Dengue: ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಆರ್ಭಟ! ದಾಖಲಾದ ಪ್ರಕರಣಗಳೆಷ್ಟು?
ರಾಜ್ಯದಲ್ಲಿ ಸೈಲೆಂಟ್ ಆಗಿದ್ದ ಡೆಂಗ್ಯೂ ಮತ್ತೊಮ್ಮೆ ಅಬ್ಬರಿಸಲು ಶುರು ಮಾಡಿದೆ. ಕಳೆದ ತಿಂಗಳು ಕೂಡ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಮಿತಿಮೀರಿತ್ತು. ಬಳಿಕ ಒಂದೆರಡು ವಾರಗಳ ಮಟ್ಟಿಗೆ ತಗ್ಗಿದ್ದ ಪ್ರಕರಣಗಳು ಮತ್ತೆ ಏರತೊಡಗಿವೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 91 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ. ಈವರೆಗೆ ಒಟ್ಟು 29,611 ಪ್ರಕರಣಗಳು ದಾಖಲಾಗಿದ್ದು, 683 ಡೆಂಗ್ಯೂ ಪ್ರಕರಣಗಳು ಸಕ್ರಿಯವಾಗಿವೆ.

ಬಿಬಿಎಂಪಿ ಅಂದರೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ 38 ಡೆಂಗ್ಯೂ ಕೇಸ್ ಪತ್ತೆಯಾಗಿವೆ. ಈ ವರ್ಷದ ಆರಂಭದಿಂದಲೂ ಇಲ್ಲಿವರೆಗೆ ಒಟ್ಟು 9,035 ಡೆಂಗ್ಯೂ ಕೇಸ್‌ಗಳು ಸಿಲಿಕಾನ್ ಸಿಟಿಯಲ್ಲಿ ವರದಿಯಾಗಿವೆ.
ಕಳೆದ ತಿಂಗಳು ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಪ್ರಕರಣಗಳ ಹೆಚ್ಚಾದ ಹಿನ್ನೆಲೆ ಡೆಂಗ್ಯೂ ಜ್ವರವನ್ನು ʼಸಾಂಕ್ರಾಮಿಕ ರೋಗʼ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರವು ಗೆಜೆಟ್ ಅಧಿಸೂಚನೆ ಕೂಡ ಪ್ರಕಟಿಸಿತ್ತು. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿ, ಅಧಿಸೂಚನೆ ಹೊರಡಿಸಿತ್ತು.

ಡೆಂಗ್ಯೂ ಲಕ್ಷಣಗಳು: ಸ್ನಾಯು ಮತ್ತು ಕೀಲು ನೋವು, ತೀವ್ರ ತಲೆನೋವು, ಅಧಿಕ ಜ್ವರ, ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ದದ್ದುಗಳು ಬರುವುದು, ವಾಕರಿಕೆ ಮತ್ತು ವಾಂತಿ ಬರುವುದು, ಗ್ರಂಥಿಗಳು ಊದಿಕೊಳ್ಳುವುದು. ಒಂದು ವೇಳೆ ನಿಮ್ಮಲ್ಲೂ ಈ ಲಕ್ಷಣಗಳು ಕಂಡು ಬಂದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
ಮಳೆಗಾಲ ಆಗಿರುವುದರಿಂದ ನಿಮ್ಮ ಮನೆಯ ಸುತ್ತ ನೀರು ನಿಂತುಕೊಳ್ಳದಂತೆ ಎಚ್ಚರ ವಹಿಸಬೇಕು. ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಹೊತ್ತು ಸೊಳ್ಳೆ ಬತ್ತಿ ಹಚ್ಚಬೇಕು. ಸೊಳ್ಳೆ ಪರದೆಯನ್ನೂ ಸುರಕ್ಷತೆಗೆ ಬಳಸಿಕೊಳ್ಳಬಹುದು. ಕೈ, ಕಾಲಿಗೆ ಸೊಳ್ಳೆ ನಿವಾರಕ ಲೋಶನ್ ಅಥವಾ ತೆಂಗಿನ ಎಣ್ಣೆ ಹಚ್ಚಿಕೊಳ್ಳಬಹುದು.
ಸಾಧ್ಯವಾದಷ್ಟು ಮೈ ತುಂಬಾ ಬಟ್ಟೆ ಧರಿಸುವುದು ಒಳ್ಳೆಯದು. ಡೆಂಗ್ಯೂ ಜ್ವರದ ಲಕ್ಷಣ ಕಂಡುಬಂದರೆ ಗಾಬರಿಯಾಗದೆ, ವೈದ್ಯರನ್ನು ಭೇಟಿ ಮಾಡಬೇಕು. ಅವರ ಸೂಚನೆಯನ್ನು ಸರಿಯಾಗಿ ಪಾಲಿಸಿದರೆ ಡೆಂಗ್ಯೂದಿಂದ ಶೀಘ್ರ ಗುಣಮುಖರಾಗಬಹುದು. ಇದೀಗ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವುದರಿಂದ ತಪ್ಪದೇ ಎಚ್ಚರ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಸೊಳ್ಳೆಗಳ ಲಾರ್ವಾಗಳು ಕೊಚ್ಚಿಕೊಂಡು ಹೋಗುತ್ತಿವೆ. ಇದರಿಂದಾಗಿ ಪ್ರತಿನಿತ್ಯ ದಾಖಲಾಗುತ್ತಿದ್ದ ಡೆಂಗ್ಯೂ ಸರಾಸರಿ ಕೇಸ್‌ಗಳ ಸಂಖ್ಯೆ ತಗ್ಗಿತ್ತು. ಆದರೂ ಮೊನ್ನೆ ಸುರಿದ ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿರುವುದರಿಂದ ಡೆಂಗ್ಯೂ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಸಾಧ್ಯವಾದಷ್ಟು ಡೆಂಗ್ಯೂ ಜ್ವರದಿಂದ ಪಾರಾಗಲು ಎಚ್ಚರ ವಹಿಸಿ..











Click it and Unblock the Notifications