ದೀಪಾವಳಿ ಹಬ್ಬಕ್ಕೆ KSRTCಯಿಂದ 1,500 ವಿಶೇಷ ಬಸ್ ವ್ಯವಸ್ಥೆ
ಬೆಂಗಳೂರು, ಅಕ್ಟೋಬರ್ 17: ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಒಟ್ಟು ಸುಮಾರು 1,500 ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಪ್ರಯಾಣಿಕರು ಬೆಂಗಳೂರಿನಿಂದ ದೂರದ ಊರುಗಳಿಗೆ ಹೋಗಲು ಮತ್ತೆ ಹಬ್ಬದ ಬಳಿಕ ಪುನಃ ರಾಜಧಾನಿಗೆ ಬರಲು ಅನುಕೂಲವಾಗುವಂತೆ ಈ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇಷ್ಟು ಬಸ್‌ಗಳು ಎರಡು ಹಂತದಲ್ಲಿ ಕಾರ್ಯಾಚರಣೆ ನಡೆಸಲಿವೆ. ದೀಪವಾಳಿಗೂ ಮುನ್ನ ಅಕ್ಟೋಬರ್ 21ರಿಂದ ಅಕ್ಟೋಬರ್ 23ರವರೆಗೆ ಬೆಂಗಳೂರಿನ ವಿವಿಧ ನಿಲ್ದಾಣಗಳಿಂದ ಸಾಗಲಿವೆ. ನಂತರ ಹಬ್ಬದ ಮುಗಿದ ನಂತರ ಅಕ್ಟೋಬರ್ 26ರಿಂದ ಅಕ್ಟೋಬರ್ 30ರವರೆಗೆ ರಾಜ್ಯ ಹಾಗೂ ಹೊರಾಜ್ಯಗಳಿಂದ ಬೆಂಗಳೂರಿಗೆ ಕಾರ್ಯಾಚರಣೆ ನಡೆಸಲಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಮಡಿಕೇರಿ, ಶೃಂಗೇರಿ, ಹೊರನಾಡು, ಮಂಗಳೂರು, ಕೊಲ್ಲೂರು, ದಾವಣಗೆರೆ, ಗೋಕರ್ಣ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಹೀಗೆ ರಾಜ್ಯ ಅನೇಕ ಸ್ಥಳಗಳಿಗೆ ವಿಶೇಷ ಬಸ್‌ಗಳು ಸಂಪರ್ಕ ಕಲ್ಪಿಸಲಿವೆ. ಜೊತೆಗೆ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪುಣೆ ಹಾಗೂ ಇನ್ನಿತರ ನೆರೆರಾಜ್ಯಗಳ ಸ್ಥಳಗಳಿಗೂ ಈ ವಿಶೇಷ ಬಸ್‌ಗಳು ಸಾರಿಗೆ ಸೇವೆ ನೀಡಲಿವೆ.

ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದ ಜೊತೆಗೆ ನಗರದ ಮೈಸೂರು ರಸ್ತೆ, ಸ್ಯಾಟ್‌ಲೈಟ್, ವಿಜಯನಗರ (ಟಟಿಎಂಸಿ), ಜಯನಗರ 4ನೇ ಬ್ಲಾಕ್ (ಟಟಿಎಂಸಿ), ನವರಂಗ್ (ರಾಜಾಜಿನಗರ), ಕೆಂಗೇರಿ ಉಪನಗರ ಸೇರಿದಂತೆ ಮುಂತಾದ ಸ್ಥಳಗಳಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ವಿಶೇಷ ಬಸ್‌ಗಳು ಸಂಚರಿಸಲಿವೆ. ಹೆಚ್ಚುವರಿ ಬಸ್‌ಗಳಿಗೆ ಸಾಮಾನ್ಯ ಬಸ್‌ಗಳಂತೆ ಮುಂಗಡವಾಗಿಯೂ ಆಸನ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಕಾಯ್ದಿರಿಸಿದ ನಂತರ ಸಾರ್ವಜನಿಕರು ಪಿಕ್‌ಅಪ್ ಮತ್ತು ಡ್ರಾಪ್ ಪಾಯಿಂಟ್‌ಗಳನ್ನು ಗಮನಿಸಬೇಕು ಎಂದು ನಿಗಮ ತಿಳಿಸಿದೆ.
ಮುಂಗಡ ಟಿಕೇಟ್ ಬುಕ್ಕಿಂಗ್: ಶೇ.5-10 ರಿಯಾಯಿತಿ ಲಭ್ಯ
ಕೆಎಸ್‌ಆರ್‌ಟಿಸಿಯು ಇ-ಟಿಕೇಟ್ ಬುಕಿಂಗ್ ಅವಕಾಶ ಕಲ್ಪಿಸಿದ್ದು, ನಿಗಮದ ಅಧಿಕೃತ ವೆಬ್‌ಸೈಟ್ (www ksrtc.karnataka.gov.in) ಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬೇಕು. ನಾಲ್ಕು ಇಲ್ಲವೇ ನಾಲ್ಕಕ್ಕಿಂತ ಪ್ರಯಾಣಿಕರು ಒಟ್ಟಾಗಿ ಮುಂಗಡವಾಗಿ ಒಂದು ಬದಿ ಆಸನ ಕಾಯ್ದಿರಿಸಿದರೆ ಶೇ.5 ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಅದೇ ಹೋಗುವ ಮತ್ತು ಬರುವ ಸೇರಿ ಎರಡು ಬದಿಯ ಪ್ರಯಾಣದ ಟಿಕೆಟ್‍ನ್ನು ಒಟ್ಟಿಗೆ ಕಾಯ್ದಿರಿಸಿದರೆ ಅವರಿಗೆ ಶೇ.10ರಷ್ಟು ರಿಯಾಯಿತಿಯನ್ನು ಕೆಎಸ್‌ಆರ್‌ಟಿಸಿ ಘೋಷಿಸಿದೆ. ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್‌ಗೆ ಭೇಟಿ ನೀಡಲು ಕೋರಿದೆ.

ಮುಖ್ಯವಾಗಿ ತಮಿಳುನಾಡು, ಪದುಚೇರಿ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳ ಪ್ರಮುಖ ನಗರಗಳಲ್ಲೂ ಆಸನ ಕಾಯ್ದಿರಿಸಲು ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.












Click it and Unblock the Notifications