Government employee; ನೌಕರರ ವಿರುದ್ಧ ಇಲಾಖಾ ವಿಚಾರಣೆ ಸುತ್ತೋಲೆ
ಬೆಂಗಳೂರು, ಸೆಪ್ಟೆಂಬರ್ 04; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಲ್ಲಿ ಆಗುವ ವಿಳಂಬವನ್ನು ತಡೆಗಟ್ಟುವ ಮತ್ತು ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ನೀಡಿರುವ ತನಿಖಾ ವರದಿಯನ್ನು ಪರಿಶೀಲಿಸಿದ ನಂತರ ಇಲಾಖಾ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಡಾ. ಎನ್. ನೋಮೆಶ್ ಕುಮಾರ್, ನಿರ್ದೇಶಕರು (ಪಂ. ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಈ ಸುತ್ತೋಲೆಯಲ್ಲಿ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ 28/06/2001, ಸರ್ಕಾರದ ಸುತ್ತೋಲೆ ಸಂಖ್ಯೆ 22/10/2013 ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ 2/8/2023 ಉಲ್ಲೇಖ ಮಾಡಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಂದಕ್ಕೆ ಸರ್ಕಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಂದಕ್ಕೆ ಆಯುಕ್ತರು, ಪಂಚಾಯತ್ ರಾಜ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕ ವೃಂದಕ್ಕೆ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ (ಅಭಿವೃದ್ಧಿ) ರವರನ್ನು ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವಾಗಿದ್ದು, ಲಘು ಮತ್ತು ಕಠಿಣ ದಂಡನೆಗಳನ್ನು ವಿಧಿಸಲು ಸಕ್ಷಮ ಪ್ರಾಧಿಕಾರ ನಿರ್ದಿಷ್ಟಪಡಿಸಲಾಗಿದೆ.
ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ಸರ್ಕಾರಿ ನೌಕರನ ಮೇಲಿನ ಆಪಾದಿತ ದುರ್ನಡತೆಗೆ ಸಂಬಂಧಿಸಿದಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 11ರಡಿ ಶಿಸ್ತಿನ ಕ್ರಮ ಪ್ರಾರಂಭಿಸಿ ಮುಕ್ತಾಯಗೊಳಿಸಲು ಒಟ್ಟು 9 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ.
ಸರ್ಕಾರದ ಸುತ್ತೋಲೆಯಲ್ಲಿ ಸರ್ಕಾರಿ ನೌಕರನ ಮೇಲಿನ ಆಪಾದಿತ ದುರ್ನಡತೆಗ ಸಂಬಂಧಿಸಿದಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 12ರಡಿ ಶಿಸ್ತಿನ ಕ್ರಮ ಪ್ರಾರಂಭಿಸಿ ಮುಕ್ತಾಯಗೊಳಿಸಲು ಒಟ್ಟು 45 ದಿನಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ವಿವರಣೆ ನೀಡಲಾಗಿದೆ.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸದಿರುವುದರಿಂದ ನೌಕರರಿಗೆ ಸಿಗಬೇಕಾದ ಮುಂಬಡ್ತಿ, ಕಾಲಮಿತಿ ವೇತನ ಬಡ್ತಿ, ವೇತನ ಬಾಕಿ ಮುಂತಾದ ಸೇವಾ ಸೌಲಭ್ಯಗಳಿಂದ ವಂಚಿತರಾಗಿದ್ದು, ಇಲಾಖಾ ವಿಚಾರಣೆಗಳನ್ನು ಪೂರ್ಣಗೊಳಿಸಲು 9 ತಿಂಗಳುಗಳ ಕಾಲಮಿತಿ ನಿಗದಿಪಡಿಸಿರುವುದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿಯೂ ಸಹ ಎಲ್ಲಾ ಇಲಾಖಾ ವಿಚಾರಣೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ, ಸಂಘದವರು ಸರ್ಕಾರದ ಗಮನಕ್ಕೆ ತಂದಿರುತ್ತಾರೆ ಎಂದು ತಿಳಿಸಲಾಗಿದೆ.
ಸುತ್ತೋಲೆಯಲ್ಲಿನ ವಿವರಣೆ; ಸರ್ಕಾರದ ಸುತ್ತೋಲೆಯಲ್ಲಿ ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 12(3) ರಡಿಯಲ್ಲಿ ಸಕ್ಷಮ ಪ್ರಾಧಿಕಾರವಾದ ಸರ್ಕಾರಕ್ಕೆ ಶಿಫಾರಸ್ಸುಗಳೊಂದಿಗೆ ತನಿಖಾ ವರದಿಯನ್ನು ಸಲ್ಲಿಸಿದ ನಂತರ, ಸರ್ಕಾರವು ತನಿಖಾ ವರದಿಯನ್ನು ಪರಿಶೀಲಿಸಿ, ಆರೋಪದ ಗಂಭೀರತೆಯನ್ನು ಪರಿಗಣಿಸಿ ಅವು ದಂಡನೆಯನ್ನು ವಿಧಿಸಬಹುದಾದ ಪ್ರಕರಣವಾಗಿದ್ದಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 12 ರನ್ವಯ ಸಕ್ಷಮ ಶಿಸ್ತು ಪ್ರಾಧಿಕಾರಿಗೆ ವಿಚಾರಣೆ ನಡೆಸಲು ನಿರ್ದೇಶಿಸಲು ಹಾಗೂ ಒಂದು ವೇಳೆ, ಸರ್ಕಾರಿ ನೌಕರರ ವಿರುದ್ಧ ಮಾಡಲಾದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಕಠಿಣ ದಂಡನೆಯನ್ನು ವಿಧಿಸಬಹುದಾದ ಪುಕರಣವೆಂದು ಕಂಡು ಬಂದಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗಿಕಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು,1957ರ ನಿಯಮ 14ಎ ರ ಉಪನಿಯಮ (2)(ಎ) ರನ್ವಯ ಇಲಾಖಾ ವಿಚಾರಣೆ ಮಾಡಲು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ವಹಿಸುವಂತೆ ಸಕ್ಷಮ ಪ್ರಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ.
ಲೋಕಾಯುಕ್ತ ಸಂಸ್ಥೆಯಿಂದ ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಹಾಗೂ ಇತರೆ ಆರೋಪಗಳ ಕುರಿತಂತೆ ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14ಎ ರಡಿಯಲ್ಲಿ ವಿಚಾರಣೆಯನ್ನು ನಡೆಸಲು ಲೋಕಾಯುಕ್ತ ಸಂಸ್ಥೆಗೆ ವಹಿಸುವ ಸಂದರ್ಭದಲ್ಲಿ ಅದೇ ಆರೋಪಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖಾ ವಿಚಾರಣೆ ನಡೆಯುತ್ತಿದ್ದರೆ ಅಥವಾ ಮುಕ್ತಾಯಗೊಂಡಿದ್ದರೆ ಅಂತಹ ಪಕರಣಗಳನ್ನು ಪರಿಶೀಲನೆ ನಡೆಸದ ಯಾಂತ್ರಿಕವಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸುತ್ತಿರುವುದು ಕಂಡು ಬಂದಿರುತ್ತದೆ ಎಂದು ಲೋಕಾಯುಕ್ತ ಸಂಸ್ಥೆಯು ಸ್ಪಷ್ಟಪಡಿಸುತ್ತಾ ಇಂತಹ ಸಂದರ್ಭಗಳಲ್ಲಿ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ತಿಳಿಸುವಂತೆ ಕೋರಲಾಗಿದೆ.
* ಇಲಾಖಾ ವಿಚಾರಣೆಯನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವಹಿಸುವ ಪೂರ್ವದಲ್ಲಿ ಸದರಿ ನೌಕರರ ವಿರುದ್ಧ ಲೋಕಾಯುಕ್ತದ 12(3)ರ ತನಿಖಾ ವರದಿಯಲ್ಲಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆದಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ ಖಚಿತವಡಿಸಿಕೊಳ್ಳುವುದು.
* ಒಂದು ವೇಳೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣ ನಡೆದಿದ್ದರೆ, ಅದರ ಸಂಬಂಧ ಹೊರಡಿಸಿರುವ ಅಂತಿಮ ಆದೇಶದ ಪ್ರತಿಯನ್ನು ಲಗತ್ತಿಸಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಮಾಹಿತಿ ಬದಗಿಸುವುದು.
* ಮೇಲ್ಕಂಡಂತೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿ ಇಲಾಖಾ ಆರಂಭಗೊಂಡು ಇತ್ಯರ್ಥವಾಗದೇ ಇದ್ದ ಸಂದರ್ಭದಲ್ಲಿ ಇಲಾಖಾ ವಿಚಾರಣೆಯ ಪ್ರಸ್ತುತ ಹಂತದ ಮಾಹಿತಿಯನ್ನು ತಿಳಿಸುವುದು.
* ಒಂದು ವೇಳೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖೆ ವಿಚಾರಣೆ ನಡೆಯುತ್ತಿದ್ದಲ್ಲಿ ಹಾಗೂ ಸರ್ಕಾರವು ಈ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸಬೇಕೆಂದು ನಿರ್ಧರಿಸಿದಲ್ಲಿ ಇಲಾಯ ವಿಚಾರಣೆಯನ್ನು ಮುಕ್ತಾಯಗೊಳಿಸಿ ಆದೇಶಿಸುವುದು. ಆ ಬಳಿಕವಷ್ಟೇ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸಿ ಆದೇಶ ಹೊರಡಿಸುವುದು.
* ಮೇಲ್ಕಂಡ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರವಷ್ಟೇ ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು. 1957ರ ನಿಯಮ 14ಎ ರನ್ವಯ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವಹಿಸಲು ಕ್ರಮ ವಹಿಸುವುದು.
ಈ ಅಂಶಗಳ ಹಿನ್ನಲೆಯಲ್ಲಿ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕ ವೃಂದದ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿಗದಿಪಡಿಸಲಾದ ಕಾಲಮಿತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರದ ಸುತ್ತೋಲೆಯಲ್ಲಿ ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ನೀಡಿರುವ ತನಿಖಾ ವರದಿಯನ್ನು ಪರಿಶೀಲಿಸಿದ ನಂತರ ಇಲಾಖಾ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸುವ ಸಂದರ್ಭದಲ್ಲಿ ಅನುಸರಿಸಲು ನೀಡಿರುವ ಸೂಚನೆಗಳಂತೆ ಕ್ರಮ ಕೈಗೊಳ್ಳಲು ಆಯುಕ್ತರು, ಪಂಚಾಯತ್ ರಾಜ್, ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಗಳ ಉಪ ಕಾರ್ಯದರ್ಶಿ (ಅಭಿವೃದ್ಧಿ) ರವರು ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದೆ.












Click it and Unblock the Notifications