ದೀಪಾವಳಿ ಹಬ್ಬದ ಹೊತ್ತಲ್ಲೇ ಖಾಸಗಿ ಬಸ್ ದರ ಹೆಚ್ಚಿಸಿದ್ರೆ ಲೈಸೆನ್ಸ್ ರದ್ದು: ಸಾರಿಗೆ ಇಲಾಖೆ ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 26: ದೀಪಾವಳಿ ಹಬ್ಬ ವಾರಾಂತ್ಯದ ವೇಳೆ ಬಂದಿರುವುದರಿಂದ ಸಾಲು ಸಾಲು ರಜೆಗಳಿವೆ. ವಾರಾಂತ್ಯದಲ್ಲಿ ಸಾಲು ಸಾಲು ರಜೆಗಳು ಇರುವ ಕಾರಣದಿಂದಾಗಿ ಖಾಸಗಿ ಬಸ್ ಗಳು ದುಬಾರಿ ದರವನ್ನು ಏರಿಕೆ ಮಾಡಿ, ಪ್ರಯಾಣಿಕರಿಗೆ ಬರೆ ಎಳೆದರೇ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ದೀಪಾವಳಿ ಹಬ್ಬದ ಹೊತ್ತಲ್ಲೇ ಖಾಸಗಿ ಬಸ್ ಗಳು ದರ ಹೆಚ್ಚಿಸುವಂತಿಲ್ಲ. ನಿಯಮ ಮೀರಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದರೇ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಖಾಸಗಿ ಬಸ್ ರಹದಾರಿ ಸೇರಿದಂತೆ ಲೈಸೆನ್ಸ್ ಕೂಡ ರದ್ದುಪಡಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದೆ. ರಾಜ್ಯದ ಜನರು ಖಾಸಗಿ ಬಸ್ ಗಳು ದುಬಾರಿ ಪ್ರಯಾಣದರವನ್ನು ವಸೂಲಿ ಮಾಡುತ್ತಿದ್ದರೇ ಸಾರಿಗೆ ಇಲಾಖೆಯ ಸಹಾಯವಾಣಿ ಸಂಖ್ಯೆ 9449863429, 9449863426 ಗೆ ಕರೆ ಮಾಡಿ ದೂರು ನೀಡುವಂತೆ ಮನವಿ ಮಾಡಿದೆ.

ಸಾರಿಗೆ ಇಲಾಖೆ ಹೇಳಿದ್ದೇನು?
ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ ಸರದಿ ರಜೆಗಳು ಬರುವುದರಿಂದ ಸಾರ್ವಜನಿಕರು ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ, ಕೆಲವು ಖಾಸಗಿ ಪ್ರಯಾಣಿಕ ವಾಹನಗಳ ಮಾಲೀಕರು ಹಾಗೂ ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕಿಂಗ್ ಸಂದರ್ಭಗಳಲ್ಲಿ ಪ್ರಯಾಣ ದರಗಳನ್ನು ಎರಡು- ಮೂರು ಪಟ್ಟು ಹೆಚ್ಚಳ ಮಾಡಿ ಸಂಗ್ರಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ದಿನಾಂಕ: 25-10-2024ರಂದು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರ ಅಧ್ಯಕ್ಷತೆಯಲ್ಲಿ ಹಾಗೂ ಅಪರ ಸಾರಿಗೆ ಆಯುಕ್ತರು (ಪ್ರವರ್ತನ) (ದಕ್ಷಿಣ), ಇವರ ಉಪಸ್ಥಿತಿಯಲ್ಲಿ ಖಾಸಗಿ ಬಸ್ ಮಾಲೀಕರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾಮಾನ್ಯ ದರಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ಪಡೆಯದಂತೆ ನಿರ್ದೇಶನ ನೀಡಲಾಗಿರುತ್ತದೆ.
ಆದಾಗ್ಯೂ ದುಪ್ಪಟ್ಟು ಹಣವನ್ನು ಸಂಗ್ರಹಸಿ ಸಾರ್ವಜನಿಕರಿಗೆ ಅನಾನುಕೂಲತೆ ಉಂಟು ಮಾಡುವಂತಹ ವಾಹನಗಳ ಮಾಲೀಕರ ಮೇಲೆ ರಹದಾರಿ (ಪರ್ಮಿಟ್) ಮತ್ತು ನೋಂದಣಿ ಪತ್ರವನ್ನು (ಆರ್.ಸಿ) ಅಮಾನತ್ತುಪಡಿಸಲು ಹಾಗೂ ಟಿಕೆಟ್ ವಿತರಕರು (ಟಿಕೆಟ್ ಬುಕ್ಕಿಂಗ್ ಆಪ್) ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಟಿಕೆಟ್ ಮುಂಗಡ ಬುಕಿಂಗ್ ಮಾಡುವ ಸಂದರ್ಭದಲ್ಲಿ ಅನಧಿಕೃತ ಅಪ್ಗಳ ಬಗ್ಗೆ ಎಚ್ಚರಿಕೆ ವಹಿಸಲು ಸಹ ಈ ಮೂಲಕ ತಿಳಿಸಲಾಗಿದೆ.
ಇದಲ್ಲದೆ ಪ್ರಯಾಣಿಕ ಸೇವಾ ವಾಹನಗಳಲ್ಲಿ ಅನಧಿಕೃತವಾಗಿ ಸ್ಪೋಟಕ ಸಾಮಾಗ್ರಿಗಳು ಹಾಗೂ ಇತರೆ ಸರಕು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ವಾಹನ ಮಾಲೀಕರುಗಳ ವಿರುದ್ಧ ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.
ಖಾಸಗಿ ಬಸ್ ಸಂಘಗಳು ಸಾಮಾನ್ಯಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ಸಂಗ್ರಹಿಸುವುದು ಕಂಡುಬಂದಲ್ಲಿ ಸಾರ್ವಜನಿಕರು ನಾರಿಗೆ ಇಲಾಖೆಯ ಈ ಕೆಳಕಂಡ ನಿಯಂತ್ರಣ ಕೊಠಡಿಗೆ ಕಛೇರಿಯ ಸಮಯದಲ್ಲಿ ಕರೆ ಮಾಡಿ ದೂರು ನೀಡಬಹುದು ಅಥವಾ ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳಿಗೆ ದೂರು ದಾಖಲಿಸಬಹುದಾಗಿರುತ್ತದೆ.












Click it and Unblock the Notifications