ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ ಈಗ ಬೆಳಗಾವಿವರೆಗೆ ವಿಸ್ತರಣೆ
ಬೆಂಗಳೂರು, ಸೆಪ್ಟೆಂಬರ್ 7: ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಮೂಲಕ ಬೆಳಗಾವಿ ಜಿಲ್ಲೆಯ ರೈಲು ಪ್ರಯಾಣಿಕರ ಬಹುಕಾಲದ ಮನವಿಯನ್ನು ರೈಲ್ವೆ ಸಚಿವಾಲಯ ಕೊನೆಗೂ ಪುರಸ್ಕರಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಈ ಮಹತ್ವದ ಬೆಳವಣಿಗೆಯನ್ನು ಗುರುವಾರ ಪತ್ರಿಕಾ ಹೇಳಿಕೆಯ ಮೂಲಕ ಅವರು ಹಂಚಿಕೊಂಡಿದ್ದಾರೆ. ಹೊಸದಾಗಿ ವಿಸ್ತರಣೆಗೊಂಡ ರೈಲು ಸಂಖ್ಯೆ 17302 ಬೆಳಗಾವಿಯಿಂದ ರಾತ್ರಿ 07.45ಕ್ಕೆ ಹೊರಟು ಮರುದಿನ ಬೆಳಗ್ಗೆ 07.10ಕ್ಕೆ ಮೈಸೂರಿಗೆ ಆಗಮಿಸಲಿದೆ. ಹಾಗೆಯೇ, ರೈಲು ಸಂಖ್ಯೆ 17301 ಮೈಸೂರಿನಿಂದ ರಾತ್ರಿ 10.30 ಕ್ಕೆ ಹೊರಟು ಮರುದಿನ ಬೆಳಿಗ್ಗೆ 10.45 ಕ್ಕೆ ಬೆಳಗಾವಿ ತಲುಪುತ್ತದೆ ಎಂದು ತಿಳಿಸಿದ್ದಾರೆ.

ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲು ಈ ತಿಂಗಳ ಕೊನೆಯ ವಾರದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಸಂಸದ ಈರಣ್ಣ ಕಡಾಡಿ ಅವರು ತಮ್ಮ ಮನವಿಗೆ ಸ್ಪಂದಿಸಿ ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲು ಆರಂಭಿಸಲು ಅನುಮತಿ ನೀಡಿದ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇತ್ತೀಚೆಗೆಷ್ಟೆ ನೈಋತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಧಾರವಾಡ-ಮೈಸೂರು ನಡುವಿನ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಅಕ್ಟೋಬರ್ 1ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಹೇಳಿತ್ತು. ರೈಲು ನಂಬರ್ 17302 ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿತ್ತು.
ಪ್ರಯಾಣಿಕರ ಬೇಡಿಕೆ, ವಿವಿಧ ಕಾರಣಗಳಿಗಾಗಿ ಧಾರವಾಡ-ಮೈಸೂರು ನಡುವಿನ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿ ಅನ್ವಯ ರೈಲು 2023ರ ಅಕ್ಟೋಬರ್ 1ರಿಂದ ಸಂಚಾರ ನಡೆಸಲಿದೆ. ಹೊಸ ವೇಳಾಪಟ್ಟಿ ಅನ್ವಯ ಇನ್ನು ಮುಂದೆ ರೈಲು ನಂಬರ್ 17302 ಧಾರವಾಡದಿಂದ 20:45ಕ್ಕೆ ಹೊರಡಲಿದೆ. ಮೈಸೂರು ನಗರಕ್ಕೆ 5:55ಕ್ಕೆ ತಲುಪಲಿದೆ. ರೈಲಿನ ನಿಲುಗಡೆ, ಬೋಗಿಯ ಸಂಯೋಜನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ತಿಳಿಸಲಾಗಿತ್ತು.












Click it and Unblock the Notifications