Dharmasthala: 12,000 ಭಕ್ತರಿಗಾಗುವ 'ಕ್ಯೂ ವ್ಯವಸ್ಥೆ' ಲೋಕಾರ್ಪಣೆ, 160 AI ಕ್ಯಾಮರಾ ಕಣ್ಗಾವಲು, ಏನೆಲ್ಲಾ ಇದೆ..
ಬೆಂಗಳೂರು, ಜನವರಿ 08: ಕರಾವಳಿ ಭಾಗದಲ್ಲಿರುವ ಪಶ್ಚಿಮ ಘಟ್ಟದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ 'ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನವು' ಹೊಸ ತಂತ್ರಜ್ಞಾನದ 'ಕ್ಯೂ ಸಂಕೀರ್ಣ' ಲೋಕಾರ್ಪಣೆಗೆ ಸಾಕ್ಷಿ ಆಗಿದೆ. ತಿರುಪತಿ ತಿಮ್ಮಪ್ಪನ ದೇಗುಲದ ಕ್ಯೂ ವ್ಯವಸ್ಥೆ ಮಾದರಿಯಲ್ಲಿ ವಿಶಾಲವಾದ ಕ್ಯೂ ವ್ಯವಸ್ಥೆಯನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಒಂದೇ ಸಲಕ್ಕೆ ಸುಮಾರು 12,000 ಭಕ್ತರಿಗೆ ಅವಕಾಶ ಕಲ್ಪಿಸುವಷ್ಟು ವಿಶಾಲವಾದ 'ಕ್ಯೂ ಸಂಕೀರ್ಣ' (ಕ್ಯೂ ಕಾಂಪ್ಲ್ಯಾಕ್ಸ್) ಇದಾಗಿದೆ. ಇದರ ವಿಶೇಷತೆಗಳು, ಇಂಚಿಂಚು ಮಾಹಿತಿ ಇಲ್ಲಿದೆ.
ಕರ್ನಾಟಕದ ಧರ್ಮಸ್ಥಳದಲ್ಲಿ ವಿಶಾಲ ಜಾಗದಲ್ಲಿ ಇಂತಹ ಕ್ಯೂ ವ್ಯವಸ್ಥೆ ನಿರ್ಮಾಣ ಮಾಡಿರುವುದು ಇದೇ ಮೊದಲು. ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ಸಾನಿಧ್ಯಕ್ಕೆ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ದರ್ಶನಕ್ಕೆ ಅವರಿಗೆ ಕಾಯಲು ಅನುವಾಗುವಂತೆ ವಿಶಾಲ ಕಟ್ಟಡ (ಸಂಕೀರ್ಣ) ದಲ್ಲಿ ಭವನ ನಿರ್ಮಿಸಲಾಗಿದೆ. ಆ ಭವನಗಳಲ್ಲಿ (ಕೊಠಡಿ) ಭಕ್ತರನ್ನು ಬಿಡುತ್ತಾರೆ. ಇದರಿಂದ ಸರತಿ ಸಾಲಿನಲ್ಲಿ ನಿಂತು ಕಾಯುವುದು ತಪ್ಪಲಿದೆ. ಭಕ್ತರು ಕೂತುಕೊಂಡು ವಿಶ್ರಾಂತಿ ಮಾಡುತ್ತಲೇ ದೇವರ ದರ್ಶನ ಮಾಡಬಹುದಾದ ವ್ಯವಸ್ಥೆ ಇದಾಗಿದೆ.

10,000 ರಿಂದ 12,000 ಭಕ್ತರಿಗೆ ಅವಕಾಶ
ತಿರುಪತಿ ವ್ಯವಸ್ಥೆ ಮಾದರಿಯಾಗಿಟ್ಟುಕೊಂಡು ಧರ್ಮಸ್ಥಳದಲ್ಲಿ ಬಹುಕೋಟಿ ವೆಚ್ಚದಲ್ಲಿ ಕ್ಯೂ ವ್ಯವಸ್ಥೆ ಪರಿಚಯಿಸಲಾಗಿದೆ. ಇದರಲ್ಲಿ ಒಂದೇ ಭಾರಿಗೆ ಸುಮಾರು 10,000 ರಿಂದ 12,000 ಭಕ್ತರಿಗೆ ಅವಕಾಶ ಕಲ್ಪಿಸುವಷ್ಟು ವಿಶಾಲವಾಗಿದೆ. ಅಂದಾಜು 800 ಭಕ್ತರು ಕೂತು ವಿಶ್ರಾಂತಿ ಪಡೆಯಲು ಆಗುವಂತೆ ಭವನ ನಿರ್ಮಿಸಲಾಗಿದೆ. ಇಂತಹ 16 ಭವನಗಳು ಈ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಲಾಗಿದೆ.
ಇದನ್ನು ಮಂಗಳವಾರ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಉದ್ಘಾಟಿಸಿದ್ದಾರೆ. ಇದರ ಸಂಪೂರ್ಣ ವೈಶಷ್ಟ್ಯಗಳನ್ನು ನೋಡುವುದಾದರೆ, ಒಟ್ಟು 2.75 ಲಕ್ಷ ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ವಿಶಾಲ ಸಭಾಂಗಣಗಳು, ಕೂಡಲು ಆಸನ ವ್ಯವಸ್ಥೆ ಹೊಂದಿದೆ.
ಪ್ರವೇಶ ದ್ವಾರ, ಕುಡಿಯುಲ ನೀರಿನ ವ್ಯವಸ್ಥೆ ಶೌಚ ಗೃಹಗಳು ಒಳಗೊಂಡಿದ್ದು, ಸುಸಜ್ಜಿತವಾಗಿದೆ. ನಿತ್ಯ ಧರ್ಮಸ್ಥಳಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅವರು ಕ್ಯೂನಲ್ಲಿ ಗಂಟೆ ಗಟ್ಟಲೇ ನಿಲ್ಲುವುದು ಕಷ್ಟವಾಗಲಿದೆ. ಈ ಸಂಬಂಧ ಅವರಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ಭವನದಲ್ಲಿ ಕಾಯುತ್ತಾ ಕುಳಿತರೆ ದೇಗುಲ ಸಿಬ್ಬಂದಿ ಅವರಿಗೆ ಸರತಿಯಂತೆ ದರ್ಶನಕ್ಕೆ ಬಿಡಲಿದ್ದಾರೆ.

ಈ ವಿಶಾಲ ಭವನಗಳಲ್ಲಿ ಶಿಶುಪಾಲನಾ ಕೊಠಡಿ ಇದೆ. ಆಧಾತ್ಮ, ದೇಗುಲದ ಸಮಯ, ಪೂಜೆಗಳು, ಇನ್ನಿತರ ವಿಷಯಗಳ ಕುರಿತು ಡಿಜಿಟಲ್ ನಾಮಪಲಕ, ಟಿವಿ ಹಾಗೂ ಧ್ವನಿ ವರ್ಧಕ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಇದೆ.
ಭಕ್ತರ ಕಣ್ಗಾವಲಿಗೆ ಬರೋಬ್ಬರಿ 160 ಎಐ ಕ್ಯಾಮೆರಾ
ತಂಡೋಪ ತಂಡವಾಗಿ ಅದರಲ್ಲೂ ರಜಾ ದಿನ ಹಬ್ಬದ ಸಂದರ್ಭದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಶ್ರೀ ಮಂಜುನಾಥನ ದರ್ಶನಕ್ಕೆ ಬರುತ್ತಾರೆ. ಹೀಗಾಗಿ ಅವರ ಮೇಲೆ ನಿಗಾ ಇಡಲು, ಭಕ್ತರ ನಿಖರ ಎಣಿಕೆಗೆ, ಇನ್ನಿತರ ವಿಷಯಗಳ ಮೇಲೆ ಕಣ್ಗಾವಲು ಮಾಡಲು ಎಲ್ಲ ಭವನಗಳಲ್ಲಿ ಒಟ್ಟು 160 ಅತ್ಯಾಧುನಿಕ ಎಐ ಕ್ಯಾಮೆರಾ ಅಳವಡಿಸಲಾಗಿದೆ.
ಇದಷ್ಟ ಅಲ್ಲ, ದೇವಸ್ಥಾನದ ಆಡಳಿತ ಮಂಡಳಿಯು ನೇರವಾಗಿ ಭವನದಲ್ಲಿರುವವರಿಗೆ ಸಲಹೆ ಸೂಚನೆ ಕೊಡಬಹುದಾಗಿದೆ. ಈ ಸಂಕೀರ್ಣದಲ್ಲಿ 260 ಕ್ಕೂ ಹೆಚ್ಚು ಸ್ಪೀಕರ್‌ಗಳು, 50ಕ್ಕೂ ಹೆಚ್ಚು ಅಪ್ಲಿಫೈಯರ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಕಮಾಂಡ್ ಸೆಂಟರ್‌ನಿಂದ ನೇರವಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಲು ಪಬ್ಲಿಕ್ ಅಡ್ರೆಸ್ ವ್ಯವಸ್ಥೆ ಇದೆ.
ಉತ್ತಮ ಗಾಳಿ ಬರಲಿದ್ದು, ಬೆಳಕಿಗಾಗಿ 650 ಕಿಲೋ ವ್ಯಾಟ್ ಉತ್ಪಾದನೆಯ ಸೋಲಾರ್ ವಿದ್ಯುತ್ ಘಟಕ ಅಳವಡಿಸಲಾಗಿದೆ. ಪಾದಾಚಾರಿ ಹರಿವು ಇದೆ. ಭಕ್ತರು ಕಾಯುವಿಕೆ ಮುಗಿಯುತ್ತಿದ್ದಂತೆ ದೇವರ ದರ್ಶನಕ್ಕೆ ಗುಂಪು ಗುಂಪಾಗಿ ತೆರಳದಂತೆ ವ್ಯವಸ್ಥೇ ಮಾಡಲಾಗಿದೆ. ಸ್ಥಿರ ಚಲನೆಗೆ ಅವಕಾಶ ನೀಡಲಾಗಿದೆ. ಭಕ್ತರ ಸರತಿ ಸಾಲುಗಳು ತಡೆ ರಹಿತವಾಗಿವೆ.
ಸುರಕ್ಷತೆಗೆ ಪ್ರಮುಖ ಆದ್ಯತೆ
ಸಾವಿರಾರು ಜನರು ಒಂದೆಡೆ ಸೇರಿದ್ದ ವೇಳೆ ಯಾವ ಅಹಿತಕರ, ಆಕಸ್ಮಿಕ ಅವಘಡ ಆಗದಂತೆ ತಡೆಯಲು, ಯಾವುದೇ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಅಗ್ನಿಶಾಮಕ, ವೈದ್ಯಕೀಯ ವ್ಯವಸ್ಥೆ, ಸಂರಕ್ಷಣಾ ವ್ಯವಸ್ಥೆಗಳು ಇವೆ. ಕಣ್ಗಾವಲು ಸಿಬ್ಬಂದಿ ಇರಲಿದ್ದು, ಕಟ್ಟಡವನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಇದೆ. ಸಾಫ್ಟವೇರ್, ಹತ್ತು ಸರ್ವರ್‌ಗಳು ಇವೆ. ಯಾವ ಸಮಸ್ಯೆಗೂ ತ್ವರಿತ ಸ್ಪಂದನೆಗೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ಇದೆ.












Click it and Unblock the Notifications