್ ಆಗುತ್ತದೆ. ಆ ನಂಬರ್ ಕಾಲೇಜಿಗೆ ನೀಡಿದರೆ ಮಾತ್ರ ದಾಖಲಾತಿ ಪ್ರಕ್ರಿಯೆ ಪೂರ್ಣ ವಾಗುತ್ತದೆ. ಶುಲ್ಕ ಪಾವತಿ ಮಾಡಲು uucms.karnataka.gov.in ನಲ್ಲಿ ಸಾಧ್ಯವಾಗುತ್ತಿಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕಾದ ಉನ್ನತ ಶಿಕ್ಷಣ ಸಚಿವರು ಪಿಎಸ್ಐ ಗುದ್ದಾಟದಲ್ಲಿ ಬ್ಯುಸಿಯಾಗಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಾದರೂ ಈ ಸಮಸ್ಯೆಯನ್ನು ಬಗೆಹರಿಸಿ ಹೆಚ್ಚಿನ ಕಾಲಾವಕಾಶ ಕೊಡುವರಾ ನೋಡಬೇಕು.












Click it and Unblock the Notifications