Breaking: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದ 6 ಜಿಲ್ಲೆಗಳಲ್ಲಿ ತೀವ್ರ ಮಳೆ, ಹಳದಿ ಎಚ್ಚರಿಕೆ
ಬೆಂಗಳೂರು, ನವೆಂಬರ್ 11: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದೆ. ಈ ಭಾಗದ ಕೆಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುವ ನವೆಂಬರ್ 13ರಂದು ಹಿಂಗಾರು ಮಳೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ರಾಮನಗರ, ಮಂಡ್ಯ, ಮೈಸೂರು, ಕೊಡಗು, ಕೋಲಾರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾನುವಾರ ಗುಡುಗು ಸಹಿತ ಧಾರಾಕಾರವಾಗಿ ಮಳೆ ಅಬ್ಬರಿಸುವ ಲಕ್ಷಣಗಳು ಇವೆ.
ಹೀಗಾಗಿ ಈ ಆರು ಜಿಲ್ಲೆಗಳಿಗೆ ನವೆಂಬರ್ 13ರಂದು ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ಘೋಷಿಸಿದೆ. ನವೆಂಬರ್ 14ರಿಂದ ಈ ಭಾಗದಲ್ಲಿ ತುಂತುರು ಇಲ್ಲವೇ ಅಲ್ಲಲ್ಲಿ ಹಗುರು ಮಳೆ ಆಗಬಹುದು. ಇದರ ಹೊರತಾಗಿ ಗಂಭೀರ ಬದಲಾವಣೆಗಳು ಇಲ್ಲ ಎನ್ನಲಾಗಿದೆ.
ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಬಹುತೇಕ ಕಡೆಗಳಲ್ಲಿ ಒಣ ಹವೆ ಮುಂದುವರಿದಿದೆ. ಮುಂದಿನ ನಾಲ್ಕು ದಿನಗಳಲ್ಲಿ ಒಂದೆರಡು ಕಡೆಗಳಲ್ಲಿ ಮಾತ್ರವೇ ಹಗುರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ಮಳೆಗೆ ಕಾರಣವೇನು?
ಗುರುವಾರದಿಂದ ನೈಋತ್ಯ ಬಂಗಾಳಕೊಲ್ಲಿಯ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿದೆ. ಇದರ ಪರಿಣಾಮ ತಮಿಳುನಾಡು ಕರಾವಳಿ ಭಾಗದಲ್ಲಿ ಗಾಳಿ ಮಳೆ ಹೆಚ್ಚಾಗಿದೆ. ವರದಿಗಳ ಪ್ರಕಾರ, ಸಮುದ್ರ ಮಟ್ಟಕ್ಕಿಂತ 7.6ಕಿಲೋ ಮೀಟರ್ ಎತ್ತರದಲ್ಲಿ ಸುಳಿಗಾಳಿ ಸೃಷ್ಟಿಯಾಗಿದೆ. ನಂತರ ಅಲ್ಲಿಂದ ತಮಿಳುನಾಡುನಿಂದ ಪುದಚೇರಿ ಮಾರ್ಗವಾಗಿ ತೆರಳಿ ಈಶಾನ್ಯ ಅರಬ್ಬಿ ಸಮುದ್ರದಲ್ಲಿ ದುರ್ಬಲಗೊಳ್ಳುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ ದಕ್ಷಿಣ ಒಳನಾಡಿನಲ್ಲಿ ಮಳೆ ಸುರಿಯುತ್ತಿದೆ.
ಈಶಾನ್ಯ ಬಂಗಾಳಕೊಲ್ಲಿಯಲ್ಲಿ ನವೆಂಬರ್ 16ರಂದು ಹೊಸದಾಗಿ ವಾಯುಭಾರ ಒಂದು ಕುಸಿತಗೊಳ್ಳುವ ಸಾಧ್ಯತೆ ಇದೆ. ಇದು ಉಲ್ಬಣಗೊಂಡರೆ ರಾಜ್ಯಕ್ಕೆ ಮತ್ತೆ ಮಳೆ ಅಬ್ಬರ ಆರಂಭವಾಗುತ್ತದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದರು.
ಬೆಂಗಳೂರಿನಲ್ಲಿ ನವೆಂಬರ್ 15ರವರೆಗೆ ಬಹಳಷ್ಟು ಕಡೆ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಬೆಳಗ್ಗೆ ಮಂಜು ಕವಿದ ವಾತಾವರಣ ನಿರ್ಮಾಣವಾಗಲಿದೆ. ಈ ಅವಧಿಯಲ್ಲಿ ತಾಪಮಾನದಲ್ಲಿ ತುಸು ಇಳಿಕೆ ಆಗಬಹುದು ಎನ್ನಲಾಗಿದೆ.












Click it and Unblock the Notifications