Dharmasthala Case: ಧರ್ಮಸ್ಥಳ ಪ್ರಕರಣ: "ಭೀಮ"ನಿಗೆ ಎಸ್‌ಐಟಿ ತನಿಖಾ ತಂಡದಿಂದಲೇ ಬೆದರಿಕೆ, ಗಂಭೀರ ಆರೋಪ!
Dharmasthala Investigation: ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಕೃತ್ಯಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಎಸ್‌ಐಟಿ ತಂಡವು ತೀವ್ರವಾಗಿ ವಿಚಾರಣೆ ಹಾಗೂ ಸಂಶೋಧನೆ ನಡೆದಿದೆ. ಆದರೆ ದೂರುದಾರನ ಮೇಲೆ ಒತ್ತಡ ಹೇರಲಾಗುತ್ತಿದೆ ಹಾಗೂ ಎಸ್‌ಐಟಿ ತಂಡದ ಅಧಿಕಾರಿಯೊಬ್ಬರಿಂದಲೇ ಬೆದರಿಕೆ ಬಂದಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವರ್ಷಗಳ ಹಿಂದೆ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನುವ ವಿಚಾರವು ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ವಿಷಯವು ಭಾರತದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರವು ಜನರ ಒತ್ತಾಯಕ್ಕೆ ಮಣಿದು ಕೊನೆಗೂ ವಿಶೇಷ ತನಿಖಾ ದಳ (ಎಸ್‌ಐಟಿ)ವನ್ನು ರಚನೆ ಮಾಡಿದೆ. ಆದರೆ, ಇದೀಗ ದೂರುದಾರ / ಭೀಮನಿಗೆ ಎಸ್‌ಐಟಿ ತಂಡದಲ್ಲಿರುವ ಅಧಿಕಾರಿಯಿಂದಲೇ ಗಂಭೀರವಾದ ಬೆದರಿಕೆ ಬಂದಿದೆ ಎಂದು ದೂರುದಾರರ ಪರ ಇರುವ ವಕೀಲರು ಆರೋಪ ಮಾಡಿದ್ದಾರೆ.

ವಕೀಲರಾದ ಅನನ್ಯ ಗೌಡ ಅವರು, ನಮ್ಮ ಕಕ್ಷಿದಾರರಿಗೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಆಗಸ್ಟ್ 1 ರಂದು ಬೆದರಿಕೆ ಹಾಕಿದ್ದಾರೆ. ನೀನು ಈ ವಿಷಯದಲ್ಲಿ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗಿತ್ತು. ಹಲವು ವರ್ಷಗಳ ಕಾಲ ನೀನು ಬಂಧನಕ್ಕೆ ಒಳಗಾಗಲಿದ್ದೀಯ ಎಂದು ಬೆದರಿಸಿದ್ದಾರೆ. ಹೀಗಾಗಿ ಆ ಅಧಿಕಾರಿಯನ್ನು ಎಸ್‌ಐಟಿ ತನಿಖಾ ತಂಡದಿಂದ ಕೂಡಲೇ ಹೊರಕ್ಕೆ ಕಳುಹಿಸಬೇಕು. ನಮ್ಮ ಕಕ್ಷಿದಾರರು ಮುಕ್ತವಾಗಿ ಹಾಗೂ ನಿರ್ಭಯವಾಗಿ ತನಿಖೆಗೆ ಸಹಕರಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಈ ಸಂಬಂಧ ಎಸ್‌ಐಟಿಗೆ ಮೇಲ್ ಮಾಡಲಾಗಿದೆ. ಇನ್ನು ಈ ದೂರಿನ ಬಗ್ಗೆ ಪರಿಶೀಲನೆ ಮಾಡುವುದಾಗಿ ಎಸ್‌ಐಟಿ ಹೇಳಿದೆ ಎಂದು ಹೇಳಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ: ಇನ್ನು ಭೀಮನಿಗೆ ಬೆದರಿಕೆ ಹಾಕಲಾಗುತ್ತಿದೆ. ಅವನ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನುವುದು ಆಕ್ರೋಶಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಜನ ಇದರ ಬಗ್ಗೆ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications